AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿನ್ನಕ್ಕೆ ಮುತ್ತಿಕ್ಕಿದ ಪುರುಷರ ಹಾಕಿ ತಂಡ; ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಭಾರತ

ಏಷ್ಯನ್ ಗೇಮ್ಸ್ 15ನೇ ದಿನ ಭಾರತಕ್ಕೆ ಚಿನ್ನದ ಸುರಿಮಳೆ. ಈ ದಿನ ಭಾರತ 5 ಚಿನ್ನದ ಪದಕ ಗೆದ್ದಿದೆ. ಪುರುಷರ ಹಾಕಿ ತಂಡ ಮಲೇಷ್ಯಾವನ್ನು ಮಣಿಸಿ 5ನೇ ಚಿನ್ನ ತನ್ನದಾಗಿಸಿಕೊಂಡು, 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆದುಕೊಂಡಿದೆ. ಇದು ಭಾರತದ 21ನೇ ಚಿನ್ನದ ಪದಕವಾಗಿದ್ದು, ಪದಕ ಪಟ್ಟಿಯಲ್ಲಿ ಭಾರತ 4ನೇ ಸ್ಥಾನಕ್ಕೇರಿದೆ. ಕ್ರೀಡಾಪಟುಗಳ ಅಮೋಘ ಪ್ರದರ್ಶನದಿಂದ ದೇಶಕ್ಕೆ ಹೆಮ್ಮೆ.

ಚಿನ್ನಕ್ಕೆ ಮುತ್ತಿಕ್ಕಿದ ಪುರುಷರ ಹಾಕಿ ತಂಡ; ಪದಕಗಳ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಭಾರತ
ಭಾರತ ಪುರುಷರ ಹಾಕಿ ತಂಡ
ಪೃಥ್ವಿಶಂಕರ
|

Updated on:Oct 03, 2026 | 6:08 PM

Share

ಏಷ್ಯನ್ ಗೇಮ್ಸ್​ನ 15ನೇ ದಿನದಂದು ಭಾರತದ ಕ್ರೀಡಾಪಟುಗಳಿಂದ ಚಿನ್ನದ ಭೇಟೆ ಜೋರಾಗಿದೆ. ಇದುವರೆಗೆ ಈ ದಿನದಂದು ಭಾರತ 5 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ. 5ನೇ ಚಿನ್ನದ ಪದಕವನ್ನು ಭಾರತದ ಪುರುಷರ ಹಾಕಿ ತಂಡ ಗೆದ್ದುಕೊಂಡಿದೆ. ಈ ಚಿನ್ನದ ಪದಕದ ಪಂದ್ಯದಲ್ಲಿ ಹರ್ಮನ್‌ಪ್ರೀತ್ ಸಿಂಗ್ ಪಡೆ 5-1 ಗೋಲುಗಳಿಂದ ಮಲೇಷ್ಯಾ ತಂಡವನ್ನು ಮಣಿಸುವಲ್ಲಿ ಯಶಸ್ವಿಯಾಯಿತು. ಹಾಕಿಯಲ್ಲಿ ಪುರುಷ ಹಾಗೂ ಮಹಿಳಾ ತಂಡಗಳೆರಡು ಚಿನ್ನದ ಪದಕವನ್ನು ಗೆದ್ದುಕೊಳ್ಳುವ ಮೂಲಕ 2028 ರಲ್ಲಿ ನಡೆಯಲಿರುವ ಲಾಸ್ ಏಂಜಲೇಸ್ ಒಲಿಂಪಿಕ್ಸ್​ಗೆ ನೇರ ಅರ್ಹತೆ ಗಿಟ್ಟಿಸಿಕೊಂಡಿವೆ. ಏಷ್ಯನ್ ಗೇಮ್ಸ್‌ನಲ್ಲಿ ಇದು ಭಾರತದ 21ನೇ ಚಿನ್ನದ ಪದಕವಾಗಿದ್ದು, ಈ ಪದಕದೊಂದಿಗೆ ಭಾರತ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ.

ಸತತ 2ನೇ ಬಾರಿಗೆ ಚಿನ್ನದ ಪದಕ

ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು ಒಟ್ಟಿಗೆ ಚಿನ್ನದ ಪದಕವನ್ನು ಗೆದ್ದಿರುವುದು ಇದೇ ಮೊದಲು. ಇದಲ್ಲದೆ, ಏಷ್ಯನ್ ಕ್ರೀಡಾಕೂಟದಲ್ಲಿ ಸತತ ಎರಡನೇ ಬಾರಿಗೆ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಭಾರತೀಯ ಪುರುಷರ ಹಾಕಿ ತಂಡವು ತನ್ನ ಪ್ರಶಸ್ತಿಯನ್ನು ಉಳಿಸಿಕೊಂಡಿರುವುದು ಇದೇ ಮೊದಲು. ಇದಕ್ಕೂ ಮೊದಲು, 2023 ರ ಹ್ಯಾಂಗ್‌ಝೌ ಏಷ್ಯನ್ ಕ್ರೀಡಾಕೂಟದಲ್ಲಿಯೂ ಭಾರತ ಚಿನ್ನದ ಪದಕವನ್ನು ಗೆದ್ದಿತ್ತು.

ಆರಂಭದಿಂದಲೂ ಭಾರತದ ಮೇಲುಗೈ

ಈ ಸ್ವರ್ಣ ಪದಕದ ಪಂದ್ಯದಲ್ಲಿ ಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಇದರ ಫಲವಾಗಿ ಪಂದ್ಯದ 11 ನೇ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್ ಸಿಂಗ್ ಬುಲೆಟ್ ಡ್ರ್ಯಾಗ್-ಫ್ಲಿಕ್ ಮೂಲಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ಭಾರತಕ್ಕೆ 1-0 ಮುನ್ನಡೆ ಒದಗಿಸಿದರು. ಆದಾಗ್ಯೂ, ಕೇವಲ ಮೂರು ನಿಮಿಷಗಳ ನಂತರ, ಮಲೇಷ್ಯಾದ ಶೆಲೊ ಸಿಲ್ವೆರಿಯಸ್ ಅದ್ಭುತ ಫೀಲ್ಡ್ ಗೋಲ್ ಗಳಿಸಿ ಸ್ಕೋರ್ ಅನ್ನು 1-1 ರಿಂದ ಸಮಬಲಗೊಳಿಸಿದರು. ಎರಡನೇ ಕ್ವಾರ್ಟರ್‌ನಲ್ಲಿ ಮಲೇಷ್ಯಾ ಒತ್ತಡ ಹೇರಲು ಪ್ರಯತ್ನಿಸಿತು. ಆದರೆ 23 ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಜುಗ್ರಾಜ್ ಸಿಂಗ್ ಗೋಲಾಗಿ ಪರಿವರ್ತಿಸಿ ಭಾರತಕ್ಕೆ 2-1 ಮುನ್ನಡೆ ತಂದುಕೊಟ್ಟರು. ಎರಡನೇ ಕ್ವಾರ್ಟರ್‌ನಲ್ಲಿ ಉಭಯ ತಂಡಗಳಿಂದ ಯಾವುದೇ ಗೋಲು ದಾಖಲಾಗಲಿಲ್ಲ.

5-1 ಅಂತರದ ಅಜೇಯ ಗೆಲುವು

ದ್ವಿತೀಯಾರ್ಧದ ಆರಂಭದಲ್ಲಿ ಭಾರತದ ಫಾರ್ವರ್ಡ್ ಲೈನ್ ಅದ್ಭುತ ಪ್ರದರ್ಶನ ನೀಡಿತು. ಮೂರನೇ ಕ್ವಾರ್ಟರ್‌ನ ಆರಂಭದಲ್ಲಿ, ಅಂಪೈರ್ ಭಾರತಕ್ಕೆ ಮತ್ತೊಂದು ಪೆನಾಲ್ಟಿ ಸ್ಟ್ರೋಕ್ ನೀಡಿದರು. ಉಪನಾಯಕ ಹಾರ್ದಿಕ್ ಸಿಂಗ್ ಅದನ್ನು ಗೋಲಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾದರೆ, 54 ನೇ ನಿಮಿಷದಲ್ಲಿ ಶಿಲಾನಂದ್ ಲಾಕ್ರಾ ಗೋಲು ಬಾರಿಸಿ ಮುನ್ನಡೆಯನ್ನು 4-1ಕ್ಕೇರಿಸಿದರು. ಪಂದ್ಯದ 57ನೇ ನಿಮಿಷದಲ್ಲಿ ಸಿಕ್ಕ ಮತ್ತೊಂದು ಪೆನಾಲ್ಟಿ ಕಾರ್ನರ್ ಅನ್ನು ನಾಯಕ ಹರ್ಮನ್‌ಪ್ರೀತ್ ಗೋಲು ಪೋಸ್ಟ್​ಗೆ ಹಾಕಿದರು. ಅಂತಿಮವಾಗಿ ಭಾರತ 5-1 ಅಂತರದ ಅಜೇಯ ಗೆಲುವು ಸಾಧಿಸಿ ಚಿನ್ನಕ್ಕೆ ಕೊರಳೊಡ್ಡಿತು.

Published On - 5:27 pm, Sat, 3 October 26

Follow Us
ಪೃಥ್ವಿಶಂಕರ
ಪೃಥ್ವಿಶಂಕರ

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More