
ಭಾರತ ಮತ್ತು ಜಿಂಬಾಬ್ವೆ ಮಹಿಳಾ ತಂಡಗಳ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ವಡೋದರದ ಕೋಟಂಬಿಯಲ್ಲಿರುವ BCA ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಮಾಜಿ ನಾಯಕಿ ಹರ್ಮನ್‌ಪ್ರೀತ್ ಕೌರ್ ತಮ್ಮ ಏಕದಿನ ವೃತ್ತಿಜೀವನದ 8ನೇ ಶತಕ ಸಿಡಿಸಿ ಮಿಂಚಿದ್ದಾರೆ. ಕೇವಲ 19 ರನ್‌ಗಳಿಗೆ ನಾಯಕಿ ಸ್ಮೃತಿ ಮಂಧಾನ ಹಾಗೂ ಶಫಾಲಿ ವರ್ಮಾ ಅವರ ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿದ್ದ ತಂಡದ ಇನ್ನಿಂಗ್ಸ್ ನಿಭಾಯಿಸಿದ ಹರ್ಮನ್ ಮೊದಲಿಗೆ ಪ್ರತೀಕಾ ರಾವಲ್ ಅವರೊಂದಿಗೆ ಮೂರನೇ ವಿಕೆಟ್ಗೆ ಶತಕದ ಜೊತೆಯಾಟ ನಡೆಸಿದರು. ಆ ಬಳಿಕ ಆಲ್‌ರೌಂಡರ್ ದೀಪ್ತಿ ಶರ್ಮಾ ಜೊತೆಗೂಡಿ ಮತ್ತೊಂದು ಶತಕದ ಜೊತೆಯಾಟವನ್ನಾಡಿ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.
ಹರ್ಮನ್‌ಪ್ರೀತ್ ಕೌರ್ ಇತ್ತೀಚೆಗಷ್ಟೇ ನಾಯಕತ್ವ ಕಳೆದುಕೊಂಡಿದ್ದರು. ಈ ವಿಚಾರವಾಗಿ ಹಲವು ಚರ್ಚೆಗಳು ಕೂಡ ನಡೆದಿದ್ದವು. ಆದರೆ ಈಗ ನಾಯಕತ್ವದ ಒತ್ತಡದಿಂದ ಹೊರಬಂದಿರುವ ಹರ್ಮನ್‌ಪ್ರೀತ್ ಬ್ಯಾಟಿಂಗ್‌ನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡುತ್ತಿರುವಂತೆ ಕಾಣುತ್ತಿದೆ. ಜಿಂಬಾಬ್ವೆ ಮಹಿಳಾ ತಂಡದ ವಿರುದ್ಧದ ಟಿ20 ಸರಣಿಯಲ್ಲಿ 91 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದ ಅವರು, ಇದೀಗ ಏಕದಿನ ಸರಣಿಯಲ್ಲೂ ಅದ್ಭುತ ಶತಕ ಸಿಡಿಸಿ ಮಿಂಚಿದ್ದಾರೆ. ಅಷ್ಟೇ ಅಲ್ಲ, ಈ ಮೂಲಕ ಭಾರತದ ದಿಗ್ಗಜ ಆಟಗಾರ್ತಿ ಮಿಥಾಲಿ ರಾಜ್ ಅವರ ದಾಖಲೆಯನ್ನೂ ಹಿಂದಿಕ್ಕಿದ್ದಾರೆ.
ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಕಡಿಮೆ ಗುರಿಯನ್ನು ಬೆನ್ನಟ್ಟಿದ್ದರಿಂದ ಹರ್ಮನ್‌ಪ್ರೀತ್‌ಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಆದರೆ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಕೇವಲ 19 ರನ್‌ಗಳಿಗೆ ನಾಯಕಿ ಸ್ಮೃತಿ ಮಂಧಾನ ಸೇರಿದಂತೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಹರ್ಮನ್‌ಪ್ರೀತ್ ಮೇಲೆ ತಂಡವನ್ನು ಸಂಕಷ್ಟದಿಂದ ಪಾರು ಮಾಡುವ ಜವಾಬ್ದಾರಿ ಇತ್ತು.
ಹಿಂದೆ ನಾಯಕಿಯಾಗಿದ್ದಾಗಲೂ ಹಲವು ಬಾರಿ ತಂಡಕ್ಕೆ ಆಸರೆಯಾಗಿದ್ದ ಹರ್ಮನ್‌ಪ್ರೀತ್, ಈ ಬಾರಿ ನಾಯಕತ್ವದ ಜವಾಬ್ದಾರಿಯಿಲ್ಲದೆ ಕಣಕ್ಕಿಳಿದು ತಮ್ಮ ಸಾಮರ್ಥ್ಯ ಏನೆಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಮೊದಲು ಪ್ರತೀಕಾ ರಾವಲ್ ಜೊತೆಗೂಡಿ ಶತಕದ ಜೊತೆಯಾಟವಾಡಿದ ಅವರು, ಬಳಿಕ ದೀಪ್ತಿ ಶರ್ಮಾ ಜೊತೆಗೂಡಿ ಮತ್ತೊಂದು ಶತಕದ ಜೊತೆಯಾಟ ಕಟ್ಟಿದರು. ಈ ಮೂಲಕ ತಂಡದ ಇನ್ನಿಂಗ್ಸ್‌ಗೆ ಬಲ ತುಂಬಿದ್ದಲ್ಲದೆ, ಭಾರತವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ದರು. ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ ಹರ್ಮನ್‌ಪ್ರೀತ್ ಕೌರ್, ಕೇವಲ 101 ಎಸೆತಗಳಲ್ಲಿ ತಮ್ಮ ಶತಕ ಪೂರ್ಣಗೊಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 12 ಬೌಂಡರಿಗಳು ಸೇರಿದ್ದವು.
ನಾಯಕತ್ವ ತ್ಯಜಿಸಿದ ಬಳಿಕ ಭರ್ಜರಿ ಬ್ಯಾಟಿಂಗ್: 91 ರನ್ ಸಿಡಿಸಿ ಕಣ್ಣೀರಿಟ್ಟ ಹರ್ಮನ್‌ಪ್ರೀತ್ ಕೌರ್!
ಹರ್ಮನ್‌ಪ್ರೀತ್ ಕೌರ್ ಅವರ ಈ ಶತಕ ಬರೋಬ್ಬರಿ 15 ತಿಂಗಳ ಕಾಯುವಿಕೆಗೆ ತೆರೆ ಎಳೆದಿದೆ. ಇದಕ್ಕೂ ಮೊದಲು ಅವರು 2025ರ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದ್ದರು. ಇದೀಗ ಜಿಂಬಾಬ್ವೆ ವಿರುದ್ಧದ ಶತಕದೊಂದಿಗೆ ಹರ್ಮನ್‌ಪ್ರೀತ್ ತಮ್ಮ ಏಕದಿನ ಅಂತಾರಾಷ್ಟ್ರೀಯ ವೃತ್ತಿಜೀವನದ 8ನೇ ಶತಕ ದಾಖಲಿಸಿದ್ದಾರೆ. ಈ ಸಾಧನೆಯೊಂದಿಗೆ ಭಾರತದ ಪರ ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರ್ತಿಯರ ಪಟ್ಟಿಯಲ್ಲಿ ಹರ್ಮನ್‌ಪ್ರೀತ್ ಎರಡನೇ ಸ್ಥಾನಕ್ಕೇರಿದ್ದಾರೆ. ಈ ಹಿಂದೆ 7 ಶತಕಗಳನ್ನು ಬಾರಿಸಿದ್ದ ಮಾಜಿ ನಾಯಕಿ ಮಿಥಾಲಿ ರಾಜ್ ಅವರನ್ನು ಅವರು ಹಿಂದಿಕ್ಕಿದ್ದಾರೆ.
ಸದ್ಯ ಈ ಪಟ್ಟಿಯಲ್ಲಿ 14 ಶತಕಗಳೊಂದಿಗೆ ಭಾರತದ ನೂತನ ನಾಯಕಿ ಸ್ಮೃತಿ ಮಂಧಾನ ಮೊದಲ ಸ್ಥಾನದಲ್ಲಿದ್ದಾರೆ. ಇದೀಗ ಹರ್ಮನ್‌ಪ್ರೀತ್ ಅವರ ಬ್ಯಾಟ್ ಮತ್ತೆ ಘರ್ಜಿಸುತ್ತಿದ್ದು, ನಾಯಕತ್ವದಿಂದ ದೂರವಾದ ಬಳಿಕ ಅವರ ಆಟ ಮತ್ತಷ್ಟು ಸುಧಾರಿಸಿದೆಯೇ ಎಂಬ ಚರ್ಚೆಯೂ ಶುರುವಾಗಿದೆ.
Published On - 5:09 pm, Sun, 25 October 26