ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ಬಗ್ಗೆ ಇದುವರೆಗೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲು ಐಸಿಸಿಗೆ ಸಾಧ್ಯವಾಗಿಲ್ಲ. ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುತ್ತಿರುವ ಹಗ್ಗಜಗ್ಗಾಟದಿಂದಾಗಿ ಐಸಿಸಿ, ವೇಳಾಪಟ್ಟಿಯನ್ನೂ ಪ್ರಕಟಿಸಲು ಸಾಧ್ಯವಾಗದ ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿದೆ. ಏತನ್ಮಧ್ಯೆ, ಚಾಂಪಿಯನ್ಸ್ ಟ್ರೋಫಿಯ ಪ್ರವಾಸ ಯಾವ ಯಾವ ಸ್ಥಳಗಳಲ್ಲಿ ನಡೆಯಲ್ಲಿದೆ ಎಂಬುದರ ನೂತನ ವೇಳಾಪಟ್ಟಿ ಪ್ರಕಟವಾಗಿದೆ. ಆ ಪ್ರಕಾರ, ಮುಂದಿನ ವರ್ಷ ಅಂದರೆ 2025 ರ ಜನವರಿ ತಿಂಗಳಲ್ಲಿ ಚಾಂಪಿಯನ್ಸ್ ಟ್ರೋಫಿ ಭಾರತಕ್ಕೆ ಬರಲಿದೆ. ಭಾರತಕ್ಕೆ ಬರುವ ಮುನ್ನ ಪಾಕಿಸ್ತಾನದಲ್ಲಿ ಸುತ್ತು ಹೊಡೆಯುವ ಚಾಂಪಿಯನ್ಸ್ ಟ್ರೋಫಿ ಆ ಬಳಿಕ ಇತರ ದೇಶಗಳನ್ನು ಬಳಸಿಕೊಂಡು ಭಾರತಕ್ಕೆ ಬರಲಿದೆ. ಆ ನಂತರ ಆತಿಥೇಯ ಪಾಕಿಸ್ತಾನಕ್ಕೆ ಮತ್ತೊಮ್ಮೆ ಪ್ರಯಾಣಿಸಲಿದೆ.
ಚಾಂಪಿಯನ್ಸ್ ಟ್ರೋಫಿಯ ಪ್ರವಾಸವು ನವೆಂಬರ್ 16 ರಿಂದ ಪ್ರಾರಂಭವಾಗಿದ್ದು, 26 ಜನವರಿ 2025 ರವರೆಗೆ ನಡೆಯಲಿದೆ ಎಂದು ಐಸಿಸಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ. ಚಾಂಪಿಯನ್ಸ್ ಟ್ರೋಫಿ ಭಾರತಕ್ಕೆ ಕೊನೆಯದಾಗಿ ಬರಲಿದೆ. ಟ್ರೋಫಿ ಪ್ರವಾಸವು ಪಾಕಿಸ್ತಾನದ ವಿವಿಧ ನಗರಗಳಲ್ಲಿ ನವೆಂಬರ್ 16 ರಿಂದ 25 ರವರೆಗೆ ನಡೆಯಲಿದ್ದು, ಮರುದಿನ ಟ್ರೋಫಿ ಅಫ್ಘಾನಿಸ್ತಾನವನ್ನು ತಲುಪಲಿದೆ. ಟ್ರೋಫಿ ಪ್ರವಾಸವು ಅಫ್ಘಾನಿಸ್ತಾನದಲ್ಲಿ ನವೆಂಬರ್ 26 ರಿಂದ 28 ರವರೆಗೆ ನಡೆಯಲಿದೆ. ನಂತರ ಟ್ರೋಫಿಯು ಬಾಂಗ್ಲಾದೇಶದಲ್ಲಿ ಡಿಸೆಂಬರ್ 10 ರಿಂದ 13 ರವರೆಗೆ ಪ್ರದರ್ಶನಗೊಳ್ಳಲಿದೆ. ಆ ಬಳಿಕ ಚಾಂಪಿಯನ್ಸ್ ಟ್ರೋಫಿ ಪ್ರವಾಸವು ದಕ್ಷಿಣ ಆಫ್ರಿಕಾದಲ್ಲಿ ಡಿಸೆಂಬರ್ 15 ರಿಂದ 22 ರವರೆಗೆ ನಡೆಯಲಿದೆ.
ದಕ್ಷಿಣ ಆಫ್ರಿಕಾದ ನಂತರ, ಚಾಂಪಿಯನ್ಸ್ ಟ್ರೋಫಿ ಪ್ರವಾಸವು ಆಸ್ಟ್ರೇಲಿಯಾವನ್ನು ತಲುಪಲಿದ್ದು, ಅಲ್ಲಿ ಟ್ರೋಫಿಯು ಡಿಸೆಂಬರ್ 25 ರಿಂದ ಜನವರಿ 5 ರವರೆಗೆ ದೇಶದ ವಿವಿಧ ನಗರಗಳಲ್ಲಿ ಪ್ರದರ್ಶನಗೊಳ್ಳಲಿದೆ. ನಂತರ ಟ್ರೋಫಿಯು ಜನವರಿ 6 ರಿಂದ ಜನವರಿ 11 ರವರೆಗೆ ನ್ಯೂಜಿಲೆಂಡ್‌ನಲ್ಲಿ ಪ್ರದರ್ಶನಗೊಳ್ಳಲಿದ್ದು, ಜನವರಿ 12 ರಿಂದ 14 ರವರೆಗೆ ಇಂಗ್ಲೆಂಡ್‌ಗೆ ಪ್ರಯಾಣಿಸಲಿದೆ. ಇದಾದ ನಂತರ ಭಾರತದ ಸರದಿ ಬರಲಿದ್ದು, ಜನವರಿ 15 ರಿಂದ 26 ರವರೆಗೆ ಭಾರತದಲ್ಲಿ ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನ ನಡೆಯಲಿದೆ. ಇದಾದ ಬಳಿಕ ಟ್ರೋಫಿ ಪಾಕಿಸ್ತಾನದ ಪಾಲಾಗಲಿದೆ.
Excitement for the upcoming Men’s Champions Trophy 2025 builds up, as the Trophy Tour kicks off in Islamabad 🎉https://t.co/QfQJesYVRf
— ICC (@ICC) November 16, 2024
ಇದಾದ ನಂತರ ಟೂರ್ನಿಗೆ ಉಳಿದ ಸಿದ್ಧತೆಗಳು ಆರಂಭವಾಗಲಿವೆ. ಈ ಟೂರ್ನಿ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿದೆ. ಆದರೆ, ಇದುವರೆಗೆ ಬಂದಿರುವ ವರದಿಗಳ ಪ್ರಕಾರ ಪಾಕಿಸ್ತಾನ ಹೈಬ್ರಿಡ್ ಮಾದರಿಯಲ್ಲಿ ಈ ಟೂರ್ನಿಯನ್ನು ಆಯೋಜಿಸಬೇಕಿದೆ. ಭಾರತದ ಮೂರು ಲೀಗ್ ಪಂದ್ಯಗಳ ಜೊತೆಗೆ ಒಂದು ವೇಳೆ ಭಾರತ ಮುಂದಿನ ಹಂತಕ್ಕೆ ಅರ್ಹತೆ ಪಡೆದರೆ ಆಗ ಒಂದು ಸೆಮಿಫೈನಲ್ ಮತ್ತು ಫೈನಲ್ ಪಂದ್ಯವನ್ನು ದುಬೈನಲ್ಲಿ ಆಡುವ ಸಾಧ್ಯತೆಗಳಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ