IND vs AUS: ಭರ್ಜರಿ ಕಂಬ್ಯಾಕ್; ಆಸೀಸ್ ವಿರುದ್ಧ 5 ವಿಕೆಟ್ ಪಡೆದು ಮಿಂಚಿದ ರವೀಂದ್ರ ಜಡೇಜಾ!

| Updated By: ಪೃಥ್ವಿಶಂಕರ

Updated on: Feb 09, 2023 | 4:48 PM

Ravindra Jadeja: ಜಡೇಜಾ ತಮ್ಮ ಒಟ್ಟು 22 ಓವರ್‌ಗಳಲ್ಲಿ 47 ರನ್ ನೀಡಿ 5 ವಿಕೆಟ್ ಪಡೆದರು. ಈ 22 ಓವರ್‌ಗಳಲ್ಲಿ ಜಡೇಜಾ ಬರೋಬ್ಬರಿ 8 ಓವರ್​ಗಳನ್ನು ಮೇಡನ್‌ ಬೌಲ್ ಮಾಡಿದರು.

IND vs AUS: ಭರ್ಜರಿ ಕಂಬ್ಯಾಕ್; ಆಸೀಸ್ ವಿರುದ್ಧ 5 ವಿಕೆಟ್ ಪಡೆದು ಮಿಂಚಿದ ರವೀಂದ್ರ ಜಡೇಜಾ!
ರವೀಂದ್ರ ಜಡೇಜಾ
Follow us on

ಟೀಂ ಇಂಡಿಯಾದ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadej) ಬರೋಬ್ಬರಿ 5 ತಿಂಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಭರ್ಜರಿ ರೀ ಎಂಟ್ರಿ ಕೊಟ್ಟಿದ್ದಾರೆ. ಇಂಜುರಿಯಿಂದಾಗಿ ಬಹಳ ದಿನಗಳಿಂದ ಟೀಂ ಇಂಡಿಯಾದಿಂದ (Team India) ದೂರ ಉಳಿದಿದ್ದ ಜಡೇಜಾ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ತಮ್ಮ ಕೈ ಕರಾಮತ್ತು ತೋರಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಆಸೀಸ್ ಪಾಳಯದ 5 ವಿಕೆಟ್ ಪಡೆದ ಜಡೇಜಾ ಅರ್ಧದಷ್ಟು ತಂಡವನ್ನು ಪೆವಿಲಿಯನ್​ಗಟ್ಟುವಲ್ಲಿ ಯಶಸ್ವಿಯಾದರು. ಜಡೇಜಾ ಸ್ಪಿನ್ ಜಾದೂಗೆ ನಲುಗಿದ ಆಸ್ಟ್ರೇಲಿಯ ಮೊದಲ ಇನಿಂಗ್ಸ್​ನಲ್ಲಿ ಕೇವಲ 63.5 ಓವರ್​ಗಳಲ್ಲಿ 177 ರನ್ ಗಳಿಗೆ ಆಲೌಟಾಯಿತು.

ಜಡೇಜಾ ತಮ್ಮ ಒಟ್ಟು 22 ಓವರ್‌ಗಳಲ್ಲಿ 47 ರನ್ ನೀಡಿ 5 ವಿಕೆಟ್ ಪಡೆದರು. ಈ 22 ಓವರ್‌ಗಳಲ್ಲಿ ಜಡೇಜಾ ಬರೋಬ್ಬರಿ 8 ಓವರ್​ಗಳನ್ನು ಮೇಡನ್‌ ಬೌಲ್ ಮಾಡಿದರು. ಜಡೇಜಾ ಮ್ಯಾಜಿಕ್​ಗೆ ಬಲಿಯಾದವರಲ್ಲಿ ಮಾರ್ನಾಲ್ ಲಬುಶೇನ್, ಸ್ಟೀವ್ ಸ್ಮಿತ್, ಮ್ಯಾಟ್ ರೆನ್ಶಾ, ಪೀಟರ್ ಹ್ಯಾಂಡ್ಸ್ಕಾಂಬ್ ಮತ್ತು ಟಾಡ್ ಮರ್ಫಿ ಸೇರಿದ್ದಾರೆ. ಆಸ್ಟ್ರೇಲಿಯ ಪರ ಮಾರ್ನಸ್ ಲಬುಶೇನ್ 49 ರನ್ ಗಳಿಸಿದರೆ, ಸ್ಟೀವ್ ಸ್ಮಿತ್ 37 ರನ್ ಕೊಡುಗೆ ನೀಡಿದರು. ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ 36 ರನ್ ಗಳಿಸಿದರೆ, ಪೀಟರ್ ಹ್ಯಾಂಡ್ಸ್‌ಕಾಂಬ್ 31 ರನ್ ಬಾರಿಸಿದರು.

IND vs AUS: ಕನ್ನಡಿಗ ಕುಂಬ್ಳೆ ಹೆಸರಿನಲ್ಲಿದ್ದ ವಿಶ್ವ ದಾಖಲೆಯೊಂದನ್ನು 18 ವರ್ಷಗಳ ಬಳಿಕ ಮುರಿದ ಅಶ್ವಿನ್!

450ನೇ ವಿಕೆಟ್ ಪಡೆದ ಅಶ್ವಿನ್

ಜಡೇಜಾ ನಂತರ ಆರ್. ಅಶ್ವಿನ್ ಕೂಡ ಈ ಪಂದ್ಯದಲ್ಲಿ ಅತಿ ಹೆಚ್ಚು ವಿಕೆಟ್ ಕಬಳಿಸಿದ ಸಾಧನೆ ಮಾಡಿದರು. ಈ ಪಂದ್ಯದಲ್ಲಿ 3 ವಿಕೆಟ್ ಪಡೆದ ಅಶ್ವಿನ್, ಅಲೆಕ್ಸ್ ಕ್ಯಾರಿ ಅವರನ್ನು ಔಟ್ ಮಾಡುವ ಮೂಲಕ ಕನ್ನಡಿಗ ಅನಿಲ್ ಕುಂಬ್ಳೆ ಹೆಸರಿನಲ್ಲಿದ್ದ 18 ವರ್ಷಗಳ ಹಳೆಯ ದಾಖಲೆಯೊಂದನ್ನು ಮುರಿದರು.

ಆಸೀಸ್ ಪರ ಕಣಕ್ಕಿಳಿಯುವ ಮೂಲಕ ತನ್ನ ವೃತ್ತಿ ಜೀವನದ 89ನೇ ಟೆಸ್ಟ್ ಪಂದ್ಯವನ್ನಾಡುತ್ತಿರುವ ಅಶ್ವಿನ್, ಟೆಸ್ಟ್ ಕ್ರಿಕೆಟ್‌ನಲ್ಲಿ 450 ವಿಕೆಟ್‌ಗಳ ಮೈಲಿಗಲ್ಲನ್ನು ಪೂರ್ಣಗೊಳಿಸಿದರು. ಈ ಮೂಲಕ ಕೇವಲ89 ಪಂದ್ಯಗಳಲ್ಲಿ ಟೀಂ ಇಂಡಿಯಾ ಪರ 450 ವಿಕೆಟ್ ಕಬಳಿಸಿದ ಮೊದಲ ಬೌಲರ್ ಎನಿಸಿಕೊಂಡರು. 18 ವರ್ಷಗಳ ಹಿಂದೆ 2005ರಲ್ಲಿ ಕುಂಬ್ಳೆ 93 ಪಂದ್ಯಗಳಲ್ಲಿ 450 ವಿಕೆಟ್ ಪಡೆದ ಸಾಧನೆ ಮಾಡಿದ್ದರು.

ಸೂರ್ಯ- ಭರತ್​ಗೆ ಚೊಚ್ಚಲ ಟೆಸ್ಟ್ ಪಂದ್ಯ

ಸೂರ್ಯಕುಮಾರ್ ಯಾದವ್ ಮತ್ತು ಕೆಎಸ್ ಭರತ್ ಇಬ್ಬರೂ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದಾರೆ. ಸೂರ್ಯಕುಮಾರ್ ಅವರು 30 ವರ್ಷದ ನಂತರ ಟೀಂ ಇಂಡಿಯಾಗೆ ಎಲ್ಲಾ ಮೂರು ಸ್ವರೂಪಗಳಲ್ಲಿ ಪದಾರ್ಪಣೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ.

ಟೀಂ ಇಂಡಿಯಾ : ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆ.ಎಸ್ ಭರತ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಸ್ಟೀವ್ ಸ್ಮಿತ್, ಮ್ಯಾಟ್ ರೆನ್ಶಾ, ಪೀಟರ್ ಹ್ಯಾಂಡ್ಸ್ಕಾಂಬ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಟಾಡ್ ಮರ್ಫಿ, ನಾಥನ್ ಲಿಯಾನ್ ಮತ್ತು ಸ್ಕಾಟ್ ಬೋಲ್ಯಾಂಡ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ