IND vs PAK: ‘ನಾನೇ ತಪ್ಪು ತಿಳಿದುಕೊಂಡಿದ್ದೆ’; 15 ವರ್ಷಗಳ ಬಳಿಕ ಸತ್ಯ ಬಾಯ್ಬಿಟ್ಟ ಪಾಕ್ ವಿಕೆಟ್ ಕೀಪರ್
IND vs PAK: 2025ರ ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ. ಪಂದ್ಯಕ್ಕೂ ಮುನ್ನ, ಪಾಕಿಸ್ತಾನದ ಮಾಜಿ ಕ್ರಿಕೆಟರ್ ಕಮ್ರಾನ್ ಅಕ್ಮಲ್, 2010ರಲ್ಲಿ ಗೌತಮ್ ಗಂಭೀರ್ ಜೊತೆ ನಡೆದ ವಾಗ್ವಾದಕ್ಕೆ ಕ್ಷಮೆ ಕೇಳಿದ್ದಾರೆ. ಅದು ತಪ್ಪು ತಿಳುವಳಿಕೆಯಿಂದ ಉಂಟಾಯಿತು ಎಂದು ಅವರು ಹೇಳಿದ್ದಾರೆ. ಈ ಪಂದ್ಯವು ಎರಡೂ ದೇಶಗಳ ನಡುವಿನ ಸಂಬಂಧಗಳನ್ನು ಸುಧಾರಿಸಲು ಸಹಾಯ ಮಾಡಬೇಕೆಂದು ಅಕ್ಮಲ್ ಆಶಿಸಿದ್ದಾರೆ ಮತ್ತು ಅಭಿಮಾನಿಗಳು ಜವಾಬ್ದಾರಿಯುತವಾಗಿ ವರ್ತಿಸಬೇಕೆಂದು ಮನವಿ ಮಾಡಿದ್ದಾರೆ.

2025 ರ ಚಾಂಪಿಯನ್ಸ್ ಟ್ರೋಫಿಯ ಬಳಿಕ ಇದೀಗ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ (India vs Pakistan) ಮುಖಾಮುಖಿಯಾಗುತ್ತಿವೆ. ಸೆಪ್ಟೆಂಬರ್ 14 ರಂದು ನಡೆಯಲಿರುವ ಏಷ್ಯಾಕಪ್ (Asia Cup 2025) ಪಂದ್ಯದಲ್ಲಿ ಉಭಯ ತಂಡಗಳು ಗೆಲುವಿಗಾಗಿ ಸೆಣಸಲಿವೆ. ದುಬೈನಲ್ಲಿ ನಡೆಯಲಿರುವ ಈ ಪಂದ್ಯಕ್ಕಾಗಿ ಎರಡೂ ತಂಡಗಳು ಕಠಿಣ ತಯಾರಿ ನಡೆಸುತ್ತಿವೆ. ಏತನ್ಮಧ್ಯೆ, ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕಮ್ರಾನ್ ಅಕ್ಮಲ್, ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಜೊತೆ 15 ವರ್ಷಗಳ ಹಿಂದೆ ನಡೆದಿದ್ದ ವಾಗ್ವಾದದ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಅಂದು ನಡೆದ ಘಟನೆ ನನ್ನ ತಪ್ಪ ತಿಳುವಳಿಕೆಯಿಂದ ನಡೆಯಿತು ಎಂದು ಬಹಿರಂಗಪಡಿಸಿದ್ದಾರೆ.
ಕಮ್ರಾನ್ ಅಕ್ಮಲ್ ಹೇಳಿದ್ದೇನು?
ವಾಸ್ತವವಾಗಿ 2010 ರ ಏಷ್ಯಾಕಪ್ ಸಮಯದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಕಮ್ರಾನ್ ಅಕ್ಮಲ್ ಮತ್ತು ಗೌತಮ್ ಗಂಭೀರ್ ನಡುವೆ ಮೈದಾನದಲ್ಲೇ ದೊಡ್ಡ ವಾಗ್ವಾದ ನಡೆದಿತ್ತು. ಅದರ ವಿಡಿಯೋ ವೈರಲ್ ಕೂಡ ಆಗಿತ್ತು. ಇದೀಗ ಆ ವಿಷಯದ ಬಗ್ಗೆ ಮೌನ ಮುರಿದಿರುವ ಕಮ್ರಾನ್ ಅಕ್ಮಲ್, ಅದು ನನ್ನ ತಪ್ಪು ತಿಳುವಳಿಕೆಯಾಗಿತ್ತು. ಗೌತಮ್ ತುಂಬಾ ಒಳ್ಳೆಯ ವ್ಯಕ್ತಿ. ನಾವು ಒಂದು ಕಾರ್ಯಕ್ರಮಕ್ಕಾಗಿ ಒಟ್ಟಿಗೆ ಕೀನ್ಯಾಕ್ಕೆ ಹೋಗಿದ್ದೆವು ಮತ್ತು ಉತ್ತಮ ಸ್ನೇಹಿತರಾದೆವು ಎಂದು ಹೇಳಿಕೊಂಡಿದ್ದಾರೆ.
Gambhir might have called Sreesanth a ‘Fixer’, but Gautam Gambhir stood tall when India needed him in 2007 WC Final, 2011 WC Final & many other occasions
Gambhir 🆚 Kamran Akmal fight was Epic 🔥 at Asia Cup 2010#GautamGambhir #Sreesanth pic.twitter.com/IqNB3y6p58
— Richard Kettleborough (@RichKettle07) December 7, 2023
2010 ರಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಗೌತಮ್ ಗಂಭೀರ್ ಬ್ಯಾಟಿಂಗ್ ಮಾಡುವಾಗ ಒಂದು ಶಾಟ್ ತಪ್ಪಿಸಿಕೊಂಡರು, ಆದ್ದರಿಂದ ನಾನು ಮೇಲ್ಮನವಿ ಸಲ್ಲಿಸಿದೆ. ಆದರೆ ಶಾಟ್ ಬಾರಿಸುವಲ್ಲಿ ವಿಫಲರಾಗಿದ್ದಕ್ಕೆ ಗಂಭೀರ್ ತಮ್ಮೊಳಗೆ ಮಾತನಾಡುತ್ತಿದ್ದರು, ಆದರೆ ಅವರು ನನಗೆ ಏನೋ ಹೇಳಿದ್ದಾರೆ ಎಂದು ನಾನು ಭಾವಿಸಿದೆ. ಈ ರೀತಿಯಾಗಿ ತಪ್ಪು ತಿಳುವಳಿಕೆ ಉಂಟಾಯಿತು, ಇದರಿಂದಾಗಿ ನಮ್ಮ ನಡುವೆ ವಿವಾದ ಉಂಟಾಯಿತು ಎಂದಿದ್ದಾರೆ.
ಭಾವನೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು
ಭಾರತ-ಪಾಕಿಸ್ತಾನ ಪಂದ್ಯದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಕಮ್ರಾನ್ ಅಕ್ಮಲ್, ‘ಎರಡೂ ದೇಶಗಳ ನಡುವೆ ಉದ್ವಿಗ್ನತೆ ಇದೆ. ಆದರೆ ಈ ಪಂದ್ಯವು ಸಂಬಂಧಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಹೀಗಾಗಿ ಅಭಿಮಾನಿಗಳು ಕ್ರೀಡಾಂಗಣದಲ್ಲಿ ಜವಾಬ್ದಾರಿಯುತವಾಗಿ ವರ್ತಿಸಬೇಕು. ಎರಡೂ ದೇಶದ ಅಭಿಮಾನಿಗಳು ಒಟ್ಟಾಗಿ ಪಂದ್ಯವನ್ನು ಆನಂದಿಸಬೇಕು. ಅಭಿಮಾನಿಗಳು ಪಾಕಿಸ್ತಾನದವರಾಗಿರಲಿ ಅಥವಾ ಭಾರತದವರಾಗಿರಲಿ ತಮ್ಮ ಮಿತಿಗಳನ್ನು ಮೀರಬಾರದು ಎಂದು ನಾನು ಮನವಿ ಮಾಡುತ್ತೇನೆ. ಭವಿಷ್ಯದಲ್ಲಿ ಭಾರತ-ಪಾಕ್ ಪಂದ್ಯಗಳು ಮುಂದುವರಿಯುವಂತೆ ಅವರು ಪಂದ್ಯವನ್ನು ಯಶಸ್ವಿಗೊಳಿಸಬೇಕು. ಆಕ್ರಮಣಶೀಲತೆ ಭಾರತ-ಪಾಕಿಸ್ತಾನ ಪೈಪೋಟಿಯ ಒಂದು ಭಾಗವಾಗಿದೆ, ಆದರೆ ಆಟಗಾರರು ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಅಕ್ಮಲ್ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Fri, 12 September 25
