‘ನನ್ನನ್ನು ನಂಬಿ, ನಾನು ಹಾಲಿವುಡ್ ನಟನಲ್ಲ’; ಸುಮ್ಮನಿರದೆ ಅಪಹಾಸ್ಯಕ್ಕೀಡಾದ ಇಫ್ತಿಕರ್ ಚಾಚಾ

Iftikhar Ahmed: ಪಾಕಿಸ್ತಾನದ ಕ್ರಿಕೆಟರ್ ಇಫ್ತಿಕರ್ ಅಹ್ಮದ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಲಿವುಡ್ ನಟನೊಂದಿಗೆ ತಮ್ಮ ಫೋಟೋವನ್ನು ಹೋಲಿಸುವ ಮೂಲಕ ಟ್ರೋಲ್ ಆಗಿದ್ದಾರೆ. ಅವರ ವಯಸ್ಸಿಗೆ ಹೋಲಿಸಿದರೆ ಹೆಚ್ಚು ವಯಸ್ಸಾದಂತೆ ಕಾಣುವ ಇಫ್ತಿಕರ್ ಅವರನ್ನು "ಚಾಚಾ" ಎಂದು ಕರೆಯಲಾಗುತ್ತದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರನ್ನು ಅಪಹಾಸ್ಯ ಮಾಡಲಾಗುತ್ತಿದೆ.

‘ನನ್ನನ್ನು ನಂಬಿ, ನಾನು ಹಾಲಿವುಡ್ ನಟನಲ್ಲ’; ಸುಮ್ಮನಿರದೆ ಅಪಹಾಸ್ಯಕ್ಕೀಡಾದ ಇಫ್ತಿಕರ್ ಚಾಚಾ
Iftikhar Ahmed

Updated on: Sep 12, 2025 | 7:16 PM

ಕ್ರಿಕೆಟ್ ಲೋಕದಲ್ಲಿ ಇಫ್ತಿಕರ್ ಚಾಚಾ ಎಂದೇ ಪ್ರಸಿದ್ಧರಾಗಿರುವ ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟರ್ ಇಫ್ತಿಕರ್ ಅಹ್ಮದ್ ಇದೀಗ ತನ್ನನ್ನು ಬಾಲಿವುಡ್ ಹೀರೋಗೆ ಹೊಲಿಸಿಕೊಂಡು ನಗೆಪಾಟಲಿಗೀಡಾಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಫ್ತಿಕರ್ ಪೋಸ್ಟ್​ವೊಂದನ್ನು ಹಂಚಿಕೊಂಡಿದ್ದು, ಇದೀಗ ಅವರ ಪೋಸ್ಟ್ ಟ್ರೋಲಿಗರಿಗೆ ಭರ್ಜರಿ ಭೋಜನದಂತ್ತಾಗಿದೆ. ಇಫ್ತಿಕರ್ ಅವರ ಪೋಸ್ಟ್​ಗೆ ನಾನಾ ರೀತಿಯ ಕಾಮೆಂಟ್​ಗಳು ಹರಿದುಬರುತ್ತಿದ್ದು, ಇದೀಗ ಅಪಹಾಸ್ಯಕ್ಕೀಡಾಗಿದ್ದಾರೆ.

ವಯಸ್ಸಿನ ವಿಚಾರದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗಿಂತಲೂ ಚಿಕ್ಕವರಾಗಿರುವ ಇಫ್ತಿಕರ್ ಅಹ್ಮದ್ ನೋಡಲು ಮಾತ್ರ ಅವರಿಗಿಂತ ದೊಡ್ಡವರೆಂಬಂತೆ ಕಾಣುತ್ತಾರೆ. ಪ್ರಸ್ತುತ ಇಫ್ತಿಕರ್​ಗೆ 35 ವರ್ಷ ವಯಸ್ಸಾಗಿದ್ದರೆ, ವಿರಾಟ್ ಕೊಹ್ಲಿಗೆ 36 ವರ್ಷ ವಯಸ್ಸಾಗಿದೆ. ಆದಾಗ್ಯೂ ಇಫ್ತಿಕರ್ 40 ವರ್ಷ ದಾಟಿದವರಂತೆ ಕಾಣುತ್ತಾರೆ. ಇದೇ ಕಾರಣಕ್ಕೆ ಅವರನ್ನು ಕ್ರಿಕೆಟ್ ಲೋಕದಲ್ಲಿ ಇಫ್ತಿಕರ್ ಚಾಚಾ ಎಂದು ಕರೆಯುತ್ತಾರೆ.

ಇಫ್ತಿಕರ್ ಪೋಸ್ಟ್​ನಲ್ಲಿ ಏನಿದೆ?

ಇಫ್ತಿಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾವು ವಿಮಾನದಿಂದ ಇಳಿದು ಹೊರಹೊಗುತ್ತಿರುವ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಎರಡು ಕೈಗಳಲ್ಲಿ ಬ್ಯಾಗ್​ಗಳನ್ನು ಹಿಡಿದಿರುವ ಇಫ್ತಿಕರ್​ ಕಣ್ಣಿಗೆ ಗ್ಲಾಸ್ ಕೂಡ ಧರಿಸಿದ್ದಾರೆ. ಈ ಫೋಟೋವನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ಇಫ್ತಿಕರ್ ‘ನನ್ನನ್ನು ನಂಬಿ, ನಾನು ಹಾಲಿವುಡ್ ನಟನಲ್ಲ’ ಎಂಬ ಶೀರ್ಷಿಕೆ ನೀಡಿದ್ದಾರೆ.

ಇಫ್ತಿಕರ್ ಅವರ ಈ ಫೋಟೋ ಹಾಗೂ ಅವರು ನೀಡಿರುವ ಶೀರ್ಷಿಕೆ ಇದೀಗ ಟ್ರೋಲಿಗರಿಗೆ ಆಹಾರವಾಗಿದೆ. ಈ ಪೋಸ್ಟ್​ಗೆ ತರಹೆವಾರಿ ಕಾಮೆಂಟ್​ಗಳನ್ನು ಮಾಡಿರುವ ನೆಟ್ಟಿಗರು ಇಫ್ತಿಕರ್ ಅವರನ್ನು ಗೇಲಿ ಮಾಡಿದ್ದಾರೆ. ಒಬ್ಬ ಬಳಕೆದಾರರು, ‘ಅಪ್ಪ ಅಂಡರ್-19 ಟ್ರಯಲ್ಸ್ ನೀಡಲಿದ್ದಾರೆಯೇ?’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಚಿಕ್ಕಪ್ಪನ ಮುಂದೆ ಯಾವ ಶಾರುಖ್ ಖಾನ್ ಕೂಡ ಲೆಕ್ಕಕ್ಕೆ ಇಲ್ಲ’ ಎಂದಿದ್ದಾರೆ. ಮತ್ತೊಬ್ಬರು ‘ಚಾಚಾ ನೀಡಿರುವ ಶೀರ್ಷಿಕೆ ನೋಡಿ ನನಗೆ ನಾಚಿಕೆಯಾಗುತ್ತಿದೆ’ ಎಂದು ಬರೆದಿದ್ದಾರೆ.

ಭಾರತ-ಪಾಕಿಸ್ತಾನ ಪಂದ್ಯದ ಮೇಲೆ ಕಣ್ಣು

ಇದು ಒಂದೆಡೆಯಾದರೆ, ಪಾಕಿಸ್ತಾನ ತಂಡವು ಏಷ್ಯಾಕಪ್‌ನಲ್ಲಿದ್ದು, ಇಂದು ತನ್ನ ಮೊದಲ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ, ಪಾಕಿಸ್ತಾನ ಒಮಾನ್ ತಂಡವನ್ನು ಎದುರಿಸಲಿದೆ. ಇದರ ನಂತರ, ಮುಂದಿನ ಪಂದ್ಯದಲ್ಲಿ, ಪಾಕಿಸ್ತಾನ ತಂಡ ಭಾರತವನ್ನು ಎದುರಿಸಲಿದೆ. ಈ ಪಂದ್ಯವು ಸೆಪ್ಟೆಂಬರ್ 14 ರಂದು ನಡೆಯಲಿದೆ. ಪ್ರಸ್ತುತ ಪಾಕಿಸ್ತಾನವನ್ನು ಅತ್ಯಂತ ದುರ್ಬಲ ತಂಡವೆಂದು ಪರಿಗಣಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ, ಅದು ಭಾರತವನ್ನು ಎದುರಿಸಿದಾಗಲೆಲ್ಲಾ ಸೋಲನ್ನು ಎದುರಿಸಿರುವುದು ಇದಕ್ಕೆ ಕಾರಣವೆನ್ನಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ