ಇದೊಂಥರಾ ‘ಲೂಸಿಯಾ’ ಕಥೆ; ಟಾರ್ಚ್ ಬಾಯ್ ಆಗಿದ್ದ ‘ಪ್ರೇಮದ ಊರಲಿ’ ನಿರ್ದೇಶಕ ಮನೋಜ್ ಕುಮಾರ್
ಪ್ರೇಮದ ಊರಲಿ ಚಿತ್ರದ ಯಶಸ್ಸಿನ ಕುರಿತು ನಿರ್ದೇಶಕ ಮನೋಜ್ ಕುಮಾರ್ ತಮ್ಮ 18 ವರ್ಷಗಳ ಸಿನಿ ಪಯಣದ ಬಗ್ಗೆ ಭಾವನಾತ್ಮಕವಾಗಿ ಮಾತನಾಡಿದ್ದಾರೆ. ಮಹಿಳಾ ಪರ ಸಂದೇಶ, ಕುಟುಂಬದ ಬೆಂಬಲ, ಹಳೆಯ ಥಿಯೇಟರ್‌ನಲ್ಲಿ ಟಾರ್ಚ್ ಬಾಯ್ ಆಗಿದ್ದ ಕ್ಷಣದಿಂದ ತಮ್ಮದೇ ನಿರ್ದೇಶನದ ಸಿನಿಮಾ ಅದೇ ಥಿಯೇಟರ್ ಪಕ್ಕದಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುವವರೆಗಿನ ಅವರ ರೋಚಕ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಗಾಂಧಿ ನಗರ ಅಂಗಳದಲ್ಲಿ ಈಗ ಎಲ್ಲೆಲ್ಲೂ ‘ಪ್ರೇಮದ ಊರಲಿ’ ಸಿನಿಮಾದ್ದೇ ಸದ್ದು. ಎಲ್ಲ ಚಿತ್ರಮಂದಿರಗಳಲ್ಲೂ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಕುರಿತು ನಿರ್ದೇಶಕ ಮನೋಜ್ ಕುಮಾರ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. 18 ವರ್ಷಗಳ ಸುದೀರ್ಘ ಕಾಯುವಿಕೆ ಮತ್ತು ಹೋರಾಟದ ನಂತರ ಲಭಿಸಿದ ಈ ಯಶಸ್ಸು ಇದಾಗಿದೆ.
‘ಪ್ರೇಮದ ಊರಲಿ’ ಚಿತ್ರವು ಮಹಿಳೆಯರ ಪ್ರೀತಿ ಮತ್ತು ಅವರ ಹೋರಾಟದ ಪ್ರಾಮಾಣಿಕತೆಯನ್ನು ಎತ್ತಿಹಿಡಿಯುತ್ತದೆ. ಈ ಚಿತ್ರದ ಸಂದೇಶವು ಪ್ರೇಕ್ಷಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಹೆಚ್ಚು ಕನೆಕ್ಟ್ ಆಗಿದೆ. ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರಂತಹ ದಿಗ್ಗಜರಿಂದ ಮೆಚ್ಚುಗೆ ಪಡೆದಿರುವುದು ಚಿತ್ರತಂಡಕ್ಕೆ ಹೆಮ್ಮೆಯ ವಿಷಯ’ ಎಂದಿದ್ದಾರೆ.
‘ನರ್ತಕಿ ಥಿಯೇಟರ್ ಪಕ್ಕದ ಸಂತೋಷ್ ಥಿಯೇಟರ್‌ನಲ್ಲಿ ಟಾರ್ಚ್ ಬಾಯ್ ಆಗಿ ಕೆಲಸ ಮಾಡಿದ್ದೆ. ಇಂದು ಅವರದೇ ನಿರ್ದೇಶನದ ಪ್ರೇಮದ ಊರಲಿ ಚಿತ್ರ ನರ್ತಕಿ ಥಿಯೇಟರ್‌ನಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಇದು ನನ್ನ ಶ್ರಮಕ್ಕೆ ಸಿಕ್ಕ ಫಲ. ತಂದೆ-ತಾಯಿ ಮತ್ತು ನಿರ್ಮಾಪಕರ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದಿದ್ಧಾರೆ.
‘ಲೂಸಿಯಾ’ ಸಿನಿಮಾದಲ್ಲೂ ಟಾರ್ಚ್ ಬಾಯ್ ಆಗಿರುವಂತೆ ಕನಸು ಕಾಣುವ ನಾಯಕ ನಟ ನಂತರ ಸೂಪರ್ ಸ್ಟಾರ್ ಆಗುತ್ತಾನೆ. ಮನೋಜ್ ಕುಮಾರ್ ಕಥೆಯೂ ಒಂದು ರೀತಿಯಲ್ಲಿ ಹಾಗೆಯೇ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
