
ಕ್ರಿಕೆಟ್ ಜಗತ್ತಿನಲ್ಲಿ ಅಂಪೈರಿಂಗ್ ಗೊಂದಲಗಳಿಗೆ ತೆರೆ ಎಳೆಯಲು ಮತ್ತು ನಿರ್ಧಾರಗಳಲ್ಲಿ ಮತ್ತಷ್ಟು ಪಾರದರ್ಶಕತೆ ತರಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಕ್ಟೋಬರ್ 1, 2026 ರಿಂದ ಅನ್ವಯವಾಗುವಂತೆ ಕ್ರಿಕೆಟ್‌ನ ನಿಯಮಾವಳಿಗಳಿಗೆಭಾರಿ ಬದಲಾವಣೆ ತಂದಿದೆ. ಈ ಹೊಸ ನಿಯಮಗಳಲ್ಲಿ ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾಗಿರುವುದು ಮತ್ತು ನಾನ್-ಸ್ಟ್ರೈಕರ್ ಬ್ಯಾಟರ್‌ಗಳ ಪಾಲಿಗೆ ವರದಾನವಾಗಿರುವುದು “ರನ್-ಔಟ್ ಮತ್ತು ಸ್ಟಂಪಿಂಗ್” ನಿಯಮದ ತಿದ್ದುಪಡಿ. ಹಾಗಾದರೆ ಏನಿದು ಹೊಸ ನಿಯಮ? ಇದರಿಂದ ಪಂದ್ಯದ ಮೇಲಾಗುವ ಪರಿಣಾಮಗಳೇನು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಳೆಯ ನಿಯಮದ ಪ್ರಕಾರ, ಸ್ಟ್ರೈಕರ್ ಬ್ಯಾಟರ್ ಹೊಡೆದ ನೇರ ಶಾಟ್ ಬೌಲರ್‌ನ ಕೈ ಅಥವಾ ಯಾವುದೇ ಬೆರಳಿಗೆ ಸವರಿಕೊಂಡು ಹೋಗಿ ನಾನ್-ಸ್ಟ್ರೈಕರ್ ತುದಿಯ ವಿಕೆಟ್‌ಗೆ ತಾಗಿದರೆ, ಆ ವೇಳೆ ಬ್ಯಾಟರ್ ಕ್ರೀಸ್‌ನಿಂದ ಹೊರಗಿದ್ದರೆ ರನೌಟ್ ನೀಡಲಾಗುತ್ತಿತ್ತು. ಆದರೆ ಇನ್ಮುಂದೆ ಇಂತಹ ಆಕಸ್ಮಿಕ ಸ್ಪರ್ಶಗಳಿಗೆ ರನೌಟ್ ಸಿಗುವುದಿಲ್ಲ.
ಹೊಸ ನಿಯಮದ ಪ್ರಕಾರ, ರನೌಟ್ ಅಥವಾ ಸ್ಟಂಪಿಂಗ್ ಮಾನ್ಯವಾಗಬೇಕಾದರೆ ಫೀಲ್ಡರ್ ಅಥವಾ ಬೌಲರ್ “ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ” ಹೊಂದಿರಬೇಕು. ಅಂದರೆ ಚೆಂಡನ್ನು ತನ್ನ ಅಂಗೈಯಲ್ಲಿ ಸ್ಪಷ್ಟವಾಗಿ ತಡೆದು ಹಿಡಿತಕ್ಕೆ ಪಡೆದಾಗ ಮಾತ್ರ ಅದು ರನೌಟ್ ಎಂದು ಪರಿಗಣಿಸಲ್ಪಡುತ್ತದೆ.
ವಿಕೆಟ್ ಕೀಪರ್ ಮಾಡುವ ಸ್ಟಂಪಿಂಗ್‌ಗಳಿಗೂ ಈ ನಿಯಮ ಅನ್ವಯಿಸುತ್ತದೆ. ವಿಕೆಟ್ ಕೀಪರ್ ಕೈಗೆ ಚೆಂಡು ಸರಿಯಾಗಿ ಸಿಗದೆ, ಕೇವಲ ಗ್ಲೌಸ್‌ಗೆ ತಾಗಿ ವಿಕೆಟ್ ಮುರಿದರೆ ಬ್ಯಾಟರ್ ಔಟ್ ಆಗುವುದಿಲ್ಲ. ವಿಕೆಟ್ ಬೇರ್ಪಡಿಸುವ ಆ ನಿರ್ದಿಷ್ಟ ಕ್ಷಣದಲ್ಲಿ ಚೆಂಡು ಕೀಪರ್‌ನ ಸಂಪೂರ್ಣ ನಿಯಂತ್ರಣದಲ್ಲಿ ಇರಬೇಕಾದುದು ಕಡ್ಡಾಯ.
ಆಧುನಿಕ ಕ್ರಿಕೆಟ್‌ನಲ್ಲಿ ಹೈ-ಟೆಕ್ ಕ್ಯಾಮೆರಾಗಳು ಮತ್ತು ಅಲ್ಟ್ರಾ-ಎಡ್ಜ್ ತಂತ್ರಜ್ಞಾನಗಳು ಬಂದಿರುವುದರಿಂದ, ಬೌಲರ್‌ನ ಬೆರಳಿಗೆ ಚೆಂಡು ತಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವುದು ಥರ್ಡ್ ಅಂಪೈರ್‌ಗಳಿಗೆ ದೊಡ್ಡ ತಲೆನೋವಾಗಿತ್ತು. ಕೇವಲ ಒಂದು ಮಿಲಿಮೀಟರ್‌ನಷ್ಟು ಸ್ಪರ್ಶವಾಗಿದ್ದರೂ ಬ್ಯಾಟರ್‌ಗಳು ಔಟ್ ಆಗುತ್ತಿದ್ದರು. ಈಗ ಐಸಿಸಿ ತಂದಿರುವ ಈ ಹೊಸ ಸ್ಪಷ್ಟನೆಯು ಥರ್ಡ್ ಅಂಪೈರ್‌ಗಳು ನಿಖರ ಹಾಗೂ ಸುಲಭ ನಿರ್ಧಾರ ತೆಗೆದುಕೊಳ್ಳಲು ಸಹಕಾರಿಯಾಗಲಿದೆ.
ಬ್ಯಾಟರ್‌ಗಳಿಗೆ ಬಿಗ್ ರಿಲೀಫ್: ಹಳೆಯ ನಿಯಮದಲ್ಲಿದ್ದಾಗ, ಬ್ಯಾಟರ್‌ಗಳು ಸ್ಟ್ರೈಟ್ ಡ್ರೈವ್ ಹೊಡೆದ ತಕ್ಷಣ ನಾನ್-ಸ್ಟ್ರೈಕರ್ ತುದಿಯಲ್ಲಿದ್ದ ಬ್ಯಾಟರ್ ಕ್ರೀಸ್ ಒಳಗಿದ್ದರೂ ಭಯದಲ್ಲೇ ಇರಬೇಕಾಗುತ್ತಿತ್ತು. ಬೌಲರ್ ಫಾಲೋ-ಥ್ರೂನಲ್ಲಿ ಚೆಂಡು ಆಕಸ್ಮಿಕವಾಗಿ ಅವರ ಕೈಗೆ ತಾಗಿ ವಿಕೆಟ್‌ಗೆ ಬಿದ್ದರೆ ಬ್ಯಾಟರ್‌ಗಳು ದುರದೃಷ್ಟವಶಾತ್ ಔಟ್ ಆಗುತ್ತಿದ್ದರು. ಇನ್ಮುಂದೆ ಬ್ಯಾಟರ್‌ಗಳು ಈ ರೀತಿಯ ದುರದೃಷ್ಟದ ಔಟ್ ನಿಂದ ಪಾರಾಗಲಿದ್ದಾರೆ.
ಅದೃಷ್ಟದ ವಿಕೆಟ್’ ಕಳೆದುಕೊಂಡ ಬೌಲರ್‌ಗಳು: ಬೌಲರ್‌ಗಳು ಯಾವುದೇ ಶ್ರಮವಿಲ್ಲದೆ, ಕೇವಲ ಚೆಂಡು ಕೈಗೆ ಸವರಿಕೊಂಡು ಹೋಗಿ ಬೀಳುತ್ತಿದ್ದ ರನೌಟ್ ವಿಕೆಟ್‌ಗಳನ್ನು ಇನ್ಮುಂದೆ ಪಡೆಯಲು ಸಾಧ್ಯವಿಲ್ಲ. ಬೌಲರ್ ವಿಕೆಟ್ ಬೇಕೆಂದರೆ ಚೆಂಡನ್ನು ಸ್ಪಷ್ಟವಾಗಿ ತಡೆದು, ನಿಯಂತ್ರಣಕ್ಕೆ ಪಡೆದೇ ವಿಕೆಟ್‌ಗೆ ಹೊಡೆಯಬೇಕಾಗುತ್ತದೆ ಅಥವಾ ತಾಗಿಸಬೇಕಾಗುತ್ತದೆ. ಇದರಿಂದ ಬೌಲರ್‌ಗಳ ‘ಲಕ್ಕಿ ವಿಕೆಟ್’ ಅವಕಾಶ ಕಳೆದುಕೊಂಡಂತಾಗಿದೆ.
ಭಯವಿಲ್ಲದೇ ರನ್ ಓಡಬಹುದು: ಈ ಹಿಂದೆ ಚೆಂಡು ಬೌಲರ್ ಕೈ ತಾಗಬಹುದು ಎಂಬ ಹೆದರಿಕೆಯಿಂದ ನಾನ್-ಸ್ಟ್ರೈಕರ್ ಬ್ಯಾಟರ್‌ಗಳು ಕ್ರೀಸ್ ಬಿಡಲು ಹಿಂಜರಿಯುತ್ತಿದ್ದರು. ಈಗ ನಿಯಮ ಬದಲಾಗಿರುವುದರಿಂದ, ಸ್ಟ್ರೈಕರ್ ಬ್ಯಾಟರ್ ಶಾಟ್ ಹೊಡೆಯುತ್ತಿದ್ದಂತೆ ನಾನ್-ಸ್ಟ್ರೈಕರ್ ಬ್ಯಾಟರ್‌ಗಳು ಯಾವುದೇ ಭಯವಿಲ್ಲದೆ ವೇಗವಾಗಿ ರನ್ ಓಡಲು ಆರಂಭಿಸಬಹುದು. ಇದು ಸಿಂಗಲ್ಸ್ ಮತ್ತು ಡಬಲ್ಸ್ ರನ್‌ಗಳನ್ನು ಹೆಚ್ಚಿಸಲಿದೆ.
ಇದನ್ನೂ ಓದಿ: ಲುಹಾನ್ ವಿಸ್ಫೋಟಕ ಸೆಂಚುರಿ: ಕ್ರಿಸ್ ಗೇಲ್ 175 ರನ್ಗಳ ವಿಶ್ವ ದಾಖಲೆ ಧೂಳೀಪಟ!
ಒಟ್ಟಾರೆಯಾಗಿ ಹೇಳುವುದಾದರೆ, ಐಸಿಸಿಯ ಈ ಹೊಸ ತಿದ್ದುಪಡಿಯು ಬೌಲರ್‌ಗಳ ಪಾಲಿಗೆ ಅತ್ಯಂತ ಕಠಿಣ ಮತ್ತು ಸವಾಲಿನ ನಿಯಮವಾಗಿದೆ. ಕಠಿಣ ಪರಿಶ್ರಮದಿಂದ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಬೌಲರ್‌ಗಳಿಗೆ, ಫಾಲೋ-ಥ್ರೂನಲ್ಲಿ ಸಿಗುತ್ತಿದ್ದ ಕನಿಷ್ಠ ‘ಅದೃಷ್ಟದ ವಿಕೆಟ್’ ಅವಕಾಶವನ್ನೂ ಈ ನಿಯಮ ಕಿತ್ತುಕೊಂಡಿದೆ. ಆಟದಲ್ಲಿ ತಂತ್ರಜ್ಞಾನದ ನಿಖರತೆ ತರಲು ಇದನ್ನು ಜಾರಿಗೆ ತರಲಾಗಿದ್ದರೂ, ಇದು ಕ್ರಿಕೆಟ್ ಅನ್ನು ಮತ್ತಷ್ಟು ಬ್ಯಾಟರ್‌ಗಳ ಪರವಾಗಿಸಿ, ಬೌಲರ್‌ಗಳನ್ನು ಮತ್ತಷ್ಟು ಅಸಹಾಯಕರನ್ನಾಗಿ ಮಾಡಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ.