
ನ್ಯೂಝಿಲೆಂಡ್ ಎ ವಿರುದ್ಧ ಲಿಂಕನ್ನಲ್ಲಿ ನಡೆಯುತ್ತಿರುವ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಕೇವಲ 1 ರನ್ನಿಂದ ದ್ವಿಶತಕ ವಂಚಿತರಾಗಿದ್ದಾರೆ. ಭಾರತ ಎ ತಂಡದ ಪರ ಎರಡನೇ ಇನಿಂಗ್ಸ್ನಲ್ಲಿ ಅತ್ಯಂತ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದ ಅವರು 199 ರನ್ ಗಳಿಸಿ ಔಟಾಗುವ ಮೂಲಕ ತೀವ್ರ ನಿರಾಶೆ ಅನುಭವಿಸಿದರು.
ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಎ ತಂಡದ ನಾಯಕ ರೈಸ್ ಮಾರಿಯು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ ಮೊದಲ ಇನಿಂಗ್ಸ್ನಲ್ಲಿ ಕೇವಲ 113 ರನ್ಗಳಿಗೆ ಆಲೌಟ್ ಆಗಿ ತೀವ್ರ ಹಿನ್ನಡೆ ಅನುಭವಿಸಿತ್ತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ನ್ಯೂಝಿಲೆಂಡ್ ಎ ತಂಡ 317 ರನ್ ಗಳಿಸಿ, 204 ರನ್ಗಳ ಬೃಹತ್ ಮುನ್ನಡೆ ಸಾಧಿಸಿತು.
204 ರನ್ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಭಾರತ ಎ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ತಂಡದ ಮೊತ್ತ ಕೇವಲ 10 ರನ್ ಆಗುವಷ್ಟರಲ್ಲಿ ಇಬ್ಬರು ಸ್ಟಾರ್ ಓಪನರ್ಗಳಾದ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದ್ದರು.
ಈ ಹಂತದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದೇವದತ್ ಪಡಿಕ್ಕಲ್ ರಕ್ಷಣಾತ್ಮಕ ಆಟದೊಂದಿಗೆ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರಶಿಸಿದರು. ಅಲ್ಲದೆ ಮತ್ತೊಬ್ಬ ಯುವ ಬ್ಯಾಟರ್ ಸಾಯಿ ಸುದರ್ಶನ್ (91 ರನ್) ಜೊತೆಗೂಡಿ ಮೂರನೇ ವಿಕೆಟ್ಗೆ ಭರ್ಜರಿ ಜೊತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ತಂಡವು ಆರಂಭಿಕ ಆಘಾತದಿಂದ ಪಾರಾಗುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಪಡಿಕ್ಕಲ್ ಕೇವಲ 65 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕ ಕೂಡ ಅತ್ಯುತ್ತಮ ಬ್ಯಾಟಿಂಗ್ ಮುಂದುವರೆಸಿದ ಅವರು 128 ಎಸೆತಗಳಲ್ಲಿ ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದರು.
ಶತಕದ ಬಳಿಕ ಮತ್ತೆ ರಕ್ಷಣಾತ್ಮಕದ ಆಟದತ್ತ ಮುಖ ಮಾಡಿದ ಪಡಿಕ್ಕಲ್ 150 ರನ್ಗಳಿಸಲು ತೆಗೆದುಕೊಂಡಿದ್ದು 206 ಎಸೆತಗಳನ್ನು. ಈ ಮೂಲಕ ಟೀಮ್ ಇಂಡಿಯಾವನ್ನು ಫಾಲೋಆನ್ ಭೀತಿಯಿಂದ ಪಾರು ಮಾಡಿದರು.
ಇದಾದ ಬಳಿಕ ದ್ವಿಶತಕದತ್ತ ಹೆಜ್ಜೆ ಹಾಕಿದ ದೇವದತ್ ಪಡಿಕ್ಕಲ್ ಕೇವಲ ಒಂದು ರನ್ನಿಂದ ಡಬಲ್ ಸೆಂಚುರಿ ಮಿಸ್ ಮಾಡಿಕೊಂಡರು. ನ್ಯೂಝಿಲೆಂಡ್ ವೇಗಿ ಬೌಲರ್ ಝಾಕ್ ಗಿಬ್ಸನ್ ಎಸೆತವನ್ನು ಫ್ಲಿಕ್ ಮಾಡಲು ಮುಂದಾಗಿ ವಿಕೆಟ್ ಕೀಪರ್ ಮಿಚೆಲ್ ಹೇಗೆ ಕ್ಯಾಚ್ ನೀಡಿ ಹೊರ ನಡೆದರು.
ದೇವದತ್ ಪಡಿಕ್ಕಲ್ ಅವರ ಈ 199 ರನ್ಗಳ ಭರ್ಜರಿ ಇನಿಂಗ್ಸ್ ನೆರವಿನೊಂದಿಗೆ ಭಾರತ ಎ ತಂಡವು ದ್ವಿತೀಯ ಇನಿಂಗ್ಸ್ನಲ್ಲಿ 90 ಓವರ್ಗಳ ಮುಕ್ತಾಯದ ವೇಳೆಗೆ 5 ವಿಕೆಟ್ ಕಳೆದುಕೊಂಡು 377 ರನ್ ಕಲೆಹಾಕಿದೆ.
ಭಾರತ ಎ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಕೆಎಲ್ ರಾಹುಲ್ , ದೇವದತ್ ಪಡಿಕ್ಕಲ್ , ಸಾಯಿ ಸುದರ್ಶನ್ , ಧ್ರುವ್ ಜುರೆಲ್ (ನಾಯಕ) , ಯಶ್ ರಾಥೋಡ್ , ವಾಷಿಂಗ್ಟನ್ ಸುಂದರ್ , ಅನ್ಶುಲ್ ಕಾಂಬೋಜ್ , ಆಖಿಬ್ ನಬಿ , ಆಕಾಶ್ ದೀಪ್ , ಮುಖೇಶ್ ಚೌಧರಿ.
ಇದನ್ನೂ ಓದಿ: 10ನೇ ವಿಕೆಟ್ಗೆ ಹೊಸ ವಿಶ್ವ ದಾಖಲೆ: ಪಾಕ್ ಪಡೆಗೆ ರಣರೋಚಕ ಜಯ!
ನ್ಯೂಝಿಲೆಂಡ್ ಎ ಪ್ಲೇಯಿಂಗ್ 11: ರೈಸ್ ಮಾರಿಯು (ನಾಯಕ) , ಕರ್ಟಿಸ್ ಹೀಫಿ , ಟಿಮ್ ರಾಬಿನ್ಸನ್ , ಮ್ಯಾಥ್ಯೂ ಬಾಯ್ಲ್ , ಡೀನ್ ಫಾಕ್ಸ್ಕ್ರಾಫ್ಟ್ , ಮಿಚೆಲ್ ಹೇ (ವಿಕೆಟ್ ಕೀಪರ್), ಸೈಮನ್ ಕೀನ್ , ಕ್ರಿಶ್ಚಿಯನ್ ಕ್ಲಾರ್ಕ್ , ಫ್ರೇಸರ್ ಶೀಟ್ , ಜೇಡೆನ್ ಲೆನಾಕ್ಸ್ , ಝಾಕ್ ಗಿಬ್ಸನ್.
ದ್ವಿಶತಕ ಮಿಸ್ ಆಗಿದ್ದು ವೈಯಕ್ತಿಕವಾಗಿ ದೇವದತ್ ಪಡಿಕ್ಕಲ್ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ಬೇಸರ ತಂದಿದ್ದರೂ, ಕಠಿಣ ಪರಿಸ್ಥಿತಿಯಲ್ಲಿ ಅವರು ತೋರಿದ ಈ ಅಪ್ರತಿಮ ತಾಳ್ಮೆ ಹಾಗೂ ಕ್ಲಾಸ್ ಬ್ಯಾಟಿಂಗ್ ಭಾರತೀಯ ಟೆಸ್ಟ್ ಕ್ರಿಕೆಟ್ನ ಭವಿಷ್ಯಕ್ಕೆ ದೊಡ್ಡ ಭರವಸೆ ಮೂಡಿಸಿದೆ. ಟೀಮ್ ಇಂಡಿಯಾದ ಮೂರನೇ ಕ್ರಮಾಂಕಕ್ಕೆ ತಾನು ಸೂಕ್ತ ಆಟಗಾರ ಎಂಬುದನ್ನು ಪಡಿಕ್ಕಲ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಹೀಗಾಗಿ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದೇವದತ್ ಪಡಿಕ್ಕಲ್ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.