- TV9 Kannada Photo gallery Cricket photos Latest ICC ODI Rankings: Gill Stays Top, Kohli Slips. Rohit, Rahul Shine
ಐಸಿಸಿ ಏಕದಿನ ರ‍್ಯಾಂಕಿಂಗ್: ಸೊನ್ನೆ ಸುತ್ತಿದ ಪರಿಣಾಮ 2ನೇ ಸ್ಥಾನದಿಂದ ಜಾರಿದ ಕೊಹ್ಲಿ
ಐಸಿಸಿ ನೂತನ ಏಕದಿನ ರ್ಯಾಂಕಿಂಗ್ ಪ್ರಕಟಗೊಂಡಿದ್ದು, ಶುಭ್ಮನ್ ಗಿಲ್ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಶೂನ್ಯಕ್ಕೆ ಔಟಾದ ಕಾರಣ 3ನೇ ಸ್ಥಾನಕ್ಕೆ ಕುಸಿದಿದ್ದಾರೆ. ರೋಹಿತ್ ಶರ್ಮಾ 4ನೇ ಸ್ಥಾನದಲ್ಲಿದ್ದರೆ, ಕೆಎಲ್ ರಾಹುಲ್ ಟಾಪ್ 10 ಪ್ರವೇಶಿಸಿದ್ದಾರೆ. ಭಾರತದ ನಾಲ್ವರು ಬ್ಯಾಟ್ಸ್‌ಮನ್‌ಗಳು ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ.
Updated on: Oct 07, 2026 | 4:33 PM

ಐಸಿಸಿ ಬಿಡುಗಡೆ ಮಾಡಿರುವ ನೂತನ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ ಅವರ ಆಳ್ವಿಕೆ ಹಾಗೆಯೇ ಮುಂದುವರೆದಿದೆ. ಅಂದರೆ ಗಿಲ್ ಅಗ್ರಸ್ಥಾನದಲ್ಲಿಯೇ ಮುಂದುವರೆದಿದ್ದಾರೆ. ಆದರೆ ವೆಸ್ಟ್ ಇಂಡೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ವಿರಾಟ್ ಕೊಹ್ಲಿ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ(PC-PTI).

ವಾಸ್ತವವಾಗಿ ಕಳೆದ ವಾರದ ರ್ಯಾಂಕಿಂಗ್ ಪಟ್ಟಿಯಲ್ಲಿ ಎಂದಿನಂತೆ ಗಿಲ್ ಅಗ್ರಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 3 ರಿಂದ 2ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರು. ಆದರೆ ಇಂದು ಪ್ರಕಟವಾಗಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ಕೊಹ್ಲಿ ಎರಡನೇ ಸ್ಥಾನದಿಂದ ಮತ್ತೆ 3 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಇದಕ್ಕೆ ಕಾರಣ ವಿಂಡೀಸ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟಾಗಿದ್ದು(PC-PTI).

ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಶುಭ್ಮನ್ ಗಿಲ್ 841 ರೇಟಿಂಗ್ ಅಂಕಗಳೊಂದಿಗೆ ನಂ. 1 ಸ್ಥಾನದಲ್ಲಿ ಮುಂದುವರೆದಿದ್ದಾರೆ. ಹಾಗೆಯೇ 781 ರೇಟಿಂಗ್ ಅಂಕಗಳೊಂದಿಗೆ ವಿರಾಟ್ ಕೊಹ್ಲಿ ಈ ವಾರ 3 ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಳೆದ ವಾರ 3 ನೇ ಸ್ಥಾನದಲ್ಲಿದ್ದ ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಒಂದು ಸ್ಥಾನ ಜಿಗಿದು 2 ನೇ ಸ್ಥಾನಕ್ಕೆ ತಲುಪಿದ್ದಾರೆ(PC-PTI).

ಕಳೆದ ವಾರದ ರ್ಯಾಂಕಿಂಗ್ನಲ್ಲಿ 4 ನೇ ಸ್ಥಾನದಲ್ಲಿದ್ದ ರೋಹಿತ್ ಶರ್ಮಾ 770 ರೇಟಿಂಗ್ ಅಂಕಗಳೊಂದಿಗೆ ಆ ಸ್ಥಾನದಲ್ಲೇ ಮುಂದುವರೆದಿದ್ದಾರೆ. ವಿಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಅವರ ಪ್ರದರ್ಶನ ಅಮೋಘವಾಗಿತ್ತು. ಆ ಸರಣಿಯಲ್ಲಿ ರೋಹಿತ್ ಒಂದು ಶತಕದ ಜೊತೆಗೆ ಒಂದು ಅರ್ಧಶತಕದ ಇನ್ನಿಂಗ್ಸ್ ಕೂಡ ಆಡಿದ್ದರು(PC-PTI).

ಉಳಿದಂತೆ ಐಸಿಸಿ ಏಕದಿನ ಶ್ರೇಯಾಂಕದ ಟಾಪ್ 10 ರೊಳಗೆ ಭಾರತ ನಾಲ್ವರು ಬ್ಯಾಟ್ಸ್‌ಮನ್‌ಗಳ ಸ್ಥಾನ ಪಡೆದಿದ್ದು, ಅವರಲ್ಲಿ ಮೂವರು ಅಗ್ರ ಐದರಲ್ಲಿದ್ದಾರೆ.ಇನ್ನು ವಿಂಡೀಸ್ ವಿರುದ್ಧ ಶತಕ ಬಾರಿಸಿದ್ದ ಕೆಎಲ್ ರಾಹುಲ್ ಈ ವಾರ ಟಾಪ್ 10 ರೊಳಗೆ ಪ್ರವೇಶಿಸಿದ್ದಾರೆ. ಅವರು 11 ನೇ ಸ್ಥಾನದಿಂದ 10 ನೇ ಸ್ಥಾನಕ್ಕೆ ಜಿಗಿದಿದ್ದು, ಅವರ ರೇಟಿಂಗ್ ಪಾಯಿಂಟ್ 653 ಆಗಿದೆ(PC-PTI).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



