‘ನನ್ನನ್ನು ನಂಬಿ, ನಾನು ಹಾಲಿವುಡ್ ನಟನಲ್ಲ’; ಸುಮ್ಮನಿರದೆ ಅಪಹಾಸ್ಯಕ್ಕೀಡಾದ ಇಫ್ತಿಕರ್ ಚಾಚಾ
Iftikhar Ahmed: ಪಾಕಿಸ್ತಾನದ ಕ್ರಿಕೆಟರ್ ಇಫ್ತಿಕರ್ ಅಹ್ಮದ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಾಲಿವುಡ್ ನಟನೊಂದಿಗೆ ತಮ್ಮ ಫೋಟೋವನ್ನು ಹೋಲಿಸುವ ಮೂಲಕ ಟ್ರೋಲ್ ಆಗಿದ್ದಾರೆ. ಅವರ ವಯಸ್ಸಿಗೆ ಹೋಲಿಸಿದರೆ ಹೆಚ್ಚು ವಯಸ್ಸಾದಂತೆ ಕಾಣುವ ಇಫ್ತಿಕರ್ ಅವರನ್ನು "ಚಾಚಾ" ಎಂದು ಕರೆಯಲಾಗುತ್ತದೆ. ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅವರನ್ನು ಅಪಹಾಸ್ಯ ಮಾಡಲಾಗುತ್ತಿದೆ.

ಕ್ರಿಕೆಟ್ ಲೋಕದಲ್ಲಿ ಇಫ್ತಿಕರ್ ಚಾಚಾ ಎಂದೇ ಪ್ರಸಿದ್ಧರಾಗಿರುವ ಪಾಕಿಸ್ತಾನದ ಮಧ್ಯಮ ಕ್ರಮಾಂಕದ ಬ್ಯಾಟರ್ ಇಫ್ತಿಕರ್ ಅಹ್ಮದ್ ಇದೀಗ ತನ್ನನ್ನು ಬಾಲಿವುಡ್ ಹೀರೋಗೆ ಹೊಲಿಸಿಕೊಂಡು ನಗೆಪಾಟಲಿಗೀಡಾಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಇಫ್ತಿಕರ್ ಪೋಸ್ಟ್ವೊಂದನ್ನು ಹಂಚಿಕೊಂಡಿದ್ದು, ಇದೀಗ ಅವರ ಪೋಸ್ಟ್ ಟ್ರೋಲಿಗರಿಗೆ ಭರ್ಜರಿ ಭೋಜನದಂತ್ತಾಗಿದೆ. ಇಫ್ತಿಕರ್ ಅವರ ಪೋಸ್ಟ್ಗೆ ನಾನಾ ರೀತಿಯ ಕಾಮೆಂಟ್ಗಳು ಹರಿದುಬರುತ್ತಿದ್ದು, ಇದೀಗ ಅಪಹಾಸ್ಯಕ್ಕೀಡಾಗಿದ್ದಾರೆ.
ವಯಸ್ಸಿನ ವಿಚಾರದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕರಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರಿಗಿಂತಲೂ ಚಿಕ್ಕವರಾಗಿರುವ ಇಫ್ತಿಕರ್ ಅಹ್ಮದ್ ನೋಡಲು ಮಾತ್ರ ಅವರಿಗಿಂತ ದೊಡ್ಡವರೆಂಬಂತೆ ಕಾಣುತ್ತಾರೆ. ಪ್ರಸ್ತುತ ಇಫ್ತಿಕರ್ಗೆ 35 ವರ್ಷ ವಯಸ್ಸಾಗಿದ್ದರೆ, ವಿರಾಟ್ ಕೊಹ್ಲಿಗೆ 36 ವರ್ಷ ವಯಸ್ಸಾಗಿದೆ. ಆದಾಗ್ಯೂ ಇಫ್ತಿಕರ್ 40 ವರ್ಷ ದಾಟಿದವರಂತೆ ಕಾಣುತ್ತಾರೆ. ಇದೇ ಕಾರಣಕ್ಕೆ ಅವರನ್ನು ಕ್ರಿಕೆಟ್ ಲೋಕದಲ್ಲಿ ಇಫ್ತಿಕರ್ ಚಾಚಾ ಎಂದು ಕರೆಯುತ್ತಾರೆ.
ಇಫ್ತಿಕರ್ ಪೋಸ್ಟ್ನಲ್ಲಿ ಏನಿದೆ?
ಇಫ್ತಿಕರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಾವು ವಿಮಾನದಿಂದ ಇಳಿದು ಹೊರಹೊಗುತ್ತಿರುವ ಫೋಟೋವೊಂದನ್ನು ಪೋಸ್ಟ್ ಮಾಡಿದ್ದಾರೆ. ಎರಡು ಕೈಗಳಲ್ಲಿ ಬ್ಯಾಗ್ಗಳನ್ನು ಹಿಡಿದಿರುವ ಇಫ್ತಿಕರ್ ಕಣ್ಣಿಗೆ ಗ್ಲಾಸ್ ಕೂಡ ಧರಿಸಿದ್ದಾರೆ. ಈ ಫೋಟೋವನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿರುವ ಇಫ್ತಿಕರ್ ‘ನನ್ನನ್ನು ನಂಬಿ, ನಾನು ಹಾಲಿವುಡ್ ನಟನಲ್ಲ’ ಎಂಬ ಶೀರ್ಷಿಕೆ ನೀಡಿದ್ದಾರೆ.
.jpg)
ಇಫ್ತಿಕರ್ ಅವರ ಈ ಫೋಟೋ ಹಾಗೂ ಅವರು ನೀಡಿರುವ ಶೀರ್ಷಿಕೆ ಇದೀಗ ಟ್ರೋಲಿಗರಿಗೆ ಆಹಾರವಾಗಿದೆ. ಈ ಪೋಸ್ಟ್ಗೆ ತರಹೆವಾರಿ ಕಾಮೆಂಟ್ಗಳನ್ನು ಮಾಡಿರುವ ನೆಟ್ಟಿಗರು ಇಫ್ತಿಕರ್ ಅವರನ್ನು ಗೇಲಿ ಮಾಡಿದ್ದಾರೆ. ಒಬ್ಬ ಬಳಕೆದಾರರು, ‘ಅಪ್ಪ ಅಂಡರ್-19 ಟ್ರಯಲ್ಸ್ ನೀಡಲಿದ್ದಾರೆಯೇ?’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ‘ಚಿಕ್ಕಪ್ಪನ ಮುಂದೆ ಯಾವ ಶಾರುಖ್ ಖಾನ್ ಕೂಡ ಲೆಕ್ಕಕ್ಕೆ ಇಲ್ಲ’ ಎಂದಿದ್ದಾರೆ. ಮತ್ತೊಬ್ಬರು ‘ಚಾಚಾ ನೀಡಿರುವ ಶೀರ್ಷಿಕೆ ನೋಡಿ ನನಗೆ ನಾಚಿಕೆಯಾಗುತ್ತಿದೆ’ ಎಂದು ಬರೆದಿದ್ದಾರೆ.
ಭಾರತ-ಪಾಕಿಸ್ತಾನ ಪಂದ್ಯದ ಮೇಲೆ ಕಣ್ಣು
ಇದು ಒಂದೆಡೆಯಾದರೆ, ಪಾಕಿಸ್ತಾನ ತಂಡವು ಏಷ್ಯಾಕಪ್‌ನಲ್ಲಿದ್ದು, ಇಂದು ತನ್ನ ಮೊದಲ ಪಂದ್ಯವನ್ನು ಆಡುತ್ತಿದೆ. ಈ ಪಂದ್ಯದಲ್ಲಿ, ಪಾಕಿಸ್ತಾನ ಒಮಾನ್ ತಂಡವನ್ನು ಎದುರಿಸಲಿದೆ. ಇದರ ನಂತರ, ಮುಂದಿನ ಪಂದ್ಯದಲ್ಲಿ, ಪಾಕಿಸ್ತಾನ ತಂಡ ಭಾರತವನ್ನು ಎದುರಿಸಲಿದೆ. ಈ ಪಂದ್ಯವು ಸೆಪ್ಟೆಂಬರ್ 14 ರಂದು ನಡೆಯಲಿದೆ. ಪ್ರಸ್ತುತ ಪಾಕಿಸ್ತಾನವನ್ನು ಅತ್ಯಂತ ದುರ್ಬಲ ತಂಡವೆಂದು ಪರಿಗಣಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ, ಅದು ಭಾರತವನ್ನು ಎದುರಿಸಿದಾಗಲೆಲ್ಲಾ ಸೋಲನ್ನು ಎದುರಿಸಿರುವುದು ಇದಕ್ಕೆ ಕಾರಣವೆನ್ನಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
