ಫೈನಲ್ ಪಂದ್ಯಕ್ಕೆ ರಿಚರ್ಡ್ ಕೆಟಲ್‌ಬರೋ ಅಂಪೈರ್! ಭಾರತಕ್ಕೆ ಸೋಲು ಖಚಿತ ಎಂದ ಫ್ಯಾನ್ಸ್..!

|

Updated on: Nov 18, 2023 | 9:01 AM

IND vs AUS Final, ICC World Cup 2023: ಐಸಿಸಿ, ಫೈನಲ್ ಪಂದ್ಯಕ್ಕೆ ಅಂಪೈರ್​ಗಳ ಹೆಸರನ್ನು ಅಂತಿಮಗೊಳಿಸಿದೆ. ಇದರಲ್ಲಿ ಆಯ್ಕೆಯಾಗಿರುವ ಇಬ್ಬರು ಅಂಪೈರ್​ಗಳ ಹೆಸರನ್ನು ಕೇಳಿ ಟೀಂ ಇಂಡಿಯಾ ಅಭಿಮಾನಿಗಳು ಭಾರಿ ನಿರಾಸೆಗೊಂಡಿದ್ದು, ಫೈನಲ್ ಪಂದ್ಯದಲ್ಲಿ ಭಾರತ ಸೋಲುವುದು ಖಚಿತ ಎನ್ನುತ್ತಿದ್ದಾರೆ.

ಫೈನಲ್ ಪಂದ್ಯಕ್ಕೆ ರಿಚರ್ಡ್ ಕೆಟಲ್‌ಬರೋ ಅಂಪೈರ್! ಭಾರತಕ್ಕೆ ಸೋಲು ಖಚಿತ ಎಂದ ಫ್ಯಾನ್ಸ್..!
ವಿಶ್ವಕಪ್ ಫೈನಲ್
Follow us on

ಭಾರತ ಮತ್ತು ಆಸ್ಟ್ರೇಲಿಯಾ (India Vs Australia) ನಡುವೆ ನಡೆಯಲ್ಲಿರುವ 2023 ರ ಏಕದಿನ ವಿಶ್ವಕಪ್​ನ (ICC World Cup 2023) ಫೈನಲ್ ಪಂದ್ಯಕ್ಕೆ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ (Narendra Modi Stadium in Ahmedabad) ಸಜ್ಜಾಗಿದೆ. ಈ ಉಭಯ ತಂಡಗಳು ಬರೋಬ್ಬರಿ 20 ವರ್ಷಗಳ ನಂತರ ಐಸಿಸಿ ಟೂರ್ನಿಯ ಫೈನಲ್ ಪಂದ್ಯ ಆಡುತ್ತಿವೆ. ಭಾರತವೇ ಫೈನಲ್ ಪಂದ್ಯದ ಗೆಲ್ಲುವ ಫೆವರೇಟ್ ಎನಿಸಿಕೊಂಡಿದ್ದರೂ ಅಭಿಮಾನಿಗಳಿಗೆ ಮಾತ್ರ ಅದೊಂದು ಆತಂಕ ಕಾಡಲಾರಂಭಿಸಿದೆ. ವಾಸ್ತವವಾಗಿ ಐಸಿಸಿ, ಫೈನಲ್ ಪಂದ್ಯಕ್ಕೆ ಅಂಪೈರ್​ಗಳ ಹೆಸರನ್ನು ಅಂತಿಮಗೊಳಿಸಿದೆ. ಇದರಲ್ಲಿ ಆಯ್ಕೆಯಾಗಿರುವ ಇಬ್ಬರು ಅಂಪೈರ್​ಗಳ ಹೆಸರನ್ನು ಕೇಳಿ ಟೀಂ ಇಂಡಿಯಾ ಅಭಿಮಾನಿಗಳು ಭಾರಿ ನಿರಾಸೆಗೊಂಡಿದ್ದು, ಫೈನಲ್ ಪಂದ್ಯದಲ್ಲಿ ಭಾರತ ಸೋಲುವುದು ಖಚಿತ ಎನ್ನುತ್ತಿದ್ದಾರೆ. ಅಷ್ಟಕ್ಕೂ ಅಭಿಮಾನಿಗಳ ಈ ಆತಂಕಕ್ಕೆ ಕಾರಣವಾಗಿರುವ ಆ ಅಂಪೈರ್​ಗಳು ಯಾರು? ಅವರನ್ನು ಯಾಕೆ ಐರನ್ ಲೆಗ್ ಅಂಪೈರ್ಸ್​ ಎನ್ನುತ್ತಾರೆ ಎಂಬುದಕ್ಕೆ ವಿವರ ಇಲ್ಲಿದೆ.

ಫೈನಲ್ ಪಂದ್ಯಕ್ಕೆ ಇವರೇ ಅಂಪೈರ್ಸ್

ಐಸಿಸಿ ರಿಚರ್ಡ್ ಕೆಟಲ್‌ಬರೋ, ರಿಚರ್ಡ್ ಇಲ್ಲಿಂಗ್‌ವರ್ತ್ ಮತ್ತು ಜೋಯಲ್ ವಿಲ್ಸನ್ ಅವರನ್ನು ಫೈನಲ್ ಪಂದ್ಯಕ್ಕೆ ತೀರ್ಪುಗಾರರನ್ನಾಗಿ ನೇಮಿಸಿದೆ. ನವೆಂಬರ್ 19, ಭಾನುವಾರದಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಅಂತಿಮ ಪಂದ್ಯದಲ್ಲಿ ಜಿಂಬಾಬ್ವೆಯ ಆಂಡಿ ಪೈಕ್ರಾಫ್ಟ್ ಮ್ಯಾಚ್ ರೆಫರಿಯಾಗಲಿದ್ದಾರೆ. ಇಂಗ್ಲಿಷ್ ಅಂಪೈರ್‌ಗಳಾದ ರಿಚರ್ಡ್ ಕೆಟಲ್‌ಬರೋ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ ಅವರನ್ನು ಆನ್-ಫೀಲ್ಡ್ ಅಂಪೈರ್‌ಗಳಾಗಿ ಹೆಸರಿಸಲಾಗಿದ್ದು, ಟ್ರಿನಿಡಾಡ್ ಮತ್ತು ಟೊಬಾಗೋದ ಜೋಯಲ್ ವಿಲ್ಸನ್ ಮೂರನೇ ಅಂಪೈರ್‌ನ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಆಂಡಿ ಪೈಕ್ರಾಫ್ಟ್ ಅವರು ಫೈನಲ್‌ನಲ್ಲಿ ಮ್ಯಾಚ್ ರೆಫರಿಯಾಗಿ ಉಪಸ್ಥಿತರಿರುತ್ತಾರೆ.

ಏರ್ ಶೋ, ಡ್ರೋನ್ ಶೋ, ಮ್ಯೂಸಿಕ್ ಶೋ..; ವಿಶ್ವಕಪ್ ಸಮಾರೋಪ ಸಮಾರಂಭದಲ್ಲಿ ಏನೆಲ್ಲ ಇರಲಿದೆ ಗೊತ್ತಾ?

ಭಾರತ ಗೆದ್ದಿದ್ದಕ್ಕಿಂತ ಸೋತಿದ್ದೆ ಹೆಚ್ಚು!

ವಾಸ್ತವವಾಗಿ ಟೀಂ ಇಂಡಿಯಾ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿರುವ ಆ ಇಬ್ಬರು ಅಂಪೈರ್​ಗಳೆಂದರೆ ರಿಚರ್ಡ್ ಕೆಟಲ್‌ಬರೋ ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್. ಅದರಲ್ಲೂ ರಿಚರ್ಡ್ ಕೆಟಲ್‌ಬರೋ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಆಡಿರುವ 5 ನಾಕೌಟ್ ಪಂದ್ಯಗಳಲ್ಲಿ ಅಂಪೈರಿಂಗ್ ಮಾಡಿದ್ದಾರೆ. ದುರಾದೃಷ್ಟವಶಾತ್ ಆ 5 ಪಂದ್ಯಗಳಲ್ಲಿಯೂ ಟೀಂ ಇಂಡಿಯಾ ಸೋತಿದೆ.

ರಿಚರ್ಡ್ ಕೆಟಲ್‌ಬರೋ ಅವರ ಅಂಪೈರಿಂಗ್​ನಲ್ಲಿ ಟೀಂ ಇಂಡಿಯಾ 2014ರ ಟಿ20 ವಿಶ್ವಕಪ್ ಫೈನಲ್, 2016ರ ಟಿ20 ವಿಶ್ವಕಪ್ ಸೆಮಿಫೈನಲ್, 2015ರ ವಿಶ್ವಕಪ್ ಸೆಮಿಫೈನಲ್, 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಮತ್ತು 2019ರ ವಿಶ್ವಕಪ್ ಸೆಮಿಫೈನಲ್ ಆಡಿದ್ದು, ಈ ಐದೂ ಪಂದ್ಯಗಳಲ್ಲೂ ಟೀಂ ಇಂಡಿಯಾ ಸೋಲನುಭವಿಸಿತ್ತು. ಇದೀಗ ಟೀಂ ಇಂಡಿಯಾ 11 ವರ್ಷಗಳ ಬಳಿಕ ಏಕದಿನ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದು, ರಿಚರ್ಡ್ ಕೆಟಲ್‌ಬರೋ ಅಂಪೈರ್ ಆಗಿ ನೇಮಕಗೊಂಡಿರುವುದು ಭಾರತೀಯ ಅಭಿಮಾನಿಗಳ ಭಯವನ್ನು ಹೆಚ್ಚಿಸಿದೆ.

ಫೈನಲ್ ಪಂದ್ಯದಲ್ಲಿ ರಿಚರ್ಡ್ ಕೆಟಲ್‌ಬರೋ ಅವರೊಂದಿಗೆ ರಿಚರ್ಡ್ ಇಲ್ಲಿಂಗ್‌ವರ್ತ್ ಆನ್​ಫೀಲ್ಡ್ ಅಂಪೈರ್ ಆಗಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ವಾಸ್ತವವಾಗಿ ಈ ಇಬ್ಬರೂ 2019 ರಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ತೀರ್ಪುಗಾರರಾಗಿದ್ದರು. ಆ ಪಂದ್ಯದಲ್ಲಿ ಟೀಂ ಇಂಡಿಯಾ ಸೋಲನ್ನು ಎದುರಿಸಬೇಕಾಯಿತು.

ಸಮಾಧಾನಕರ ಸಂಗತಿಯೆಂದರೆ

ಆದಾಗ್ಯೂ ಸಮಾಧಾನಕರ ಸಂಗತಿಯೆಂದರೆ, ಈ ಬಾರಿಯ ವಿಶ್ವಕಪ್​ನಲ್ಲಿ ಇವರ ಅಂಪೈರಿಂಗ್​ನಲ್ಲಿ ನಡೆದ ಪಂದ್ಯಗಳಲ್ಲಿ ಭಾರತ ಗೆಲುವು ಸಾಧಿಸಿದೆ. ಈ ಹಿಂದೆ ಅಂದರೆ ನವೆಂಬರ್ 15 ರಂದು ಮುಂಬೈನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ರಿಚರ್ಡ್ ಇಲಿಂಗ್‌ವರ್ತ್ ಆನ್-ಫೀಲ್ಡ್ ಅಂಪೈರ್‌ಗಳಲ್ಲಿ ಒಬ್ಬರಾಗಿದ್ದರು. ಆದರೆ ಆ ಪಂದ್ಯವನ್ನು ಭಾರತ ಗೆದ್ದು ಬೀಗಿತ್ತು.

ಫೈನಲ್ ಪಂದ್ಯಕ್ಕೆ ಅಂಪೈರ್​ಗಳ ಪಟ್ಟಿ

  • ಆನ್-ಫೀಲ್ಡ್ ಅಂಪೈರ್‌ಗಳು: ರಿಚರ್ಡ್ ಕೆಟಲ್‌ಬರೋ (ಇಂಗ್ಲೆಂಡ್) ಮತ್ತು ರಿಚರ್ಡ್ ಇಲ್ಲಿಂಗ್‌ವರ್ತ್ (ಇಂಗ್ಲೆಂಡ್)
  • ಮೂರನೇ ಅಂಪೈರ್: ಜೋಯಲ್ ವಿಲ್ಸನ್ (ಟ್ರಿನಿಡಾಡ್ ಮತ್ತು ಟೊಬಾಗೊ)
  • ನಾಲ್ಕನೇ ಅಂಪೈರ್: ಕ್ರಿಸ್ಟೋಫರ್ ಗಾಫ್ನಿ (ನ್ಯೂಜಿಲೆಂಡ್)
  • ಪಂದ್ಯದ ರೆಫರಿ: ಆಂಡಿ ಪೈಕ್ರಾಫ್ಟ್ (ಜಿಂಬಾಬ್ವೆ)

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ