ಭಾರತ ಮತ್ತು ಆಸ್ಟ್ರೇಲಿಯಾ (India and Australia) ನಡುವಿನ ಬಾರ್ಡರ್ ಗವಾಸ್ಕರ್ (Border-Gavaskar Trophy) ಸರಣಿಯ ಕೊನೆಯ ಪಂದ್ಯವು ಮಾರ್ಚ್ 9 ರಿಂದ ಅಹಮದಾಬಾದ್‌ನಲ್ಲಿ ನಡೆಯಲಿದೆ. ಭಾರತ ಪ್ರಸ್ತುತ ಸರಣಿಯಲ್ಲಿ 2-1 ಮುನ್ನಡೆ ಸಾಧಿಸಿದ್ದು, ಕೊನೆಯ ಪಂದ್ಯ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿದೆ. ಇತ್ತ ಕೊನೆಯ ಟೆಸ್ಟ್ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾವು 4ನೇ ಟೆಸ್ಟ್ ಗೆದ್ದು, ಸರಣಿಯನ್ನು ಡ್ರಾ ಮಾಡಿಕೊಳ್ಳಲು ಪ್ರಯತ್ನಿಸಲಿದೆ. ಹೀಗಾಗಿ ಅಹಮದಾಬಾದ್‌ನಲ್ಲಿ ನಡೆಯಲಿರುವ ಈ ಪಂದ್ಯ ಕುತೂಹಲ ಮೂಡಿಸಿದೆ. ಅಲ್ಲದೆ ಈ ಪಂದ್ಯವನ್ನು ಇನ್ನಷ್ಟು ವಿಶೇಷಗೊಳಿಸಲು ಭಾರತ ಮತ್ತು ಆಸ್ಟ್ರೇಲಿಯಾದ ಪ್ರಧಾನಿಗಳು ಕೂಡ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಉಪಸ್ಥಿತರಿರಲಿದ್ದಾರೆ. ಟಿವಿ9 ಹಿಂದಿ ವಾಹಿನಿಯ ವರದಿ ಪ್ರಕಾರ, 4ನೇ ಟೆಸ್ಟ್ ಪಂದ್ಯದಲ್ಲಿ ಪ್ರಧಾನಿ ಮೋದಿಯವರು (PM Narendra Modi) ಪಂದ್ಯದ ವೀಕ್ಷಕ ವಿವರಣೆ ನೀಡಲಿದ್ದಾರೆ ಎಂದು ತಿಳಿದುಬಂದಿದೆ.
ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಸದ್ಯ ಭಾರತ ಪ್ರವಾಸದಲ್ಲಿದ್ದು, ಗುರುವಾರ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪಂದ್ಯವನ್ನು ವೀಕ್ಷಿಸಲಿದ್ದಾರೆ. ಅಲ್ಲದೆ ಇನ್ನೊಂದು ವಿಶೇಷತೆ ಎಂದರೆ, ನರೇಂದ್ರ ಮೋದಿಯವರು ತಮ್ಮ ಹೆಸರಿನ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸಲು ಆಗಮಿಸುತ್ತಿರುವುದು ಇದೇ ಮೊದಲು.
IND vs AUS: ಕನ್ನಡಿಗ ಅನಿಲ್ ಕುಂಬ್ಳೆ ದಾಖಲೆ ಮುರಿಯುವ ಹೊಸ್ತಿಲಿನಲ್ಲಿ ಅಶ್ವಿನ್..!
ಪ್ರಧಾನಿ ಮೋದಿ ನಾಲ್ಕು ದಿನಗಳ ಕಾಲ ತವರು ರಾಜ್ಯದಲ್ಲಿಯೇ ಇರಲಿದ್ದಾರೆ. ಮಾರ್ಚ್ 8 ರಂದು ಬೆಳಗ್ಗೆ 8 ಗಂಟೆಗೆ ಗುಜರಾತ್ ತಲುಪಲಿದ್ದು, ಅಲ್ಲಿಂದ ಆಸ್ಟ್ರೇಲಿಯಾ ಪ್ರಧಾನಿ ಜೊತೆ ಸ್ಟೇಡಿಯಂ ತಲುಪಲಿದ್ದಾರೆ. ಟಾಸ್ ವೇಳೆ ಮೋದಿ ಕ್ರೀಡಾಂಗಣದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದೇ ಸಮಯದಲ್ಲಿ, ಪಂದ್ಯದ ವೇಳೆ ಮೋದಿ ಕಾಮೆಂಟರಿ ಮಾಡುವುದನ್ನು ಸಹ ನೋಡಬಹುದು ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ನಾಲ್ಕು ಪಂದ್ಯಗಳ ಸರಣಿಯ ಮೊದಲೆರಡು ಟೆಸ್ಟ್‌ಗಳನ್ನು ಮೂರು ದಿನಗಳ ಅಂತರದಲ್ಲಿ ಸೋತ ನಂತರ ಬಾರ್ಡರ್-ಗವಾಸ್ಕರ್ ಸರಣಿಯನ್ನು ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಇಂದೋರ್ ಟೆಸ್ಟ್ ಪಂದ್ಯದಲ್ಲಿ ಅದ್ಭುತ ಪುನರಾಗಮನ ಮಾಡಿದೆ. ಪ್ಯಾಟ್ ಕಮಿನ್ಸ್ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವವಹಿಸಿಕೊಂಡಿದ್ದ ಸ್ಟೀವ್ ಸ್ಮಿತ್, ತಂಡಕ್ಕೆ ಸರಣಿಯಲ್ಲಿ ಮೊದಲ ಜಯ ತಂದುಕೊಟ್ಟಿದ್ದಾರೆ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ಟೀಂ ಇಂಡಿಯಾವನ್ನು ಒಂಬತ್ತು ವಿಕೆಟ್‌ಗಳಿಂದ ಮಣಿಸಿದ ಕಾಂಗರೂಗಳು ಈಗ ಮುಂದಿನ ಪಂದ್ಯದಲ್ಲೂ ಅದೇ ರೀತಿಯ ಪ್ರದರ್ಶನ ನೀಡಲು ಎದುರು ನೋಡಿತ್ತಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:03 pm, Mon, 6 March 23