ಪಾಕಿಸ್ತಾನ್ ತಂಡದಲ್ಲಾದ ಬದಲಾವಣೆ ನಾಯಕನಿಗೆ ಗೊತ್ತೇ ಇರಲಿಲ್ಲ!
ಪಾಕಿಸ್ತಾನ್ ಕ್ರಿಕೆಟ್‌ನ ಮತ್ತೊಂದು ದೊಡ್ಡ ವಿವಾದ ಮುನ್ನೆಲೆಗೆ ಬಂದಿದೆ. ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಅನುಭವಿಸಿದ ಹೀನಾಯ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಂಡಕ್ಕೆ 'ಮೇಜರ್ ಸರ್ಜರಿ' ಮಾಡಿತ್ತು. ಆದರೆ, ಆಘಾತಕಾರಿ ವಿಷಯವೆಂದರೆ ಈ ಮಹತ್ವದ ಬದಲಾವಣೆಯ ವಿಷಯ ಖುದ್ದು ಪಾಕ್ ತಂಡದ ನಾಯಕ ಬಾಬರ್ ಆಝಂ ಅವರಿಗೇ ಗೊತ್ತಿರಲಿಲ್ಲ!

ಲಾರ್ಡ್ಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಎದುರಾದ 194 ರನ್‌ಗಳ ಹೀನಾಯ ಸೋಲಿನ ಬೆನ್ನಲ್ಲೇ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಂಡದ ನಾಯಕ ಬಾಬರ್ ಆಝಂಗೆ ಯಾವುದೇ ಮುನ್ಸೂಚನೆ ನೀಡದೆ ಆಟಗಾರರು ಹಾಗೂ ಕೋಚಿಂಗ್ ಸಿಬ್ಬಂದಿಯನ್ನು ಬದಲಾಯಿಸಿ ಕಠಿಣ ಕ್ರಮ ಕೈಗೊಂಡಿರುವುದು ಇದೀಗ ಬಹಿರಂಗವಾಗಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ಆರಂಭವಾಗಲಿರುವ ಅಂತಿಮ ಟೆಸ್ಟ್ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾಕ್ ಟೆಸ್ಟ್ ತಂಡದ ನಾಯಕ ಬಾಬರ್ ಆಝಂ, ಮಂಡಳಿಯ ಈ ನಿರ್ಧಾರಕ್ಕೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
“ಈ ಪ್ರಮುಖ ಬದಲಾವಣೆಗಳ ಬಗ್ಗೆ ನನ್ನೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ. ಇದು ನನಗೂ ಅಚ್ಚರಿ ಮೂಡಿಸಿದೆ; ಮಾಧ್ಯಮಗಳ ಮೂಲಕವೇ ನನಗೆ ಈ ವಿಷಯ ತಿಳಿಯಿತು,” ಎಂದು ಬಾಬರ್ ಆಝಂ ಬಹಿರಂಗಪಡಿಸಿದ್ದಾರೆ. ಈ ವಿಚಾರ ಹೊರಬರುತ್ತಿದ್ದಂತೆ, ಇದೀಗ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಲಾರಂಭಿಸಿದೆ.
ಪಿಸಿಬಿ ಕೈಗೊಂಡಿದ್ದ ಕ್ರಮಗಳೇನು?
7 ಆಟಗಾರರ ವಜಾ: ಸರಣಿಯ ಮಧ್ಯದಲ್ಲೇ ಮೊಹಮ್ಮದ್ ರಿಝ್ವಾನ್, ಇಮಾಮ್-ಉಲ್-ಹಕ್ ಮತ್ತು ಸಲ್ಮಾನ್ ಅಲಿ ಅಘಾ ಸೇರಿದಂತೆ 7 ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಟ್ಟು, ಅವರನ್ನು ತವರಿಗೆ ವಾಪಸ್ ಕಳುಹಿಸಲಾಗಿತ್ತು.
ಕೋಚಿಂಗ್ ಸಿಬ್ಬಂದಿ ವಜಾ: ಟೆಸ್ಟ್ ತಂಡದ ಮುಖ್ಯ ಕೋಚ್ ಸರ್ಫರಾಝ್ ಅಹ್ಮದ್ ಮತ್ತು ಬೌಲಿಂಗ್ ಕೋಚ್ ಉಮರ್ ಗುಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹುದ್ದೆಯಿಂದ ತೆಗೆದುಹಾಕಲಾಗಿತ್ತು. ಅಲ್ಲದೆ ಅವರ ಜಾಗಕ್ಕೆ ಸೀಮಿತ ಓವರ್‌ಗಳ ಕೋಚ್ ಮೈಕ್ ಹೆಸನ್ ಮತ್ತು ಆಶ್ಲೇ ನಾಫ್ಕೆ ಅವರನ್ನು ನಿಯೋಜಿಸಲಾಗಿದೆ.
7 ಆಟಗಾರರ ಸೇರ್ಪಡೆ: ತಂಡಕ್ಕೆ ಹೊಸ ಚೈತನ್ಯ ತುಂಬಲು ಸಾದ್ ಬೇಗ್ ಮತ್ತು ಸೈಮ್ ಅಯೂಬ್ ಸೇರಿದಂತೆ ಐವರು ಅನ್‌ಕ್ಯಾಪ್ಡ್ (ಅಂತರರಾಷ್ಟ್ರೀಯ ಪಂದ್ಯ ಆಡದ) ಆಟಗಾರರು ಒಳಗೊಂಡಂತೆ ಒಟ್ಟು 7 ಹೊಸ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿತ್ತು.
ಆದರೆ, ತಂಡದಲ್ಲಿ ನಡೆದ ಈ ಮಹತ್ವದ ಬದಲಾವಣೆಗಳ ಕುರಿತು ನಾಯಕ ಬಾಬರ್ ಆಖಂ ಅವರಿಗೆ ಕನಿಷ್ಠ ಮಾಹಿತಿಯೂ ಇರಲಿಲ್ಲ. ಅಂದರೆ, ನಾಯಕನೊಂದಿಗೆ ಯಾವುದೇ ಚರ್ಚೆ ನಡೆಸದೆಯೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಇಡೀ ತಂಡಕ್ಕೆ ‘ಮೇಜರ್ ಸರ್ಜರಿ’ ನಡೆಸಿತ್ತು. ಇದೀಗ ಸ್ವತಃ ಬಾಬರ್ ಆಝಂ ಅವರೇ, ‘ಈ ಪ್ರಮುಖ ಬದಲಾವಣೆಗಳ ಬಗ್ಗೆ ನನ್ನೊಂದಿಗೆ ಯಾವುದೇ ಸಮಾಲೋಚನೆ ನಡೆಸಿಲ್ಲ’ ಎಂದು ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ಟಿ20 ತಂಡ ಖರೀದಿಸಿದ ರಿಕಿ ಪಾಂಟಿಂಗ್: ಡೇವಿಡ್ ವಾರ್ನರ್ ನಾಯಕ!
ಒಟ್ಟಾರೆಯಾಗಿ ಹೇಳುವುದಾದರೆ, ಲಾರ್ಡ್ಸ್ ಟೆಸ್ಟ್ ಸೋಲಿನ ಬೆನ್ನಲ್ಲೇ ಪಾಕಿಸ್ತಾನ್ ಕ್ರಿಕೆಟ್‌ನಲ್ಲಿ ಆಂತರಿಕ ಭಿನ್ನಮತ ಮತ್ತೊಮ್ಮೆ ಬೀದಿಗೆ ಬಂದಿದೆ. ನಾಯಕನನ್ನೇ ಕತ್ತಲಲ್ಲಿಟ್ಟು ಮಂಡಳಿ ಕೈಗೊಂಡಿರುವ ಈ ದಿಢೀರ್ ನಿರ್ಧಾರ, ಮುಂಬರುವ ಪಂದ್ಯಗಳ ಮೇಲೆ ಮತ್ತು ತಂಡದ ಪ್ರದರ್ಶನದ ಮೇಲೆ ಎಷ್ಟರಮಟ್ಟಿಗೆ ಪರಿಣಾಮ ಬೀರಲಿದೆ ಎಂಬುದನ್ನು ಬರ್ಮಿಂಗ್‌ಹ್ಯಾಮ್ ಟೆಸ್ಟ್ ನಿರ್ಣಯಿಸಲಿದೆ.




