ನೈಟ್ ಕ್ಲಬ್ ಫೈಟ್​​: ಸಹ ಆಟಗಾರರನ್ನು ರಕ್ಷಿಸಲು ಸುಳ್ಳು ಹೇಳಿದ ಬ್ರೂಕ್

Harry Brook: ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ಇತ್ತೀಚೆಗೆ ನೈಟ್ ಕ್ಲಬ್​​ನಲ್ಲಿ ಮಾಡಿದ ಫೈಟ್. ಅಂದರೆ ವೆಲ್ಲಿಂಗ್ಟನ್​ನಲ್ಲಿನ ನೈಟ್ ಕ್ಲಬ್​ವೊಂದಕ್ಕೆ ತೆರಳಿದ್ದ ಹ್ಯಾರಿ ಬ್ರೂಕ್ ಅಲ್ಲಿನ ಬೌನ್ಸರ್​ ಜೊತೆ ಹೊಡೆದಾಡಿಕೊಂಡಿದ್ದರು. ಇದೀಗ ಈ ವಿಚಾರವಾಗಿ ಬ್ರೂಕ್ ಮನಬಿಚ್ಚಿ ಮಾತನಾಡಿದ್ದಾರೆ.

ನೈಟ್ ಕ್ಲಬ್ ಫೈಟ್​​: ಸಹ ಆಟಗಾರರನ್ನು ರಕ್ಷಿಸಲು ಸುಳ್ಳು ಹೇಳಿದ ಬ್ರೂಕ್
Harry Brook

Updated on: Jan 31, 2026 | 12:58 PM

ಇಂಗ್ಲೆಂಡ್ ತಂಡದ ನಾಯಕ ಹ್ಯಾರಿ ಬ್ರೂಕ್ ಪ್ರಸ್ತುತ ಶ್ರೀಲಂಕಾದಲ್ಲಿದ್ದಾರೆ. ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸುತ್ತಿರುವ ಬ್ರೂಕ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಹೀಗೆ ಸುದ್ದಿಯಾಗಲು ಮುಖ್ಯ ಕಾರಣ ನೈಟ್ ಕ್ಲಬ್ ಫೈಟ್. ನ್ಯೂಝಿಲೆಂಡ್ ವಿರುದ್ಧದ ಸರಣಿ ವೇಳೆ ಬ್ರೂಕ್ ನೈಟ್ ಕ್ಲಬ್​ನಲ್ಲಿ ಗಲಾಟೆ ಮಾಡಿಕೊಂಡಿದ್ದರು.

ನ್ಯೂಝಿಲೆಂಡ್ ವಿರುದ್ಧದ ಸರಣಿ ವೇಳೆ ವೆಲ್ಲಿಂಗ್ಟನ್​ನಲ್ಲಿನ ನೈಟ್ ಕ್ಲಬ್​ಗೆ ತೆರಳಿದ್ದ ಹ್ಯಾರಿ ಬ್ರೂಕ್ ಅಲ್ಲಿನ ಬೌನ್ಸರ್​ ಜೊತೆ ಹೊಡೆದಾಡಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ ಬ್ರೂಕ್ ಅವರನ್ನು ವಿಚಾರಣೆಗೆ ಒಳಪಡಿಸಿ 36 ಲಕ್ಷ ರೂ. ದಂಡ ವಿಧಿಸಿದ್ದರು.

ಇದೀಗ ಈ ಕಹಿಘಟನೆಯ ಬಗ್ಗೆ ಹ್ಯಾರಿ ಬ್ರೂಕ್ ಮನಬಿಚ್ಚಿ ಮಾತನಾಡಿದ್ದಾರೆ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ನೈಟ್ ಕ್ಲಬ್ ಫೈಟ್ ಬಗ್ಗೆ ಪ್ರಸ್ತಾಪಿಸಿರುವ ಬ್ರೂಕ್, ಅಂದು ತನ್ನೊಂದಿಗೆ ಇನ್ನಿಬ್ಬರಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಇದಾಗ್ಯೂ ನಾನು ಅವರ ಹೆಸರನ್ನು ಬಹಿರಂಗಪಡಿಸಿಲ್ಲ ಎಂದು ತಿಳಿಸಿದ್ದಾರೆ.

ಬೌನ್ಸರ್​ ಜೊತೆ ಜಗಳವಾದಾಗ, ನಾನು ಮದ್ಯಾಪನ ಮಾಡಿದ್ದೆ. ಈ ವೇಳೆ ತನ್ನೊಂದಿಗಿದ್ದ ತಂಡದ ಸದಸ್ಯರನ್ನು ರಕ್ಷಿಸಲು ಸುಳ್ಳು ಹೇಳಿದ್ದೆ. ಅಂದು ನಾನೊಬ್ಬನೇ ನೈಟ್ ಕ್ಲಬ್​ಗೆ ತೆರಳಿದ್ದೆ ಎಂದು ತಿಳಿಸಿದ್ದೆ. ಈ ಹೇಳಿಕೆಯೊಂದಿಗೆ ನಾನು ಸಹ ಆಟಗಾರರನ್ನು ಈ ಪ್ರಕರಣದಿಂದ ಹೊರಗಿಟ್ಟಿದ್ದೆ ಎಂದು ಬ್ರೂಕ್ ತಿಳಿಸಿದ್ದಾರೆ.

ದಿ ಟೆಲಿಗ್ರಾಫ್ ವರದಿ ಪ್ರಕಾರ, ನೈಟ್ ಕ್ಲಬ್ ಫೈಟ್ ವೇಳೆ ಹ್ಯಾರಿ ಬ್ರೂಕ್ ಜೊತೆ ಜೇಕಬ್ ಬೆಥೆಲ್ ಮತ್ತು ಜೋಶ್ ಟಂಗ್ ಜೊತೆಗಿದ್ದರು. ಇದೀಗ ಬ್ರೂಕ್ ಕೂಡ ಜಗಳವಾದ ತನ್ನೊಂದಿಗೆ ಇಂಗ್ಲೆಂಡ್ ತಂಡದ ಸದಸ್ಯರಿದ್ದರು ಎನ್ನುವ ಮೂಲಕ ಈ ವರದಿಯನ್ನು ಪುಷ್ಠೀಕರಿಸಿದ್ದಾರೆ. ಅಲ್ಲದೆ ಅವರನ್ನು ರಕ್ಷಿಸುವ ಸಲುವಾಗಿ ನಾನು ಹೇಳಿರುವುದಾಗಿ ಬ್ರೂಕ್ ಒಪ್ಪಿಕೊಂಡಿದ್ದಾರೆ.

ಇನ್ನು ವೆಲ್ಲಿಂಗ್ಟನ್‌ನಲ್ಲಿ ನಡೆದ ಕೃತ್ಯಗಳಿಗೆ ನಾನೇ ಜವಾಬ್ದಾರ. ಆ ಸಂಜೆ ಇತರರು ಹಾಜರಿದ್ದರು ಎಂದು ಒಪ್ಪಿಕೊಳ್ಳುತ್ತೇನೆ. ನನ್ನ ಹಿಂದಿನ ಹೇಳಿಕೆಗಳಿಗೆ ನಾನು ವಿಷಾದಿಸುತ್ತೇನೆ, ಮತ್ತು ನನ್ನ ಸ್ವಂತ ನಿರ್ಧಾರಗಳ ಪರಿಣಾಮವಾಗಿ ಉದ್ಭವಿಸಿದ ಪರಿಸ್ಥಿತಿಗೆ ನನ್ನ ತಂಡದ ಸದಸ್ಯರು ಸಿಲುಕದಂತೆ ರಕ್ಷಿಸುವುದು ನನ್ನ ಉದ್ದೇಶವಾಗಿತ್ತು.

ಇದನ್ನೂ ಓದಿ: 6,6,6,6,6,6,6,6,6: ಶರವೇಗದ ಶತಕದೊಂದಿಗೆ ಇತಿಹಾಸ ನಿರ್ಮಿಸಿದ ಹ್ಯಾರಿ ಬ್ರೂಕ್

ಈ ವಿಷಯಗಳಿಗೆ ನಾನು ಕ್ಷಮೆಯಾಚಿಸಿದ್ದೇನೆ. ಅಲ್ಲದೆ ಈ ಘಟನೆಯನ್ನು ವಿಚಾರವನ್ನು ಇಲ್ಲಿಗೆ ನಿಲ್ಲಿಸಲು ಬಯಸುತ್ತೇನೆ. ಇದು ನನ್ನ ವೃತ್ತಿಜೀವನದಲ್ಲಿ ಅತ್ಯಂತ ಸವಾಲಿನ ಅವಧಿ. ಇದರಿಂದ ತುಂಬಾ ಪಾಠ ಕಲಿತಿದ್ದೇನೆ. ಇನ್ಮುಂದೆ ಇಂತಹ ಘಟನೆಗಳನ್ನು ನಡೆಯದಂತೆ ಎಚ್ಚರಿಕೆ ವಹಿಸಿಕೊಳ್ಳುವುದಾಗಿ ಹ್ಯಾರಿ ಬ್ರೂಕ್ ಇದೇ ವೇಳೆ ಹೇಳಿದ್ದಾರೆ.