
2037 ರಿಂದ 2035ರವರೆಗೆ ನಡೆಯಲಿರುವ ಪ್ರಮುಖ ಪುರುಷರ ಕ್ರಿಕೆಟ್ ಟೂರ್ನಿಗಳ ವೇಳಾಪಟ್ಟಿ ಹಾಗೂ ಅರ್ಹತಾ ಸ್ವರೂಪಗಳಿಗೆ ಐಸಿಸಿ ಇಂದು ಅನುಮೋದನೆ ನೀಡಿದ್ದು, ಅದರಂತೆ 2029ರ ಚಾಂಪಿಯನ್ಸ್ ಟ್ರೋಫಿಗೆ ಭಾರತ ಆತಿಥ್ಯ ವಹಿಸಲಿದೆ. ಇನ್ನು 2031ರ ಏಕದಿನ ವಿಶ್ವಕಪ್ ಅನ್ನು ಭಾರತ ಮತ್ತು ಬಾಂಗ್ಲಾದೇಶ ಜಂಟಿಯಾಗಿ ಆಯೋಜಿಸಲಿವೆ. ಇಂಡೋನೇಷ್ಯಾದ ಬಾಲಿಯಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಪೂರ್ಣ ಸದಸ್ಯ ರಾಷ್ಟ್ರಗಳು ಹಾಗೂ ಸಹಾಯಕ ಸದಸ್ಯ ರಾಷ್ಟ್ರಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವುದು, ಅರ್ಹತಾ ಸುತ್ತುಗಳನ್ನು ಮತ್ತಷ್ಟು ಸುಧಾರಿಸುವುದು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಾತ್ಮಕ ಪಂದ್ಯಗಳನ್ನು ಆಡುವ ಅವಕಾಶ ಹೆಚ್ಚಿಸುವುದು ಈ ನಿರ್ಧಾರಗಳ ಪ್ರಮುಖ ಉದ್ದೇಶವಾಗಿದೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
2029ರ ಚಾಂಪಿಯನ್ಸ್ ಟ್ರೋಫಿ ಅಕ್ಟೋಬರ್ 9ರಿಂದ 28ರವರೆಗೆ ನಡೆಯಲಿದೆ. ಭಾರತ ಮತ್ತು ಬಾಂಗ್ಲಾದೇಶ ಜಂಟಿಯಾಗಿ ಆಯೋಜಿಸಲಿರುವ 2031ರ ಏಕದಿನ ವಿಶ್ವಕಪ್ ಅಕ್ಟೋಬರ್ 9ರಿಂದ ನವೆಂಬರ್ 23ರವರೆಗೆ ನಡೆಯಲಿದೆ. ಹಾಗೆಯೇ 2028ರ ಪುರುಷರ ಟಿ20 ವಿಶ್ವಕಪ್ಗೆ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಜಂಟಿಯಾಗಿ ಆತಿಥ್ಯ ವಹಿಸಲಿವೆ. ಈ ಟೂರ್ನಿ ಅಕ್ಟೋಬರ್ 12ರಿಂದ ನವೆಂಬರ್ 12ರವರೆಗೆ ನಡೆಯಲಿದೆ. 2029ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (ಡಬ್ಲ್ಯುಟಿಸಿ) ಫೈನಲ್ ಪಂದ್ಯಕ್ಕೆ ಇಂಗ್ಲೆಂಡ್ ಆತಿಥ್ಯ ವಹಿಸಲಿದ್ದು, ಜೂನ್ 8ರಿಂದ 12ರವರೆಗೆ ಪಂದ್ಯ ನಡೆಯಲಿದೆ. 2030ರ ಪುರುಷರ ಟಿ20 ವಿಶ್ವಕಪ್ ಟೂರ್ನಿಯನ್ನು ಇಂಗ್ಲೆಂಡ್, ಐರ್ಲೆಂಡ್ ಮತ್ತು ಸ್ಕಾಟ್ಲೆಂಡ್ ಜಂಟಿಯಾಗಿ ಆಯೋಜಿಸಲಿವೆ. ಜುಲೈ 4ರಿಂದ ಆಗಸ್ಟ್ 4ರವರೆಗೆ ಈ ಟೂರ್ನಿ ನಡೆಯಲಿದೆ. 2031ರ ಡಬ್ಲ್ಯುಟಿಸಿ ಫೈನಲ್ ಪಂದ್ಯವೂ ಇಂಗ್ಲೆಂಡ್ನಲ್ಲೇ ಜೂನ್ 12ರಿಂದ 16ರವರೆಗೆ ನಡೆಯಲಿದೆ.
ಆದಾಗ್ಯೂ 2032ರ ಪುರುಷರ ಟಿ20 ವಿಶ್ವಕಪ್, 2033ರ ಡಬ್ಲ್ಯುಟಿಸಿ ಫೈನಲ್, 2033ರ ಚಾಂಪಿಯನ್ಸ್ ಟ್ರೋಫಿ, 2034ರ ಪುರುಷರ ಟಿ20 ವಿಶ್ವಕಪ್, 2035ರ ಡಬ್ಲ್ಯುಟಿಸಿ ಫೈನಲ್ ಹಾಗೂ 2035ರ ಪುರುಷರ ಏಕದಿನ ವಿಶ್ವಕಪ್ ಟೂರ್ನಿಗಳ ಆತಿಥೇಯ ರಾಷ್ಟ್ರಗಳನ್ನು ಇನ್ನೂ ಪ್ರಕಟಿಸಿಲ್ಲ. ಇದೇ ವೇಳೆ, 2027ರ ಪುರುಷರ ಏಕದಿನ ವಿಶ್ವಕಪ್, 2028ರ ಪುರುಷರ ಟಿ20 ವಿಶ್ವಕಪ್ ಮತ್ತು 2028ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗಳಿಗೆ ಸಂಬಂಧಿಸಿದ ಅರ್ಹತಾ ಸ್ವರೂಪಗಳಿಗೂ ಐಸಿಸಿ ಮಂಡಳಿ ಅನುಮೋದನೆ ನೀಡಿದೆ.
2027ರ ಪುರುಷರ ಏಕದಿನ ವಿಶ್ವಕಪ್ ಅರ್ಹತಾ ಸುತ್ತು 2027ರ ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿದೆ. ಒಟ್ಟು 10 ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದು, 23 ಪಂದ್ಯಗಳು ನಡೆಯಲಿವೆ. ತಂಡಗಳನ್ನು ತಲಾ ಐದು ತಂಡಗಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಗುಂಪು ಹಂತದ ಬಳಿಕ ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಈ ಅರ್ಹತಾ ಟೂರ್ನಿಯಲ್ಲಿ ಅಗ್ರ ನಾಲ್ಕು ಸ್ಥಾನ ಪಡೆಯುವ ತಂಡಗಳು 2027ರ ಏಕದಿನ ವಿಶ್ವಕಪ್ಗೆ ಅರ್ಹತೆ ಪಡೆಯಲಿವೆ. ಅರ್ಹತಾ ಸುತ್ತಿನ ಚಾಂಪಿಯನ್ ತಂಡ ನೇರವಾಗಿ ವಿಶ್ವಕಪ್ನ ಗುಂಪು ಹಂತಕ್ಕೆ ಪ್ರವೇಶ ಪಡೆಯಲಿದೆ. ಉಳಿದ ಮೂರು ಅರ್ಹತಾ ತಂಡಗಳು ಸೂಪರ್ ಸರಣಿಯಲ್ಲಿ ಸೆಣಸಲಿದ್ದು, ಇದರಲ್ಲಿ ಗೆಲ್ಲುವ ತಂಡಕ್ಕೆ ವಿಶ್ವಕಪ್ನ ಗುಂಪು ಹಂತದಲ್ಲಿ ಉಳಿದಿರುವ ಕೊನೆಯ ಸ್ಥಾನ ಲಭಿಸಲಿದೆ.
ಕ್ರಿಕೆಟ್ ಫ್ಯಾನ್ಸ್ ಗಮನಕ್ಕೆ; ಅಕ್ಟೋಬರ್ 1 ರಿಂದ ಜಾರಿಗೆ ಬರಲಿವೆ ಐಸಿಸಿ ಹೊಸ ನಿಯಮಗಳು
2028ರ ಪುರುಷರ ಟಿ20 ವಿಶ್ವಕಪ್ನ ಜಾಗತಿಕ ಅರ್ಹತಾ ಸುತ್ತು 2028ರ ಮೊದಲ ತ್ರೈಮಾಸಿಕದಲ್ಲಿ ನಡೆಯಲಿದೆ. ಒಟ್ಟು 16 ತಂಡಗಳು ಭಾಗವಹಿಸಲಿದ್ದು, 31 ಪಂದ್ಯಗಳು ನಡೆಯಲಿವೆ. ನಾಲ್ಕು ಗುಂಪುಗಳಲ್ಲಿ ತಲಾ ನಾಲ್ಕು ತಂಡಗಳನ್ನು ವಿಂಗಡಿಸಲಾಗುತ್ತದೆ. ನಂತರ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ. ಈ ಅರ್ಹತಾ ಸುತ್ತಿನಿಂದ ಎಂಟು ತಂಡಗಳು ಟಿ20 ವಿಶ್ವಕಪ್ಗೆ ಪ್ರವೇಶ ಪಡೆಯಲಿವೆ. ಪ್ರತಿ ಪ್ರಾದೇಶಿಕ ವಲಯದಿಂದ ಅತ್ಯುತ್ತಮ ಪ್ರದರ್ಶನ ನೀಡುವ ಒಂದು ತಂಡ ಅರ್ಹತೆ ಪಡೆಯಲಿದೆ. ಆದರೆ, ಅದಕ್ಕೆ ನಿಗದಿಪಡಿಸಿರುವ ಕನಿಷ್ಠ ಪ್ರದರ್ಶನದ ಮಾನದಂಡಗಳನ್ನು ಪೂರೈಸಿರಬೇಕು. ಉಳಿದ ಸ್ಥಾನಗಳನ್ನು ಒಟ್ಟಾರೆ ಶ್ರೇಯಾಂಕದಲ್ಲಿ ಮುಂದಿರುವ ತಂಡಗಳಿಗೆ ನೀಡಲಾಗುತ್ತದೆ.
Published On - 8:23 pm, Sun, 15 November 26