ಹೇಗಾದರೂ ಮಾಡಿ ಬಿಸಿಸಿಐ ಅನ್ನು ಒಂದು ವಿಚಾರದಲ್ಲಾದರೂ ಹಿಂದಡಿ ಇಡುವಂತೆ ಮಾಡುವ ಪಾಕಿಸ್ತಾನದ ಸತತ ಪ್ರಯತ್ನಗಳ್ಯಾವು ಕೈಗೂಡುತ್ತಿಲ್ಲ. ಪ್ರತಿ ದಿನ ಹೊಸ ಹೊಸ ಕ್ಯಾತೆ ತೆಗೆದು ಬಿಸಿಸಿಐ ವಿರುದ್ಧ ಹೇಳಿಕೆಗಳನ್ನು ನೀಡುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆ ಬಳಿಕ ಐಸಿಸಿಯ ಖಡಕ್ ಸೂಚನೆಗೆ ತನ್ನ ಬಾಯಿ ಮುಚ್ಚಿಕೊಳ್ಳುತ್ತಿದೆ. ಆದರೂ ತನ್ನ ಛಾಳಿ ಮುಂದುವರೆಸಿ, ವಿವಾದಿತ ಪ್ರದೇಶವಾದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನವನ್ನು ಏರ್ಪಡಿಸುವ ಮೂಲಕ ಭಾರತಕ್ಕೆ ತಿರುಗೇಟು ನೀಡಲು ಮುಂದಾಗಿದ್ದ ಪಾಕಿಸ್ತಾನದ ತೀರ್ಮಾನಕ್ಕೆ, ಐಸಿಸಿ ಕಡಿವಾಣ ಹಾಕಿತ್ತು. ಬಿಸಿಸಿಐನಿಂದ ತೀವ್ರ ವಿರೋಧ ವ್ಯಕ್ತವಾದ ಬಳಿಕ ಐಸಿಸಿ, ಚಾಂಪಿಯನ್ಸ್ ಟ್ರೋಫಿಯನ್ನು ಪಿಒಕೆಗೆ ಕೊಂಡೊಯ್ಯದಂತೆ ಸೂಚಿಸಿತ್ತು. ಇದೀಗ ಐಸಿಸಿ ಸೂಚನೆ ಮೇರೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನವನ್ನು ಪಿಒಕೆಯಲ್ಲಿ ನಡೆಸದಿರಲು ತೀರ್ಮಾನಿಸಿದೆ.
ಪಿಸಿಬಿ ಮೂಲವೊಂದು ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿರುವಂತೆ, ‘ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನವನ್ನು ಪಾಕಿಸ್ತಾನದ ಯಾವ್ಯಾವ ನಗರಗಳಲ್ಲಿ ನಡೆಸಬೇಕು ಎಂಬುದನ್ನು ಪಿಸಿಬಿ, ಐಸಿಸಿಯೊಂದಿಗೆ ಚರ್ಚೆ ನಡೆಸುತ್ತಿದೆ. ಅಂತಿಮವಾಗಿ ಐಸಿಸಿ ತೆಗೆದುಕೊಳ್ಳುವ ನಿರ್ಧಾರದಂತೆ ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನವನ್ನು ಆಯೋಜಿಸಲಿದೆ ಎಂದು ವರದಿಯಾಗಿದೆ.
ವಾಸ್ತವವಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತನ್ನ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನ ಎಲ್ಲೆಲ್ಲಿ ನಡೆಯಲಿದೆ ಎಂಬುದರ ಬಗ್ಗೆ ಮಾಹಿತಿ ನೀಡಿ ಪೋಸ್ಟ್ವೊಂದನ್ನು ಹಂಚಿಕೊಂಡಿತ್ತು. ಇದರಲ್ಲಿ ವಿವಾದಿತ ಪ್ರದೇಶವಾದ ಪಾಕ್ ಆಕ್ರಮಿತ ಕಾಶ್ಮೀರದ ಕೆಲವು ನಗರಗಳು ಸೇರಿದ್ದವು. ಇದನ್ನು ನೋಡಿದ್ದ ಬಿಸಿಸಿಐ ಕಾರ್ಯದರ್ಶಿ ಹಾಗೂ ಮುಂದಿನ ಐಸಿಸಿ ಅಧ್ಯಕ್ಷ ಜಯ್ ಶಾ, ಪಿಸಿಬಿ ಪಿಒಕೆಯಲ್ಲಿ ಟ್ರೋಫಿಯ ಪ್ರದರ್ಶನವನ್ನು ಆಯೋಜಿಸುತ್ತಿರುವುದು ಸ್ವೀಕಾರಾರ್ಹವಲ್ಲ ಎಂದು ಐಸಿಸಿಗೆ ತಿಳಿಸಿದ್ದರು ಎಂದು ಬಿಸಿಸಿಐನ ಉನ್ನತ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿಯಾಗಿತ್ತು.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನು ಆಯೋಜಿಸುವ ಪಿಸಿಬಿ ಕಲ್ಪನೆಗೆ ಬಿಸಿಸಿಐ ಕಾರ್ಯದರ್ಶಿ ಶಾ ಆಕ್ಷೇಪ ವ್ಯಕ್ತಪಡಿಸಿದ್ದರು. ಪಾಕಿಸ್ತಾನದ ಯಾವುದೇ ನಗರದಲ್ಲಿ ಅಥವಾ ಪಿಒಕೆ ಹೊರಗಿನ ಕ್ರೀಡಾಂಗಣ ಅಥವಾ ಮಾಲ್‌ನಲ್ಲಿ ಈವೆಂಟ್ ಅನ್ನು ಆಯೋಜಿಸಲು ಬಿಸಿಸಿಐಗೆ ಯಾವುದೇ ಸಮಸ್ಯೆ ಇಲ್ಲ. ಆದರೆ ಪಿಒಕೆಯಲ್ಲಿ ಮಾತ್ರ ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನಕ್ಕೆ ನಮ್ಮ ವಿರೋಧವಿದೆ ಎಂಬುದನ್ನು ಜಯ್ ಶಾ ಐಸಿಸಿಗೆ ತಿಳಿಸಿದ್ದರು. ಹೀಗಾಗಿ ಬಿಸಿಸಿಐ ಮನವಿಯನ್ನು ಪುರಸ್ಕರಿಸಿದ್ದ ಐಸಿಸಿ, ಪಾಕಿಸ್ತಾನಕ್ಕೆ ಟ್ರೋಫಿ ಪ್ರದರ್ಶನದ ವೇಳಾಪಟ್ಟಿಯನ್ನು ಬದಲಿಸುವಂತೆ ಸೂಚನೆ ನೀಡಿತ್ತು. ಐಸಿಸಿಯ ಸೂಚನೆಯಂತೆ ಇದೀಗ ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನವನ್ನು ಪಿಒಕೆಯಲ್ಲಿ ನಡೆಸದಿರಲು ಪಾಕಿಸ್ತಾನ ತೀರ್ಮಾನಿಸಿದೆ.
ಐಸಿಸಿಯ ಹೊಸ ವೇಳಾಪಟ್ಟಿಯ ಪ್ರಕಾರ, ಚಾಂಪಿಯನ್ಸ್ ಟ್ರೋಫಿ ನವೆಂಬರ್ 16 ರಂದು ಇಸ್ಲಾಮಾಬಾದ್, ನವೆಂಬರ್ 17 ರಂದು ತಕ್ಷಿಲಾ ಮತ್ತು ಖಾನ್ಪುರ್, ನವೆಂಬರ್ 18 ರಂದು ಅಬೋಟಾಬಾದ್, ನವೆಂಬರ್ 19 ರಂದು ಮುರ್ರೆ, ನವೆಂಬರ್ 20 ರಂದು ನಾಥಿಯಾ ಗಲಿ ಮತ್ತು ನವೆಂಬರ್ 22 ರಿಂದ 25 ರವರೆಗೆ ಕರಾಚಿಯಲ್ಲಿ ಪ್ರದರ್ಶನಗೊಳ್ಳಲಿದೆ. ಇದಾದ ಬಳಿಕ ಈ ಟೂರ್ನಿಯಲ್ಲಿ ಆಡಲಿರುವ ಉಳಿದ 7 ದೇಶಗಳಿಗೆ ಟ್ರೋಫಿಯನ್ನು ಕಳುಹಿಸಲಾಗುವುದು. ಇದರಲ್ಲಿ ಭಾರತದ ಹೆಸರೂ ಸೇರಿದೆ. ಚಾಂಪಿಯನ್ಸ್ ಟ್ರೋಫಿಯ ಪ್ರದರ್ಶನವು 15 ಜನವರಿ 2025 ರಿಂದ 26 ಜನವರಿ 2025 ರವರೆಗೆ ಭಾರತದಲ್ಲಿ ನಡೆಯುತ್ತದೆ. ನಂತರ ಪಂದ್ಯಾವಳಿಯ ಆತಿಥೇಯ ಪಾಕಿಸ್ತಾನಕ್ಕೆ ಟ್ರೋಫಿ ಹಿಂತಿರುಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:06 pm, Sat, 16 November 24