ಸೋಲಿನ ನಡುವೆ ಭಾರತದ ವಿರುದ್ಧ ಹೊಸ ಇತಿಹಾಸ ಬರೆದ ಹಸನ್ ನವಾಝ್!

ಏಷ್ಯನ್ ಗೇಮ್ಸ್​ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 211 ರನ್ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ್ ತಂಡವು 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 192 ರನ್​ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ 19 ರನ್​ಗಳ ಜಯ ಸಾಧಿಸಿದೆ.

ಸೋಲಿನ ನಡುವೆ ಭಾರತದ ವಿರುದ್ಧ ಹೊಸ ಇತಿಹಾಸ ಬರೆದ ಹಸನ್ ನವಾಝ್!
Hasan Nawaz
Image Credit source: PCB

Updated on: Oct 03, 2026 | 3:19 PM

ಏಷ್ಯನ್ ಗೇಮ್ಸ್​ನ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಭಾರತ ತಂಡ ಭರ್ಜರಿ ಜಯ ಸಾಧಿಸಿದೆ. ಕೊರೊಗಿ ಸ್ಪೋರ್ಟ್ಸ್ ಪಾರ್ಕ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್​ಗಳಲ್ಲಿ 211 ರನ್ ಕಲೆಹಾಕಿತು. ಈ ಕಠಿಣ ಗುರಿ ಬೆನ್ನತ್ತಿದ ಪಾಕಿಸ್ತಾನ್ ಪರ ಮಧ್ಯಮ ಕ್ರಮಾಂಕದ ಬ್ಯಾಟರ್ ಹಸನ್ ನವಾಝ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.

ಆರಂಭದಿಂದಲೂ ಬಿರುಸಿನ ಆಟಕ್ಕೆ ಒತ್ತು ನೀಡಿದ ಹಸನ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಹಾಫ್ ಸೆಂಚುರಿ ಬಳಿಕ ಕೂಡ ಆರ್ಭಟ ಮುಂದುವರೆಸಿದ ಯುವ ದಾಂಡಿಗ 51 ಎಸೆತಗಳಲ್ಲಿ 5 ಫೋರ್ ಹಾಗೂ 7 ಸಿಕ್ಸರ್​ಗಳೊಂದಿಗೆ 96 ರನ್​ ಚಚ್ಚಿದರು. ಈ 96 ರನ್​ಗಳೊಂದಿಗೆ ಹಸನ್ ನವಾಝ್ ಪಾಕ್ ಪರ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಭರ್ಜರಿ ದಾಖಲೆ:

ಈ ಪಂದ್ಯದಲ್ಲಿ ಹಸನ್ ನವಾಝ್ ಬಾರಿಸಿದ 96 ರನ್​ಗಳು ಟೀಮ್ ಇಂಡಿಯಾ ವಿರುದ್ಧ ಪಾಕ್ ದಾಂಡಿಗ ಕಲೆಹಾಕಿದ ಗರಿಷ್ಠ ವೈಯುಕ್ತಿಕ ಟಿ20 ಸ್ಕೋರ್ ಆಗಿದೆ. ಅಂದರೆ ಭಾರತದ ವಿರುದ್ಧ ಪಾಕಿಸ್ತಾನದ ಯಾವುದೇ ಬ್ಯಾಟರ್ 90 ಕ್ಕಿಂತ ಹೆಚ್ಚಿನ ರನ್​ ಗಳಿಸಿದ ಇತಿಹಾಸವೇ ಇರಲಿಲ್ಲ.

ಈ ಹಿಂದೆ 2021ರ ಟಿ20 ವಿಶ್ವಕಪ್‌ನಲ್ಲಿ ಮೊಹಮ್ಮದ್ ರಿಝ್ವಾನ್ ಗಳಿಸಿದ್ದ ಅಜೇಯ 79 ರನ್‌ಗಳು ಭಾರತದ ವಿರುದ್ಧ ಪಾಕ್ ಬ್ಯಾಟರ್ ಟಿ20 ಪಂದ್ಯದಲ್ಲಿ ಕಲೆಹಾಕಿದ ಗರಿಷ್ಠ ವೈಯುಕ್ತಿಕ ಸ್ಕೋರ್ ಆಗಿತ್ತು. ಇದೀಗ ರಿಝ್ವಾನ್ ಅವರ ದಾಖಲೆಯನ್ನು ಅಳಿಸಿ ಹಾಕುವಲ್ಲಿ ಹಸನ್ ನವಾಝ್ ಯಶಸ್ವಿಯಾಗಿದ್ದಾರೆ.

ಭಾರತದ ವಿರುದ್ಧ ಏಕಾಂಗಿ ಹೋರಾಟ ನಡೆಸಿದ ಹಸನ್ ನವಾಝ್ 51 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್​ಗಳೊಂದಿಗೆ 96 ರನ್ ಚಚ್ಚುವ ಮೂಲಕ ಟೀಮ್ ಇಂಡಿಯಾ ವಿರುದ್ಧ ಟಿ20 ಕ್ರಿಕೆಟ್​ನಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಪಾಕ್ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಚಿನ್ನ ಗೆದ್ದ ಟೀಮ್ ಇಂಡಿಯಾ:

ಹಸನ್ ನವಾಝ್ ಅವರ ಈ ದಾಖಲೆಯ ಹೊರತಾಗಿಯೂ ಈ ಪಂದ್ಯದಲ್ಲಿ ಪಾಕಿಸ್ತಾನ್ ತಂಡ ಸೋಲನುಭವಿಸಿದೆ. ಟೀಮ್ ಇಂಡಿಯಾ ನೀಡಿದ 212 ರನ್​ಗಳ ಗುರಿಯನ್ನು ಬೆನ್ನತ್ತಿದ ಪಾಕ್ ಪಡೆ 20 ಓವರ್​ಗಳಲ್ಲಿ 192 ರನ್​ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 19 ರನ್​ಗಳ ಜಯ ಸಾಧಿಸಿರುವ ಟೀಮ್ ಇಂಡಿಯಾ ಏಷ್ಯನ್ ಗೇಮ್ಸ್​ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದೆ. ಅತ್ತ ಸೋತ ಪಾಕಿಸ್ತಾನ್ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

 

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us