ಸ್ಮರಣೀಯ ಇನ್ನಿಂಗ್ಸ್ ಆಡಿ ಶತಕದಂಚಿನಲ್ಲಿ ಎಡವಿದ ರೋಹಿತ್ ಶರ್ಮಾ
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ 92 ರನ್ ಗಳಿಸಿ ಶತಕ ವಂಚಿತರಾದರು. ಕೇವಲ 4 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡವನ್ನು ಅವರು ತಾಳ್ಮೆಯ ಇನ್ನಿಂಗ್ಸ್ ಮೂಲಕ ಪಾರು ಮಾಡಿದರು. ರುತುರಾಜ್ ಜೊತೆಗೂಡಿ ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟ ನಿರ್ಮಿಸಿ ತಂಡಕ್ಕೆ ಆಧಾರವಾದರು. ಈ ಸ್ಮರಣೀಯ ಇನ್ನಿಂಗ್ಸ್ ಭಾರತಕ್ಕೆ ಭದ್ರ ಬುನಾದಿ ಒದಗಿಸಿತು.

ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಸತತ ಎರಡನೇ ಪಂದ್ಯದಲ್ಲಿ ಶತಕ ಬಾರಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ರೋಹಿತ್ 92 ರನ್‌ಗಳಿಗೆ ಔಟಾಗುವ ಮೂಲಕ ತಮ್ಮ ವೃತ್ತಿಜೀವನದ 36ನೇ ಏಕದಿನ ಶತಕದಿಂದ ವಂಚಿತರಾಗಿದ್ದಾರೆ. ಆದಾಗ್ಯೂ ರೋಹಿತ್ ಅವರ ಈ ಸ್ಮರಣೀಯವಾಗಿದ್ದು, ಟೀಂ ಇಂಡಿಯಾ ಕೇವಲ 4 ರನ್‌ಗಳಿಗೆ ಪ್ರಮುಖ 2 ವಿಕೆಟ್‌ಗಳನ್ನು ಕಳೆದುಕೊಂಡಿದ್ದಾಗ ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ರೋಹಿತ್ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದಲ್ಲದೆ ರುತುರಾಜ್ ಜೊತೆಗೂಡಿ ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವನ್ನು ನಿರ್ಮಿಸಿದರು. ರೋಹಿತ್ ತಮ್ಮ ಇನ್ನಿಂಗ್ಸ್ನಲ್ಲಿ 83 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 3 ಸಿಕ್ಸರ್‌ಗಳ ಸಹಿತ 92 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು.
92 ರನ್‌ಗಳಿಗೆ ವಿಕೆಟ್ ಒಪ್ಪಿಸಿದ ರೋಹಿತ್
ಆರಂಭಿಕ ಪವರ್‌ಪ್ಲೇಯಲ್ಲಿ ರೋಹಿತ್ ಶರ್ಮಾ ಬಹಳ ನಿಧಾನವಾಗಿ ಬ್ಯಾಟಿಂಗ್ ಮಾಡಿದರು. 10 ಓವರ್‌ಗಳ ನಂತರ, ರೋಹಿತ್ 41 ಎಸೆತಗಳನ್ನು ಎದುರಿಸಿ ಕೇವಲ 21 ರನ್ ಬಾರಿಸಿದ್ದರು. ಆ ನಂತರ ಗೇರ್ ಬದಲಿಸಿದ ರೋಹಿತ್ ಮುಂದಿನ 44 ಎಸೆತಗಳಲ್ಲಿ 71 ರನ್‌ಗಳನ್ನು ಕಲೆಹಾಕಿದರು. 92 ರನ್‌ಗಳಿಗೆ ಔಟಾಗುವ ಮೂಲಕ ರೋಹಿತ್ ತಮ್ಮ ಏಕದಿನ ವೃತ್ತಿಜೀವನದಲ್ಲಿ 6ನೇ ಬಾರಿಗೆ ನವರ್ಸ ನೈಂಟಿಗೆ ಬಲಿಯಾದರು. ಈ ಹಿಂದೆ ರೋಹಿತ್ 2019 ರಲ್ಲಿ ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ರೋಹಿತ್ 95 ರನ್‌ಗಳಿಗೆ ಔಟಾಗಿದ್ದರು.
ಭಾರತಕ್ಕೆ ಆರಂಭಿಕ ಆಘಾತ
ಈ ಪಂದ್ಯದಲ್ಲಿ ಟಾಸ್ ಗೆದ್ದು ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡಕ್ಕೆ ಆರಂಭದಿಂದಲೇ ಅನಿರೀಕ್ಷಿತ ಆಘಾತ ಎದುರಾಯಿತು. ಮೊದಲ ಪಂದ್ಯದಲ್ಲಿ ಶತಕ ಮತ್ತು ಎರಡನೇ ಹಿಂದಿನ ಪಂದ್ಯದಲ್ಲಿ ಅದ್ಭುತ ದ್ವಿಶತಕ ಬಾರಿಸಿದ್ದ ನಾಯಕ ಶುಭ್ಮನ್ ಗಿಲ್ ಮೂರನೇ ಏಕದಿನ ಪಂದ್ಯದಲ್ಲಿ ಸೀಲ್ಸ್ ಬೌಲಿಂಗ್‌ನಲ್ಲಿ ಕೇವಲ 1 ರನ್ ಗಳಿಸಿ ಔಟಾದರು. ಗಿಲ್ ವಿಕೆಟ್ ಪತನದ ಬಳಿಕ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ಕೂಡ ಅದೇ ಓವರ್‌ನಲ್ಲಿ ಖಾತೆ ತೆರೆಯದೆ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗುವ ಮೂಲಕ ಗೋಲ್ಡನ್ ಡಕ್ಗೆ ಬಲಿಯಾದರು.
200 ಸಿಕ್ಸರ್, 12000 ರನ್..! ದಾಖಲೆಯ 35ನೇ ಶತಕ ಚಚ್ಚಿದ ರೋಹಿತ್ ಶರ್ಮಾ
137 ರನ್‌ಗಳ ಜೊತೆಯಾಟ
ಹೀಗಾಗಿ ಕೇವಲ 4 ರನ್‌ಗಳಿಗೆ ಎರಡು ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಭಾರತದ ಇನ್ನಿಂಗ್ಸ್ ಕಟ್ಟುವ ಕೆಲಸವನ್ನು ರೋಹಿತ್ ಮಾಡಿದರು. ಕೊಹ್ಲಿ ವಿಕೆಟ್ ಪತನದ ಬಳಿಕ ಬಂದ ರುತುರಾಜ್, ರೋಹಿತ್ ಜೊತೆಗೂಡಿ ಮೂರನೇ ವಿಕೆಟ್‌ಗೆ 137 ರನ್‌ಗಳ ಪಾಲುದಾರಿಕೆಯನ್ನು ನಿರ್ಮಿಸಿದರು. ಈ ಜೊತೆಯಾಟದಲ್ಲಿ ರೋಹಿತ್ 76 ಎಸೆತಗಳಲ್ಲಿ 90 ರನ್‌ಗಳನ್ನು ಗಳಿಸಿದರೆ, ರುತುರಾಜ್ 56 ಎಸೆತಗಳಲ್ಲಿ 45 ರನ್‌ಗಳನ್ನು ಗಳಿಸಿದರು. ಇದೇ ವೇಳೆ ರುತುರಾಜ್ಗೆ ನಾಲ್ಕು ಜೀವದಾನಗಳು ಸಿಕ್ಕವು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:17 pm, Sat, 3 October 26




