ಕರ್ನಾಟಕ ಬರಗಾಲ: ತಕ್ಷಣದ ಪರಿಹಾರಕ್ಕೆ ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಪತ್ರ
ಕರ್ನಾಟಕದಲ್ಲಿ ಭೀಕರ ಬರಗಾಲ ಎದುರಾಗಿದ್ದು, ಶೇಕಡಾ 58ರಷ್ಟು ಮಳೆ ಕೊರತೆ ಮತ್ತು ವ್ಯಾಪಕ ಬೆಳೆ ನಷ್ಟವಾಗಿದೆ. ಅಂದಾಜು 40,000 ಕೋಟಿ ರೂಪಾಯಿ ನಷ್ಟವಾಗಿರುವ ಹಿನ್ನೆಲೆಯಲ್ಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು 3,705.30 ಕೋಟಿ ರೂ.ಗಳ ತುರ್ತು ಪರಿಹಾರವನ್ನು ಬಿಡುಗಡೆ ಮಾಡಲು ಮತ್ತು ಮಧ್ಯಪ್ರವೇಶಿಸಲು ಆಗ್ರಹಿಸಿದ್ದಾರೆ.
ಬೆಂಗಳೂರು, ಅಕ್ಟೋಬರ್ 3: ಕರ್ನಾಟಕ ಭೀಕರ ಬರಗಾಲದ ಪರಿಸ್ಥಿತಿಯನ್ನು ಎದುರಿಸುತ್ತಿದ್ದು, ಸೆಪ್ಟೆಂಬರ್ ವೇಳೆಗೆ ಶೇಕಡಾ 58ರಷ್ಟು ಮಳೆ ಕೊರತೆಯಾಗಿದೆ. ಇದರ ಪರಿಣಾಮವಾಗಿ ವ್ಯಾಪಕ ಬೆಳೆ ನಷ್ಟ ಉಂಟಾಗಿದ್ದು, ರೈತ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಈ ಹಿನ್ನೆಲೆಯಲ್ಲಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ತಕ್ಷಣ ಮಧ್ಯಪ್ರವೇಶಿಸುವಂತೆ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಅಂದಾಜು 18,748.23 ಕೋಟಿ ರೂಪಾಯಿಗಳ ನಷ್ಟವಾಗಿದ್ದು, ಕರ್ನಾಟಕವು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ನಿಧಿ (SDRF) ಚೌಕಟ್ಟಿನಡಿ 3,705.30 ಕೋಟಿ ರೂಪಾಯಿಗಳ ನೆರವನ್ನು ಕೋರಿದೆ. ಅರ್ಹತೆಯ ಆಧಾರದ ಮೇಲೆ ಅಗತ್ಯ ನೆರವು ನೀಡಿ, ತುರ್ತಾಗಿ ಅನುದಾನವನ್ನು ಬಿಡುಗಡೆ ಮಾಡುವಂತೆ ಖರ್ಗೆಯವರು ಮೋದಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದಾರೆ. ಕೇಂದ್ರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದರೂ, ತಕ್ಷಣದ ಕ್ರಮ ಮತ್ತು ಪರಿಹಾರದ ಬಿಡುಗಡೆಗೆ ಪ್ರಧಾನಿಯವರ ಮಧ್ಯಪ್ರವೇಶ ಅತ್ಯಗತ್ಯ ಎಂದು ಖರ್ಗೆ ಒತ್ತಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

