‘ಬಿಗ್ 3’ ಬಿಗಿಪಟ್ಟು: ಐಸಿಸಿ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ ಕ್ಯಾನ್ಸಲ್!

ಇಂಡಿಯನ್ ಪ್ರೀಮಿಯರ್ ಲೀಗ್ ಸೇರಿದಂತೆ ವಿಶ್ವದ ವಿವಿಧ ಪ್ರಮುಖ ಲೀಗ್‌ಗಳ ಚಾಂಪಿಯನ್ ತಂಡಗಳ ನಡುವೆ 'ವಿಶ್ವ ಕ್ಲಬ್ ಚಾಂಪಿಯನ್‌ಶಿಪ್ ಟಿ20' ಟೂರ್ನಿಯನ್ನು ಆಯೋಜಿಸಲು ಐಸಿಸಿ ಯೋಜನೆ ರೂಪಿಸಿತ್ತು. ಈ ವರ್ಷದ ಕೊನೆಯಲ್ಲಿ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಈ ಜಾಗತಿಕ ಟೂರ್ನಿಗೆ ಚಾಲನೆ ನೀಡಲು ಸಿದ್ಧತೆಗಳೂ ನಡೆದಿದ್ದವು. ಆದರೆ, ಬಿಡುವಿಲ್ಲದ ಕ್ರಿಕೆಟ್ ವೇಳಾಪಟ್ಟಿಯ ಕಾರಣದಿಂದಾಗಿ ಐಸಿಸಿ ಈಗ ಈ ಪ್ರಸ್ತಾವನೆಯಿಂದ ಅಧಿಕೃತವಾಗಿ ಹಿಂದೆ ಸರಿದಿದೆ.

‘ಬಿಗ್ 3’ ಬಿಗಿಪಟ್ಟು: ಐಸಿಸಿ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ ಕ್ಯಾನ್ಸಲ್!
Champions League T20
Image Credit source: x.com

Updated on: Oct 06, 2026 | 8:55 AM

ವರ್ಲ್ಡ್​ ಕ್ಲಬ್​ ಚಾಂಪಿಯನ್ಸ್ ಟಿ20 ಟೂರ್ನಿಯನ್ನು ಮರುಪ್ರಾರಂಭಿಸುವ ಪ್ರಸ್ತಾಪಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಂತಿಮವಾಗಿ ಬ್ರೇಕ್ ಹಾಕಿದೆ. ವಿಶ್ವ ಕ್ರಿಕೆಟ್‌ನ ಅತ್ಯಂತ ಶಕ್ತಿಶಾಲಿ ಮಂಡಳಿಗಳಾದ ಭಾರತ (BCCI), ಆಸ್ಟ್ರೇಲಿಯಾ (CA) ಮತ್ತು ಇಂಗ್ಲೆಂಡ್ (ECB) ಕ್ರಿಕೆಟ್ ಮಂಡಳಿಗಳ ತೀವ್ರ ಪ್ರತಿರೋಧದ ಬೆನ್ನಲ್ಲೇ ಈ ನಿರ್ಧಾರ ಹೊರಬಿದ್ದಿದ್ದು, ಕನಿಷ್ಠ 2031ರವರೆಗೆ ಯಾವುದೇ ಹೊಸ ಬಹುಪಕ್ಷೀಯ ಫ್ರಾಂಚೈಸಿ ಟೂರ್ನಿ ನಡೆಯುವುದಿಲ್ಲ ಎಂಬುದು ಖಚಿತವಾಗಿದೆ.

ಏನಿದು ಚಾಂಪಿಯನ್ಸ್ ಟಿ20 ಟೂರ್ನಿ?

ವಿಶ್ವದ ವಿವಿಧ ದೇಶಗಳ ಪ್ರಮುಖ ಟಿ20 ಲೀಗ್‌ಗಳ (ಉದಾಹರಣೆಗೆ ಐಪಿಎಲ್ ಮತ್ತು ಬಿಗ್ ಬ್ಯಾಷ್) ಅತ್ಯುತ್ತಮ ಕ್ಲಬ್ ತಂಡಗಳನ್ನು ಒಳಗೊಂಡಂತೆ ಹೊಸ ಟೂರ್ನಿ ಆಯೋಜಿಸಲು ಐಸಿಸಿ ಪ್ಲ್ಯಾನ್ ರೂಪಿಸಿತ್ತು.

2009 ರಿಂದ 2014 ರವರೆಗೆ ಯಶಸ್ವಿಯಾಗಿ ನಡೆದಿದ್ದ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿಯ ಮಾದರಿಯಲ್ಲೇ ಈ ಹೊಸ ಲೀಗ್ ಆರಂಭಿಸಲು ಐಸಿಸಿ ಮುಂದಾಗಿತ್ತು. ಈ ಬಗ್ಗೆ ಕ್ರಿಕೆಟ್ ಮಂಡಳಿಗಳ ಜೊತೆ ಮಾತುಕತೆಗಳು ನಡೆದಿದ್ದವು.

ಆದರೆ ಈಗ ‘ಬಿಗ್ 3’ ಮಂಡಳಿಗಳ ಪ್ರಬಲ ವಿರೋಧದಿಂದಾಗಿ ಚಾಂಪಿಯನ್ಸ್ ಲೀಗ್‌ನ ಮರು ಆಯೋಜನೆಯ ಕನಸು ಸಂಪೂರ್ಣವಾಗಿ ಭಗ್ನಗೊಂಡಿದೆ. ಅಷ್ಟೇ ಅಲ್ಲದೆ 2031 ರವರೆಗೆ ವರ್ಲ್ಡ್​ ಕ್ಲಬ್ ಚಾಂಪಿಯನ್ಸ್ ಟಿ20 ಟೂರ್ನಿ ಆಯೋಜಿಸುವುದಿಲ್ಲ ಎಂದು ಐಸಿಸಿ ಖಚಿತಪಡಿಸಿದೆ.

  • 2009 ರಿಂದ 2014 ರವರೆಗೆ ನಡೆದಿದ್ದ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ.
  • ಪ್ರೇಕ್ಷಕರ ಕೊರತೆ ಮತ್ತು ವಾಣಿಜ್ಯಕವಾಗಿ ಹಿನ್ನಡೆ ಅನುಭವಿಸಿದ ಕಾರಣ 2014ರಲ್ಲಿ ಟೂರ್ನಿ ಸ್ಥಗಿತಗೊಂಡಿತ್ತು.
  • 12 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ಸ್ ಲೀಗ್ ಟಿ20 ಟೂರ್ನಿ ಆಯೋಜಿಸಲು ಐಸಿಸಿ ಪ್ಲ್ಯಾನ್​ಗೆ ಹಿನ್ನಡೆ.

ವಿರೋಧಕ್ಕೆ ಕಾರಣವೇನು?

ಕ್ರಿಕೆಟ್ ಜಗತ್ತನ್ನು ಆಳುವ ಭಾರತ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಒಟ್ಟಾಗಿ ಈ ಯೋಜನೆಯನ್ನು ವಿರೋಧಿಸಲು ಪ್ರಮುಖ ಕಾರಣಗಳು ಹೀಗಿವೆ:

ಕ್ರಿಕೆಟ್ ವೇಳಾಪಟ್ಟಿ: ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತು ಐಪಿಎಲ್, ಬಿಗ್ ಬ್ಯಾಷ್‌ನಂತಹ ದೇಶೀಯ ಟಿ20 ಲೀಗ್‌ಗಳ ವೇಳಾಪಟ್ಟಿ ಈಗಾಗಲೇ ಸಂಪೂರ್ಣವಾಗಿ ಭರ್ತಿಯಾಗಿದೆ. ಮತ್ತೊಂದು ಹೊಸ ಟೂರ್ನಿಯನ್ನು ಸೇರಿಸಲು ಕ್ಯಾಲೆಂಡರ್‌ನಲ್ಲಿ ಜಾಗವೇ ಇಲ್ಲ ಎಂದು ಮಂಡಳಿಗಳು ವಾದಿಸಿವೆ.

ಐಸಿಸಿ ಟೂರ್ನಿಗಳ ಕಡಿತಕ್ಕೆ ಪಟ್ಟು: ಒಂದು ವೇಳೆ ಚಾಂಪಿಯನ್ಸ್ ಲೀಗ್‌ಗೆ ವಿಂಡೋ ನೀಡಬೇಕಾದರೆ, ಐಸಿಸಿ ತನ್ನ ಪ್ರಮುಖ ಟೂರ್ನಿಗಳಾದ ವಿಶ್ವಕಪ್ ಅಥವಾ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳನ್ನು ಕಡಿಮೆ ಮಾಡಬೇಕು ಎಂದು ಈ ಮೂರು ಮಂಡಳಿಗಳು ಪಟ್ಟು ಹಿಡಿದಿದ್ದವು. ಆದರೆ ಇದಕ್ಕೆ ಐಸಿಸಿ ಒಪ್ಪದ ಕಾರಣ, ಯೋಜನೆ ನನೆಗುದಿಗೆ ಬಿದ್ದಿದೆ.

ಇದನ್ನೂ ಓದಿ: ಪಾಕಿಸ್ತಾನಕ್ಕೆ ಭಾರೀ ಮುಖಭಂಗ: ಟೂರ್ನಿಯಿಂದಲೇ ಕಿಕ್ ಔಟ್!

ಒಟ್ಟಾರೆಯಾಗಿ ಹೇಳುವುದಾದರೆ, ಐಸಿಸಿಯ ಈ ನಿರ್ಧಾರವು ವಿಶ್ವ ಕ್ರಿಕೆಟ್‌ನಲ್ಲಿ ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಮಂಡಳಿಗಳ ಒಕ್ಕೂಟದ ಶಕ್ತಿ ಎಷ್ಟಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಟಿ20 ಲೀಗ್‌ಗಳ ಜನಪ್ರಿಯತೆ ಹೆಚ್ಚುತ್ತಿದ್ದರೂ, ಅಂತರರಾಷ್ಟ್ರೀಯ ಪಂದ್ಯಗಳ ಮೌಲ್ಯ ಮತ್ತು ಆಟಗಾರರ ದೈಹಿಕ ಸಾಮರ್ಥ್ಯವನ್ನು ಕಾಪಾಡುವುದು ಅನಿವಾರ್ಯವಾಗಿದೆ. ಸದ್ಯಕ್ಕೆ ಫ್ರಾಂಚೈಸಿ ಕ್ರಿಕೆಟ್‌ನ ಈ ಮಹಾಸಂಗ್ರಾಮಕ್ಕೆ ಬ್ರೇಕ್ ಬಿದ್ದಿರುವುದು ಅಭಿಮಾನಿಗಳಿಗೆ ಕೊಂಚ ನಿರಾಸೆ ಮೂಡಿಸಿದರೂ, ಮುಂಬರುವ ದ್ವಿಪಕ್ಷೀಯ ಸರಣಿಗಳು ಮತ್ತು ಐಸಿಸಿ ಟೂರ್ನಿಗಳ ರೋಮಾಂಚನವನ್ನು ಇದು ಮತ್ತಷ್ಟು ಹೆಚ್ಚಿಸಲಿದೆ.

 

Published On - 8:55 am, Tue, 6 October 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us