ಅಕ್ಕ ಕ್ರಿಕೆಟ್ ನೋಡ್ತೀರಾ? ವಾಷಿಂಗ್ಟನ್ ಸುಂದರ್ ಕನ್ನಡ ಎಷ್ಟು ಸುಂದರ ನೀವೇ ನೋಡಿ
Washington Sundar's Nandi Hills Trip: ಇಂಗ್ಲೆಂಡ್ ಕೌಂಟಿ ಚಾಂಪಿಯನ್‌ಶಿಪ್‌ಗೆ ತಯಾರಿಯಲ್ಲಿರುವ ವಾಷಿಂಗ್ಟನ್ ಸುಂದರ್ ಅವರು ಕರ್ನಾಟಕದ ನಂದಿ ಬೆಟ್ಟಕ್ಕೆ ಭೇಟಿ ನೀಡಿ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮನಸೋತಿದ್ದಾರೆ. ರಸ್ತೆಯಲ್ಲಿ ಜೋಳ ತಿಂದು, ಸ್ಥಳೀಯರೊಂದಿಗೆ ಮಾತನಾಡಿ, ಕೆ.ಎಲ್. ರಾಹುಲ್ ಅವರನ್ನು ಸ್ಮರಿಸಿದ್ದಾರೆ. ರವಿಚಂದ್ರನ್ ಅವರ ಪ್ರೇಮಲೋಕದ ಹಿನ್ನೆಲೆ ಸಂಗೀತದೊಂದಿಗೆ ಈ ಸುಂದರ ಪ್ರವಾಸದ ವಿಡಿಯೋ ವೈರಲ್ ಆಗಿದೆ.
ಟೀಂ ಇಂಡಿಯಾದ ಯುವ ಆಲ್‌ರೌಂಡರ್ ಹಾಗೂ ಮಾಜಿ ಆರ್ಸಿಬಿ ಆಟಗಾರ ವಾಷಿಂಗ್ಟನ್ ಸುಂದರ್ ಪ್ರಸ್ತುತ ಟೀಂ ಇಂಡಿಯಾದಿಂದ ಹೊರಗುಳಿದಿದ್ದಾರೆ. ಇಂಗ್ಲೆಂಡ್ ಪ್ರವಾಸವನ್ನು ಅತ್ಯಂತ ಯಶಸ್ವಿಯಾಗಿ ಮುಗಿಸಿ ಬಂದಿರುವ ಸುಂದರ್, ಅದೇ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಆಡಲು ಮುಂದಾಗಿದ್ದಾರೆ. ಆದರೆ ಅದಕ್ಕೂ ಮುನ್ನ ಕರ್ನಾಟಕಕ್ಕೆ ಭೇಟಿ ನೀಡಿರುವ ವಾಷಿಂಗ್ಟನ್ ಸುಂದರ್, ನಂದಿ ಹಿಲ್ಸ್ಗೆ ಭೇಟಿ ಅಲ್ಲಿನ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿದ್ದಾರೆ. ಹಾಗೆಯೇ ನಂದಿ ಹಿಲ್ಸ್ಗೆ ಹೋಗುವ ದಾರಿಯಲ್ಲಿ ಸಿಗುವ ಚಿಕ್ಕ ಅಂಗಡಿಯಲ್ಲಿ ಬೇಯಿಸಿದ ಜೋಳ ಖರೀದಿಸಿ ತಿಂದಿದ್ದಾರೆ. ಹಾಗೆಯೇ ಜೋಳ ಬೇಯಿಸಿ ಕೊಟ್ಟ ಮಹಿಳೆಯೊಂದಿಗೆ ಮಾತಿಗಿಳಿದಿರುವ ಸುಂದರ್, ಅಕ್ಕ ಕ್ರಿಕೆಟ್ ನೋಡ್ತೀರ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಆ ಮಹಿಳೆ ಇಲ್ಲ ನಾನು ನೋಡುವುದಿಲ್ಲ ಎಂದು ಉತ್ತರಿಸಿದ್ದಾರೆ.
ನಂದಿ ಹಿಲ್ಸ್ ಪ್ರಕೃತಿ ಸೌಂದರ್ಯಕ್ಕೆ ಮರುಳಾಗಿರುವ ಸುಂದರ್, ಸಹ ಆಟಗಾರ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಸ್ಮರಿಸಿದ್ದಾರೆ. ‘ಬೆಂಗಳೂರು ಚೆನ್ನೈಗಿಂತ ಸುಂದರವಾಗಿದೆ ಎಂದು ರಾಹುಲ್ ಹೇಳಿದ್ದರು. ಆದರೆ ನಾನು ಅದನ್ನು ನಂಬಿರಲಿಲ್ಲ. ಆದರೆ ಇಲ್ಲಿ ಬಂದು ನೋಡಿದ ಮೇಲೆ ತಿಳಿಯಿತು. ಇದಕ್ಕಾಗಿ ನಾನು ರಾಹುಲ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಲೇಬೇಕು ಎಂದಿದ್ದಾರೆ. ಇದೆಲ್ಲದರ ನಡುವೆ ಸುಂದರ್ ಅವರ ವಿಡಿಯೋದಲ್ಲಿ ಹಿನ್ನೆಲೆ ಸಂಗೀತವಾಗಿ ರವಿಚಂದ್ರನ್ ಅವರ ಪ್ರೇಮಲೋಕ ಸಿನಿಮಾದ ಟೈಟಲ್ ಸಾಂಗ್ ಪ್ಲೇ ಆಗುತ್ತಿರುವುದನ್ನು ನಾವು ಗಮನಿಸಬಹುದು.

