‘ಸಫಾಯಿ ಕರ್ಮಚಾರಿಗಳಾಗಿ ಹುಟ್ಟಿದ್ದು ನಿಮ್ಮ ಕರ್ಮಫಲ’: ಹಸಿ ಕಸದ ಜೊತೆ ಪ್ಲಾಸ್ಟಿಕ್ ಹಾಕಬೇಡಿ ಎಂದಿದ್ದಕ್ಕೆ ನಿವೃತ್ತ ಅಧಿಕಾರಿಯ ದರ್ಪ!
ಮಡಿಕೇರಿಯ ಬ್ರಾಹ್ಮಣರ ಬೀದಿಯಲ್ಲಿ ಹಸಿ ಕಸ ಬೇರ್ಪಡಿಸಿ ನೀಡುವಂತೆ ಕೋರಿದ ಪೌರಕಾರ್ಮಿಕನಿಗೆ "ಸಫಾಯಿ ಕರ್ಮಚಾರಿಯಾಗಿ ಹುಟ್ಟಿದ್ದು ನಿಮ್ಮ ಕರ್ಮಫಲ, ನಾವು ಕಸಕ್ಕೆ ಕೈ ಹಾಕಲ್ಲ" ಎಂದು ನಿವೃತ್ತ ಗೆಜೆಟೆಡ್ ಅಧಿಕಾರಿ ಬಾಳಾಡಿ ಶ್ರೀನಿವಾಸ್ ಹೀಯಾಳಿಸಿದ್ದಾರೆ. ಅಧಿಕಾರಿಯ ಈ ಧರ್ಪದ ವರ್ತನೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕ್ರಿಮಿನಲ್ ಕೇಸ್ ದಾಖಲಿಸಲು ಆಗ್ರಹಿಸಲಾಗಿದೆ.
ಮಡಿಕೇರಿ, ಅಕ್ಟೋಬರ್ 03: “ಸಫಾಯಿ ಕರ್ಮಚಾರಿಗಳಾಗಿ ಹುಟ್ಟಿದ್ದು ನಿಮ್ಮ ಕರ್ಮಫಲ. ನಾವು ವಿದ್ಯಾವಂತರು, ಕಸಕ್ಕೆ ಕೈ ಹಾಕಲ್ಲ” ಎಂದು ಮಡಿಕೇರಿ ನಗರಸಭೆಯ ಸಿಬ್ಬಂದಿ ವಿರುದ್ಧ ನಿವೃತ್ತ ಗೆಜೆಟೆಡ್ ಅಧಿಕಾರಿ ಬಾಳಾಡಿ ಶ್ರೀನಿವಾಸ್ ದರ್ಪದ ವರ್ತನೆ ತೋರಿದ ಘಟನೆ ನಗರದ ಬ್ರಾಹ್ಮಣರ ಬೀದಿಯಲ್ಲಿ ನಡೆದಿದೆ.
ಹಸಿ ಕಸದ ಜೊತೆ ಪ್ಲಾಸ್ಟಿಕ್ ಹಾಕದಂತೆ ಹಾಗೂ ಕಸ ಬೇರ್ಪಡಿಸಿ ನೀಡುವಂತೆ ವಿನಂತಿಸಿದ ಕಸ ಸಂಗ್ರಹಣಾ ವಾಹನದ ಚಾಲಕ ರವಿ ಎಂಬುವವರ ಜೊತೆ ಶ್ರೀನಿವಾಸ್ ಧಿಮಾಕಿನಿಂದ ಮಾತನಾಡಿದ್ದಾರೆ. “ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವುದು ನಮ್ಮ ಕೆಲಸವಲ್ಲ, ಅದು ನಿಮ್ಮ ಕೆಲಸ” ಎಂದು ಆದೇಶಿಸಿ, ಪೌರಕಾರ್ಮಿಕರ ಕಾಯಕವನ್ನು ಹೀಯಾಳಿಸಿದ್ದಾರೆ.
ಪೌರಕಾರ್ಮಿಕರ ಆತ್ಮಗೌರವಕ್ಕೆ ಧಕ್ಕೆ ತಂದಿರುವ ನಿವೃತ್ತ ಅಧಿಕಾರಿಯ ಜನವಿರೋಧಿ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದ್ದು, ಆತನ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

