AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನಕ್ಕೆ ಭಾರೀ ಮುಖಭಂಗ: ಟೂರ್ನಿಯಿಂದಲೇ ಕಿಕ್ ಔಟ್!

ಯುಎಇ ಅಂಗಳದಲ್ಲಿ ಹಳೆಯ ದಿಗ್ಗಜರ ಹೈ-ವೋಲ್ಟೇಜ್ ಕ್ರಿಕೆಟ್ ಕದನವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿಗೆ ನಿರಾಸೆಯ ಸುದ್ದಿಯೊಂದು ಹೊರಬಿದ್ದಿದೆ. ಯುವರಾಜ್ ಸಿಂಗ್ ನೇತೃತ್ವದ ಭಾರತ ಚಾಂಪಿಯನ್ಸ್ ಮತ್ತು ಶಾಹಿದ್ ಅಫ್ರಿದಿ ಸಾರಥ್ಯದ ಪಾಕಿಸ್ತಾನ್ ಚಾಂಪಿಯನ್ಸ್ ನಡುವಿನ ಮಹಾ ಮುಖಾಮುಖಿಯು, ಪಾಕಿಸ್ತಾನ ಕ್ರಿಕೆಟ್ ಮಂಡಳಿ  ಮತ್ತು ಆಯೋಜಕರ ನಡುವಿನ 'ಎನ್‌ಒಸಿ' ವಿವಾದದಿಂದಾಗಿ ರದ್ದಾಗಿದೆ.

ಪಾಕಿಸ್ತಾನಕ್ಕೆ ಭಾರೀ ಮುಖಭಂಗ: ಟೂರ್ನಿಯಿಂದಲೇ ಕಿಕ್ ಔಟ್!
Pakistan Image Credit source: WCL
ಝಾಹಿರ್ ಯೂಸುಫ್
|

Updated on: Oct 06, 2026 | 8:25 AM

Share

ಮಾಜಿ ಆಟಗಾರರ ಟಿ20 ಲೀಗ್ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಟೂರ್ನಿಯಿಂದ ಪಾಕಿಸ್ತಾನ್ ಚಾಂಪಿಯನ್ಸ್ ತಂಡವನ್ನು ಕೈ ಬಿಡಲಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಆಟಗಾರರಿಗೆ ಆಡಲು ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಿದ್ದೇ ಇದಕ್ಕೆ ಮುಖ್ಯ ಕಾರಣವಾಗಿದೆ. ಹೀಗಾಗಿ ಈ ಬಾರಿಯ ವರ್ಲ್ಡ್​ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ಇರುವುದಿಲ್ಲ ಎಂದು ಆಯೋಜಕರು ಖಚಿತಪಡಿಸಿದ್ದಾರೆ.

ವಿವಾದದ ಹಿನ್ನೆಲೆ ಏನು?

ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಆಟಗಾರರಿಗೆ ನಿರಾಕ್ಷೇಪಣಾ ಪತ್ರ ನೀಡಲು ನಿರಾಕರಿಸಲು ಕಾರಣ ಕಳೆದ 2025ರ ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಟೂರ್ನಿಯ ಕಂಡು ಬಂದ ವಿವಾದ. 2025ರಲ್ಲಿ ನಡೆದಿದ್ದ ಟೂರ್ನಿಯ ವೇಳೆ, ಜಮ್ಮು-ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಉಂಟಾಗಿದ್ದ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯಿಂದಾಗಿ ಯುವರಾಜ್ ಸಿಂಗ್ ನೇತೃತ್ವದ ಭಾರತ ಚಾಂಪಿಯನ್ಸ್ ತಂಡ, ಪಾಕಿಸ್ತಾನ್ ವಿರುದ್ಧದ ಲೀಗ್ ಮತ್ತು ಸೆಮಿಫೈನಲ್ ಪಂದ್ಯಗಳನ್ನು ಆಡಲು ನಿರಾಕರಿಸಿ ವಾಕ್‌ಓವರ್ ನೀಡಿತ್ತು. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಕಠಿಣ ಷರತ್ತು ಹಾಕಿದ್ದ ಪಾಕ್:

ಈ ಬಾರಿಯ ಸೀಸನ್​ನಲ್ಲಿ ಪಾಕಿಸ್ತಾನ್ ತಂಡ ಭಾಗವಹಿಸಲು WCL ಮಂಡಳಿಯು ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಜೊತೆ ಮಾತುಕತೆ ನಡೆಸಿತ್ತು. ಆ ವೇಳೆ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಎರಡು ಮುಖ್ಯ ಷರತ್ತುಗಳನ್ನು ಮುಂದಿಟ್ಟಿದ್ದರು…

  1.  ಲಿಖಿತ ಕ್ಷಮಾಪಣೆ: ಕಳೆದ ವರ್ಷ ಪಾಕಿಸ್ತಾನ್ ವಿರುದ್ಧ ಮೈದಾನಕ್ಕಿಳಿಯದಿದ್ದಕ್ಕೆ ಭಾರತೀಯ ಆಟಗಾರರು ಲಿಖಿತವಾಗಿ ಕ್ಷಮೆಯಾಚಿಸಬೇಕು.
  2.  ಶೇಕ್ ಹ್ಯಾಂಡ್ ಭರವಸೆ: ಈ ಬಾರಿ ಪಂದ್ಯ ಮುಗಿದ ಬಳಿಕ ಭಾರತದ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಶೇಕ್ ಹ್ಯಾಂಡ್ ಮಾಡಲು ಒಪ್ಪಿಕೊಳ್ಳಬೇಕು.

ಪಾಕಿಸ್ತಾನಕ್ಕೆ ಮುಖಭಂಗ:

ಪಾಕಿಸ್ತಾನ ಮಂಡಳಿಯ ವಾಣಿಜ್ಯ ಮತ್ತು ಆರ್ಥಿಕ ಷರತ್ತುಗಳಿಗೆ ಒಪ್ಪಿಗೆ ಸೂಚಿಸಿದ್ದ WCL ಮ್ಯಾನೇಜ್‌ಮೆಂಟ್, ಭಾರತೀಯ ಆಟಗಾರರ ಕ್ಷಮೆಯಾಚನೆ ಮತ್ತು ಶೇಕ್ ಹ್ಯಾಂಡ್ ಕಡ್ಡಾಯ ನಿಯಮದ ಷರತ್ತುಗಳನ್ನು ನೇರವಾಗಿ ತಿರಸ್ಕರಿಸಿತು. ರಾಜಕೀಯ ಹಾಗೂ ಕ್ರೀಡಾ ಸಮಗ್ರತೆಯನ್ನು ಕಾಪಾಡುವ ದೃಷ್ಟಿಯಿಂದ ಭಾರತದ ಆಟಗಾರರ ಮೇಲೆ ಇಂತಹ ಒತ್ತಡ ಹೇರಲು ಸಾಧ್ಯವಿಲ್ಲ ಎಂದು ಆಯೋಜಕರು ಸ್ಪಷ್ಟಪಡಿಸಿದರು.

ಅಲ್ಲದೆ ಈ ಎರಡು ಷರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್  ಆಯೋಜಕರು ಖಂಡತುಂಡವಾಗಿ ಪಾಕಿಸ್ತಾನ್ ಕ್ರಿಕೆಟ್​ ಮಂಡಳಿಗೆ ತಿಳಿಸಿದೆ. ಇತ್ತ WCL ಮಂಡಳಿಯು ತನ್ನ ಬೇಡಿಕೆಗಳನ್ನು ತಿರಸ್ಕರಿಸಿದ ತಕ್ಷಣ, ಪಾಕಿಸ್ತಾನ್ ಕ್ರಿಕೆಟ್​ ಮಂಡಳಿ ತನ್ನ ಆಟಗಾರರಿಗೆ ಎನ್​ಒಸಿ ನೀಡದಿರಲು ಅಂತಿಮ ತೀರ್ಮಾನ ತೆಗೆದುಕೊಂಡಿತು.

ಈ ಬೆಳವಣಿಗೆಯ ಬೆನ್ನಲ್ಲೇ, ವರ್ಲ್ಡ್ ಚಾಂಪಿಯನ್ಸ್ ಆಫ್ ಲೆಜೆಂಡ್ಸ್ ಆಯೋಜಕರು ಪಾಕಿಸ್ತಾನ್ ತಂಡವನ್ನು ಟೂರ್ನಿಯಿಂದಲೇ ಅಧಿಕೃತವಾಗಿ ಕೈ ಬಿಟ್ಟಿದ್ದಾರೆ.

6 ತಂಡಗಳ ಟೂರ್ನಿ:

ಪಾಕಿಸ್ತಾನದ ನಿರ್ಗಮನದ ಬಳಿಕ WCL ಮಂಡಳಿಯು ಅಧಿಕೃತ ಪ್ರಕಟಣೆ ಹೊರಡಿಸಿದ್ದು, “ಕೆಲವು ಅನಿವಾರ್ಯ ಕಾರಣಗಳಿಂದಾಗಿ ಪಾಕಿಸ್ತಾನ್ ಚಾಂಪಿಯನ್ಸ್ ಈ ಬಾರಿ ಭಾಗವಹಿಸುತ್ತಿಲ್ಲ. ಆದರೆ ಕ್ರೀಡೆ ಮುಂದುವರಿಯಲಿದ್ದು, ಇನ್ನುಳಿದ 6 ತಂಡಗಳೊಂದಿಗೆ ಸೀಸನ್ 3 ಯಶಸ್ವಿಯಾಗಿ ನಡೆಯಲಿದೆ” ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಏನಿದು ಹಾಂಗ್ ಕಾಂಗ್ ಸಿಕ್ಸಸ್ ಟೂರ್ನಿ? ಇದರ ನಿಯಮಗಳೇನು ಗೊತ್ತಾ?

ಒಟ್ಟಾರೆಯಾಗಿ ಹೇಳುವುದಾದರೆ, ಕ್ರೀಡಾಂಗಣದ ಒಳಗಿನ ಜಿದ್ದಾಜಿದ್ದಿಗಿಂತ ಹೆಚ್ಚಾಗಿ, ಕ್ರೀಡಾಂಗಣದ ಹೊರಗಿನ ಹಠ ಹಾಗೂ ಭೌಗೋಳಿಕ ರಾಜಕೀಯದ ಎಳೆದಾಟಕ್ಕೆ ಈ ಬಾರಿಯ ಭಾರತ-ಪಾಕಿಸ್ತಾನ್ ಮಹಾಕದನ ಬಲಿಯಾಗಿದೆ. ದುಬೈ ಅಂಗಳದಲ್ಲಿ ಹಳೆಯ ದಿನಗಳ ನೆನಪನ್ನು ಮರುಕಳಿಸಬೇಕಾಗಿದ್ದ ಶಾಹಿದ್ ಅಫ್ರಿದಿ ಹಾಗೂ ಯುವರಾಜ್ ಸಿಂಗ್ ಅವರಂತಹ ದಿಗ್ಗಜರ ಮುಖಾಮುಖಿಯನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿಗೆ PCB ನಿರ್ಧಾರ ತೀವ್ರ ನಿರಾಶೆ ಮೂಡಿಸಿರುವುದಂತೂ ಸುಳ್ಳಲ್ಲ. ಆದಾಗ್ಯೂ, ಪಾಕಿಸ್ತಾನದ ಅನುಪಸ್ಥಿತಿಯಲ್ಲೂ ಇನ್ನುಳಿದ ಆರು ಬಲಿಷ್ಠ ತಂಡಗಳ ನಡುವಿನ ಸರಣಿ ರೋಚಕವಾಗಿ ಮುಂದುವರಿದಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More