ಮುಂಡರಗಿ ಭೀಮರಾಯರ ಬಸ್ ತಂಗುದಾಣ ವಿರೂಪಗೊಳಿಸಿ ಬೇಕರಿ ನಿರ್ಮಾಣ: ಸಾರ್ವಜನಿಕರ ತೀವ್ರ ಆಕ್ರೋಶ
ಕೊಪ್ಪಳದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಮುಂಡರಗಿ ಭೀಮರಾಯರ ಹೆಸರಿನಲ್ಲಿದ್ದ ಬಸ್ ತಂಗುದಾಣವನ್ನು ವಿರೂಪಗೊಳಿಸಿ ಬೇಕರಿ ನಿರ್ಮಿಸಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ತಂಗುದಾಣ ಹಲವು ಪ್ರಯಾಣಿಕರಿಗೆ ಆಶ್ರಯ ನೀಡಿತ್ತು. ನಗರಸಭೆ ಅನುಮತಿ ಇಲ್ಲದೆ ಬೇಕರಿ ಸ್ಥಳಾಂತರ ಮಾಡಿದ್ದು, ನೋಟಿಸ್ ಜಾರಿಗೊಳಿಸಿದೆ. ಸಾರ್ವಜನಿಕರು ಮತ್ತು ಸಂಘಟನೆಗಳು ಬೇಕರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿವೆ.
ಕೊಪ್ಪಳ, ಅ.3: ನಗರದ ಹೃದಯಭಾಗದಲ್ಲಿ, ತಹಶೀಲ್ದಾರ್ ಕಚೇರಿ ಪಕ್ಕದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರ ಮುಂಡರಗಿ ಭೀಮರಾಯರ ಹೆಸರಿನ ಬಸ್ ತಂಗುದಾಣವನ್ನು ವಿರೂಪಗೊಳಿಸಿ ಬೇಕರಿ ನಿರ್ಮಿಸಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಸ್ ತಂಗುದಾಣವು ವಿದ್ಯಾರ್ಥಿಗಳು, ವೃದ್ಧರು, ಮತ್ತು ಜನಸಾಮಾನ್ಯರು ಸೇರಿದಂತೆ ಸಾವಿರಾರು ಪ್ರಯಾಣಿಕರಿಗೆ ವಿಶ್ರಾಂತಿ ತಾಣವಾಗಿತ್ತು. ಫುಡ್ ಪಾಯಿಂಟ್ ಬೇಕರಿ ಮಾಲೀಕರು, ನಗರಸಭೆಯಿಂದ ಯಾವುದೇ ಅನುಮತಿ ಪಡೆಯದೆ, ಹಳೆಯ ಬೇಕರಿಯನ್ನು ಕೆಡವಿ ತಾತ್ಕಾಲಿಕವಾಗಿ ಬಸ್ ತಂಗುದಾಣದ ಹಿಂದಿರುವ ಜಾಗಕ್ಕೆ ಸ್ಥಳಾಂತರಿಸಿದ್ದಾರೆ. ಈ ಪ್ರಕ್ರಿಯೆಯಲ್ಲಿ ತಂಗುದಾಣದ ಸ್ಟೀಲ್ ಗೇಟ್‌ಗಳನ್ನು ಕಿತ್ತುಹಾಕಿ ವಿರೂಪಗೊಳಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರಿಂದ ಕೊಪ್ಪಳದ ಸಾರ್ವಜನಿಕರು ಮತ್ತು ಕನ್ನಡಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ನಗರಸಭೆಗೆ ದೂರು ಸಲ್ಲಿಸಿವೆ. ದೂರಿನ ಅನ್ವಯ, ನಗರಸಭೆಯ ಆಯುಕ್ತರು ಬೇಕರಿ ಮಾಲೀಕರಿಗೆ ಐದು ದಿನಗಳೊಳಗೆ ಉತ್ತರ ನೀಡುವಂತೆ ನೋಟಿಸ್ ಜಾರಿಗೊಳಿಸಿದ್ದಾರೆ. ಸಮರ್ಪಕ ಉತ್ತರ ನೀಡದಿದ್ದರೆ ಬೇಕರಿಯನ್ನು ಬಂದ್ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರು ಬೇಕರಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಆಗ್ರಹಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

