AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ವರ್ಷಗಳ ಬಳಿಕ ದಾಖಲೆಯ ಮೊತ್ತ ಪೇರಿಸಿದ ಪಾಕಿಸ್ತಾನ್!

ಕ್ರಿಕೆಟ್‌ನಲ್ಲಿ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಮೈದಾನವೇ ಸಾಕ್ಷಿಯಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 133 ರನ್‌ಗಳಿಗೆ ಆಲೌಟ್ ಆದಾಗ ಪಾಕಿಸ್ತಾನದ ಕಥೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಒತ್ತಡದ ಸಂದರ್ಭದಲ್ಲಿ ಪುಟಿದೆದ್ದ ಪಾಕ್ ಪಡೆ, ಸೋಲಿನ ದವಡೆಯಿಂದ ಪಾರಾಗಲು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಹೋರಾಟ ಪ್ರದರ್ಶಿಸಿ ಸುದ್ದಿಯಾಗಿದ್ದಾರೆ.

10 ವರ್ಷಗಳ ಬಳಿಕ ದಾಖಲೆಯ ಮೊತ್ತ ಪೇರಿಸಿದ ಪಾಕಿಸ್ತಾನ್!
ಪಾಕಿಸ್ತಾನ್-ಇಂಗ್ಲೆಂಡ್Image Credit source: GettyImages
ಝಾಹಿರ್ ಯೂಸುಫ್
|

Updated on: Sep 12, 2026 | 8:02 AM

Share

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಮೂಲಕ ಇತಿಹಾಸ ನಿರ್ಮಿಸಿದೆ. ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಿದ ಪಾಕಿಸ್ತಾನ್ ಬರೋಬ್ಬರಿ 449 ರನ್‌ಗಳ ಬೃಹತ್ ಮೊತ್ತ ಪೇರಿಸಿದೆ. ಇದು ಕಳೆದ ಹತ್ತು ವರ್ಷಗಳಲ್ಲಿ ಇಂಗ್ಲೆಂಡ್ ಮಣ್ಣಿನಲ್ಲಿ ಪಾಕಿಸ್ತಾನ್ ದಾಖಲಿಸಿದ ಗರಿಷ್ಠ ಟೆಸ್ಟ್ ಸ್ಕೋರ್ ಎಂಬುದು ವಿಶೇಷ.

ಇದಕ್ಕೂ ಮುನ್ನ 2016ರಲ್ಲಿ ದಿ ಓವಲ್ ಮೈದಾನದಲ್ಲಿ ನಡೆದಿದ್ದ ಟೆಸ್ಟ್‌ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ್ 542 ರನ್ ಗಳಿಸಿತ್ತು. ಆ ಬಳಿಕ ಇಂಗ್ಲೆಂಡ್‌ನಲ್ಲಿ ಪಾಕ್ ತಂಡವು ಒಮ್ಮೆಯೂ 400 ರನ್​ಗಳ ಗಡಿದಾಟಿರಲಿಲ್ಲ. ಆದರೆ ಈ ಬಾರಿ ಹೊಸ ಪಡೆಯೊಂದಿಗೆ ಕಣಕ್ಕಿಳಿದ ಪಾಕಿಸ್ತಾನ್ ಕೊನೆಗೂ 400+ ರನ್ ಕಲೆಹಾಕಿದ್ದಾರೆ. ಈ ಮೂಲಕ 10 ವರ್ಷಗಳ ಬಳಿಕ ಇಂಗ್ಲೆಂಡ್​ನಲ್ಲಿ ಗರಿಷ್ಠ ಸ್ಕೋರ್​ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಇನ್ನಿಂಗ್ಸ್ ಕುಸಿತ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕಂಬ್ಯಾಕ್:

ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 133 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಪಾಕಿಸ್ತಾನ್ ಭಾರೀ ಮುಖಭಂಗ ಅನುಭವಿಸಿತ್ತು. ಇಂಗ್ಲೆಂಡ್ ತಂಡವು ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್ ಮುನ್ನಡೆ ಸಾಧಿಸಿ, ಪಾಕಿಸ್ತಾನದ ಮೇಲೆ 320 ರನ್‌ಗಳ ಬೃಹತ್ ಹಿನ್ನಡೆಯ ಒತ್ತಡ ಹೇರಿತ್ತು. ಹೀಗಾಗಿ ಈ ಪಂದ್ಯದಲ್ಲೂ ಪಾಕಿಸ್ತಾನ್ ಸುಲಭವಾಗಿ ಸೋಲೊಪ್ಪಿಕೊಳ್ಳಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪಾಕ್ ಬ್ಯಾಟರ್‌ಗಳು ಚಿತ್ರಣವನ್ನೇ ಬದಲಿಸಿದರು.

ಶಾನ್ ಮಸೂದ್ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿ 95 ರನ್ ಗಳಿಸುವ ಮೂಲಕ ಶತಕದ ಸಮೀಪ ಬಂದು ಔಟಾದರು. ಅವರಿಗೆ ಉತ್ತಮ ಸಾಥ್ ನೀಡಿದ ಅನುಭವಿ ಬ್ಯಾಟರ್ ಬಾಬರ್ ಆಝಂ (76 ರನ್) ಜಾಗರೂಕತೆಯ ಆಟ ಪ್ರದರ್ಶಿಸಿ ತಂಡಕ್ಕೆ ಆಸರೆಯಾದರು. ಇವರಿಬ್ಬರ ಅದ್ಭುತ ಜೊತೆಯಾಟ ಪಾಕಿಸ್ತಾನಕ್ಕೆ ಚೇತರಿಕೆ ನೀಡಿತು.

 ಮಿಂಚಿದ ರಝಾವುಲ್ಲಾ!

ಪಾಕ್ ತಂಡದ ದ್ವಿತೀಯ ಇನ್ನಿಂಗ್ಸ್‌ನ ಪ್ರಮುಖ ಆಕರ್ಷಣೆಯಾಗಿದ್ದುದು ಪಾದಾರ್ಪಣೆ ಪಂದ್ಯವಾಡಿದ ಯುವ ಆಟಗಾರ ರಝಾವುಲ್ಲಾ. ಲೋವರ್-ಆರ್ಡರ್‌ನಲ್ಲಿ ಕ್ರೀಸ್‌ಗೆ ಬಂದ ಅವರು ಇಂಗ್ಲೆಂಡ್ ಬೌಲರ್‌ಗಳ ಬೆವರಿಳಿಸಿದರು. ಕೇವಲ 63 ಎಸೆತಗಳಲ್ಲಿ ಬಿರುಸಿನ 81 ರನ್ ಚಚ್ಚಿದರು.

ಈ ಸ್ಫೋಟಕ ಬ್ಯಾಟಿಂಗ್​ ನೆರವಿನೊಂದಿಗೆ ಪಾಕಿಸ್ತಾನ್ ತಂಡವು 320 ರನ್‌ಗಳ ಹಿನ್ನಡೆಯನ್ನು ದಾಟಿ, ಇಂಗ್ಲೆಂಡ್ ತಂಡಕ್ಕೆ ಗೆಲ್ಲಲು 130 ರನ್‌ಗಳ ಗುರಿ ನೀಡುವಲ್ಲಿ ಯಶಸ್ವಿಯಾಯಿತು.

ಇದನ್ನೂ ಓದಿ: ಭಾರತ vs ಅಫ್ಘಾನಿಸ್ತಾನ್ ಟಿ20 ಸರಣಿ ವೇಳಾಪಟ್ಟಿ ಇಲ್ಲಿದೆ

ಇತ್ತ ಇಂಗ್ಲೆಂಡ್ ತಂಡಕ್ಕೆ ಕೇವಲ 130 ರನ್​ಗಳ ಗುರಿ ನೀಡಿದ್ದರೂ, ಇನಿಂಗ್ಸ್​ ಸೋಲಿನ ಸುಳಿಯಲ್ಲಿದ್ದ ಪಾಕಿಸ್ತಾನ್ ತಂಡವು ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ತೋರಿದ ಈ ಅಪ್ರತಿಮ ಹೋರಾಟವು ಕ್ರಿಕೆಟ್ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದೆ.

Follow Us