Duleep Trophy 2025 Final: ಭರ್ಜರಿ ಶತಕ ಸಿಡಿಸಿದ ಆರ್ಸಿಬಿ ನಾಯಕ ರಜತ್ ಪಾಟಿದರ್
Duleep Trophy 2025 Final: ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿ ಫೈನಲ್‌ನಲ್ಲಿ, ರಜತ್ ಪಾಟಿದಾರ್ ಅವರು ಅದ್ಭುತವಾದ ಶತಕ ಸಿಡಿಸಿ ಕೇಂದ್ರ ವಲಯಕ್ಕೆ ಮುನ್ನಡೆ ಒದಗಿಸಿದರು. 112 ಎಸೆತಗಳಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್‌ಗಳೊಂದಿಗೆ ತಮ್ಮ ಶತಕ ಪೂರ್ಣಗೊಳಿಸಿದ ಅವರು, ಈ ಟೂರ್ನಿಯಲ್ಲಿ ಈಗಾಗಲೇ 2 ಶತಕಗಳನ್ನು ಬಾರಿಸಿದ್ದಾರೆ. ಕ್ವಾರ್ಟರ್ ಫೈನಲ್‌ನಲ್ಲೂ ಶತಕ ಬಾರಿಸಿದ್ದ ರಜತ್, ಈಗ ಫೈನಲ್‌ನಲ್ಲಿಯೂ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಕೇಂದ್ರ ತಂಡವನ್ನು ಮುನ್ನಡೆಸುತ್ತಿರುವ ರಜತ್ ಪಾಟಿದಾರ್ ನಾಯಕತ್ವದ ಇನ್ನಿಂಗ್ಸ್ ಆಡುವ ಮೂಲಕ ಭರ್ಜರಿ ಶತಕ ಸಿಡಿಸಿದ್ದಾರೆ. ದುಲೀಪ್ ಟ್ರೋಫಿಯ ಕ್ವಾರ್ಟರ್ ಫೈನಲ್‌ನಲ್ಲೂ ಶತಕ ಬಾರಿಸಿದ್ದ ರಜತ್ ಇದೀಗ ಫೈನಲ್‌ನಲ್ಲಿಯೂ ಶತಕ ಬಾರಿಸುವ ಮೂಲಕ ತಂಡವನ್ನು ಮುನ್ನಡೆಯತ್ತ ಕೊಂಡೊಯ್ದಿದ್ದಾರೆ. ಕೇವಲ 112 ಎಸೆತಗಳಲ್ಲಿ ತಮ್ಮ ಶತಕ ಪೂರೈಸಿದ ರಜತ್ ಪಾಟಿದಾರ್ ಅವರ ಇನ್ನಿಂಗ್ಸ್ನಲ್ಲಿ 12 ಬೌಂಡರಿ ಮತ್ತು 2 ಸಿಕ್ಸರ್ ಸಹ ಸೇರಿದ್ದವು. ಅಂದಹಾಗೆ ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ರಜತ್ ಅವರ 15 ನೇ ಶತಕವಾಗಿದೆ.
ದಕ್ಷಿಣ ವಲಯದ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ರಜತ್ ಪಾಟಿದಾರ್ ಅದ್ಭುತ ಇನ್ನಿಂಗ್ಸ್ ಆಡಿದರು. ದಕ್ಷಿಣ ವಲಯ ತಂಡವನ್ನು 149 ರನ್ಗಳಿಗೆ ಆಲೌಟ್ ಮಾಡಿ ಬ್ಯಾಟಿಂಗ್ ಆರಂಭಿಸಿದ ಕೇಂದ್ರ ತಂಡವು ಉತ್ತಮ ಆರಂಭವನ್ನು ಪಡೆಯಿತು. ಆರಂಭಿಕರಾದ ಡ್ಯಾನಿಶ್ ಮಾಲೆವಾರ್ ಮತ್ತು ಅಕ್ಷಯ್ ವಾಡ್ಕರ್ ಅರ್ಧಶತಕದ ಜೊತೆಯಾಟವನ್ನಾಡಿದರು. ಆ ಬಳಿಕ ಬಂದ ರಜತ್, ಯಶ್ ರಾಥೋಡ್ ಅವರೊಂದಿಗೆ ಶತಕದ ಪಾಲುದಾರಿಕೆ ಮಾಡುವ ಮೂಲಕ ತಂಡಕ್ಕೆ ಮುನ್ನಡೆ ನೀಡಿದರು.
ಆದರೆ ರಜತ್ ಶತಕ ಬಾರಿಸಿದ ನಂತರ ಔಟಾದರು. ದುಲೀಪ್ ಟ್ರೋಫಿಯಲ್ಲಿ ಅಬ್ಬರಿಸುತ್ತಿರುವ ರಜತ್ ಪಾಟಿದಾರ್ ಆಡಿರುವ 4 ಇನ್ನಿಂಗ್ಸ್‌ಗಳಲ್ಲಿ 369 ರನ್ ಗಳಿಸಿದ್ದಾರೆ. ಈ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಬಾರಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

