AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸಿಸಿ ಮಾಸ್ಟರ್ ಪ್ಲಾನ್; ತ್ರಿಕೋನ ಸರಣಿಯಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿ..!

ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಉದ್ವಿಗ್ನತೆಯಿಂದ ದ್ವಿಪಕ್ಷೀಯ ಕ್ರಿಕೆಟ್ ಸರಣಿಗಳು ನಿಂತಿವೆ. ಆದರೆ, ಐಸಿಸಿ ಇದೀಗ ಉಭಯ ತಂಡಗಳ ನಡುವೆ ಬಹುರಾಷ್ಟ್ರೀಯ ಕ್ರಿಕೆಟ್ ಸರಣಿ ಆಯೋಜಿಸಲು ಚಿಂತಿಸುತ್ತಿದೆ. ಸೆಪ್ಟೆಂಬರ್ 22-23ರ ದುಬೈ ಸಭೆಯಲ್ಲಿ ಈ ಪ್ರಸ್ತಾವ ಮಂಡನೆಯಾಗಲಿದ್ದು, ಇದು ಕಾರ್ಯರೂಪಕ್ಕೆ ಬಂದರೆ ಅಭಿಮಾನಿಗಳು ಪ್ರತಿ ವರ್ಷವೂ ರೋಮಾಂಚಕ ಭಾರತ-ಪಾಕ್ ಪಂದ್ಯಗಳನ್ನು ನೋಡಬಹುದು. ಇದು ಆಯೋಜಕರಿಗೂ ಆದಾಯ ತಂದುಕೊಡಲಿದೆ.

ಐಸಿಸಿ ಮಾಸ್ಟರ್ ಪ್ಲಾನ್; ತ್ರಿಕೋನ ಸರಣಿಯಲ್ಲಿ ಭಾರತ- ಪಾಕಿಸ್ತಾನ ಮುಖಾಮುಖಿ..!
ಭಾರತ Vs ಪಾಕಿಸ್ತಾನ
ಪೃಥ್ವಿಶಂಕರ
|

Updated on:Sep 06, 2026 | 10:54 PM

Share

ಕ್ರಿಕೆಟ್ ಲೋಕದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಕ್ಕಿರುವ ಮಹತ್ವವೇ ಬೇರೆ. ಈ ಎರಡು ಸಾಂಪ್ರದಾಯಿಕ ಎದುರಾಳಿಗಳ ಪಂದ್ಯಕ್ಕೆ ಅಭಿಮಾನಿಗಳು ತಿಂಗಳುಗಳ ಕಾಲ ಕಾದು ಕುಳಿತಿರುತ್ತಾರೆ. ಕಳೆದ ಕೆಲವು ವರ್ಷಗಳಿಂದ ಉಭಯ ತಂಡಗಳ ಮುಖಾಮುಖಿಯಲ್ಲಿ ಟೀಂ ಇಂಡಿಯಾದ ಪಾರುಪತ್ಯವೇ ಹೆಚ್ಚಾಗಿರುವುದರಿಂದ ಅಭಿಮಾನಿಗಳಲ್ಲಿ ಹಿಂದಿನಷ್ಟು ಆಸಕ್ತಿ ಈಗ ಇಲ್ಲ. ಆದಾಗ್ಯೂ ಈ ಪಂದ್ಯವನ್ನು ನೋಡಲು ಕ್ರೀಡಾಂಗಣಕ್ಕೆ ಬರುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಈ ಎರಡು ದೇಶಗಳ ಪಂದ್ಯದಿಂದ ಆಯೋಜಕರ ಖಜಾನೆ ಭರ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ದ್ವಿಪಕ್ಷೀಯ ಸರಣಿ ನಡೆದಿಲ್ಲ

ಎಲ್ಲರಿಗೂ ತಿಳಿದಿರುವಂತೆ ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ, ಉಭಯ ತಂಡಗಳ ನಡುವೆ ವರ್ಷಗಳಿಂದ ದ್ವಿಪಕ್ಷೀಯ ಸರಣಿಗಳು ನಡೆದಿಲ್ಲ. ಎರಡು ತಂಡಗಳು ಐಸಿಸಿ ಈವೆಂಟ್ ಮತ್ತು ಎಸಿಸಿ ಈವೆಂಟ್​ಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತವೆ. ಇತ್ತ ಭಾರತ ಸರ್ಕಾರ ಕೂಡ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸರಣಿಗೆ ಅನುಮತಿ ನೀಡುವುದಿಲ್ಲ. ಹೀಗಾಗಿ ಎರಡು ತಂಡಗಳ ನಡುವೆ ದ್ವಿಪಕ್ಷೀಯ ಸರಣಿ ನಡೆದು ವರ್ಷಗಳ ಕಳೆದಿವೆ.

ಐಸಿಸಿ ಸಭೆಯಲ್ಲಿ ನಿರ್ಧಾರ

ಆದರೀಗ ಈ ಎರಡೂ ತಂಡಗಳು ಸೇರಿದಂತೆ ಮೂರು ತಂಡಗಳ ನಡುವೆ ಅಥವಾ ನಾಲ್ಕು ತಂಡಗಳ ನಡುವೆ ತ್ರಿಕೋನ ಸರಣಿ ಅಥವಾ ಚತುರ್ಭುಜ ಸರಣಿ ನಡೆಸಲು ಐಸಿಸಿ ಚಿಂತಿಸುತ್ತಿದೆ ಎಂದು ವರದಿಯಾಗಿದೆ. ಪಾಕಿಸ್ತಾನಿ ಮಾಧ್ಯಮ ವರದಿಗಳ ಪ್ರಕಾರ, ಸೆಪ್ಟೆಂಬರ್ 22 ಮತ್ತು 23 ರಂದು ದುಬೈನಲ್ಲಿ ನಡೆಯಲಿರುವ ಫ್ಯೂಚರ್ ಟೂರ್ಸ್ ಪ್ರೋಗ್ರಾಂ (FTP) ಸಭೆಯಲ್ಲಿ ಐಸಿಸಿ ಈ ಪ್ರಸ್ತಾಪವನ್ನು ಮಂಡಿಸಬಹುದು. ಎಲ್ಲಾ 12 ಟೆಸ್ಟ್ ರಾಷ್ಟ್ರಗಳು ಮತ್ತು ಎಂಟು ಸಹವರ್ತಿ ರಾಷ್ಟ್ರಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದು, ಆ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ.

2013 ರಲ್ಲಿ ಕೊನೆಯ ಮುಖಾಮುಖಿ

ಐಸಿಸಿ ಅಥವಾ ಎಸಿಸಿ ಟೂರ್ನಮೆಂಟ್‌ ಹೊರತುಪಡಿಸಿ ಭಾರತ ಮತ್ತು ಪಾಕಿಸ್ತಾನ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದು ಡಿಸೆಂಬರ್ 2012 ಮತ್ತು ಜನವರಿ 2013 ರಲ್ಲಿ. ಆ ಸಮಯದಲ್ಲಿ ಪಾಕಿಸ್ತಾನ ತಂಡವು ಎರಡು ಟಿ20 ಮತ್ತು ಮೂರು ಏಕದಿನ ಪಂದ್ಯಗಳಿಗಾಗಿ ಭಾರತ ಪ್ರವಾಸ ಮಾಡಿತ್ತು. ಅಂದಿನಿಂದ, ಎರಡೂ ತಂಡಗಳು ಏಕದಿನ ವಿಶ್ವಕಪ್, ಟಿ20 ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ ಮತ್ತು ಏಷ್ಯಾಕಪ್‌ನಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ. ಇತ್ತೀಚೆಗೆ ಶ್ರೀಲಂಕಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ 2026 ರಲ್ಲಿ ಉಭಯ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಟೀಂ ಇಂಡಿಯಾ 61 ರನ್‌ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿತ್ತು. ಈಗ, ಈ ಐಸಿಸಿ ಮಾಸ್ಟರ್‌ಪ್ಲಾನ್ ಕಾರ್ಯರೂಪಕ್ಕೆ ಬಂದರೆ, ಅಭಿಮಾನಿಗಳು ಪ್ರತಿ ವರ್ಷ ಎರಡೂ ದೇಶಗಳ ನಡುವಿನ ರೋಮಾಂಚಕಾರಿ ಕ್ರಿಕೆಟ್ ಅನ್ನು ವೀಕ್ಷಿಸಬಹುದು.

‘ಭಾರತ ವಿರುದ್ಧದ ಗೆಲುವೆ ಪಾಕ್ ತಂಡದ ಕ್ರಿಕೆಟ್ ಕಾರಣ’; ಮೊಹಮ್ಮದ್ ಯೂಸುಫ್

ಭಾರತ ಸರ್ಕಾರ ಅಡ್ಡಿಪಡಿಸುವ ಸಾಧ್ಯತೆಗಳಿಲ್ಲ

ಮೇಲೆ ಹೇಳಿದಂತೆ ಭಾರತ ಸರ್ಕಾರ ಸಾಮಾನ್ಯವಾಗಿ ಪಾಕಿಸ್ತಾನ ವಿರುದ್ಧ ದ್ವಿಪಕ್ಷೀಯ ಸರಣಿಗಳಿಗೆ ಅವಕಾಶ ನೀಡುವುದಿಲ್ಲ. ಆದರೆ ಎರಡೂ ತಂಡಗಳು ಬಹುರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಆಡುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಅಲ್ಲದೆ ತ್ರಿಕೋನ ಸರಣಿ ಅಥವಾ ನಾಲ್ಕು ರಾಷ್ಟ್ರಗಳ ನಡುವಿನ ಸರಣಿಯಲ್ಲಿ ಆಡುವುದಕ್ಕೆ ಭಾರತ ಸರ್ಕಾರ ಅಡ್ಡಿಪಡಿಸುವ ಸಾಧ್ಯತೆಗಳಿಲ್ಲ. ಹಾಗೆಯೇ ಈ ರೀತಿಯ ಸರಣಿಗಳ ಆಯೋಜನೆಯಿಂದ ಪ್ರಸಾರಕರು ಮತ್ತು ಪ್ರಾಯೋಜಕರಿಗೆ ಆದಾಯವೂ ಹರಿದುಬರಲಿದೆ. ಆದ್ದರಿಂದ ಯುಎಇ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಈ ಸರಣಿಯನ್ನು ಆಯೋಜಿಸಲು ತುದಿಗಾಲಿನಲ್ಲಿ ನಿಂತಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:50 pm, Sun, 6 September 26

Follow Us