ಬುಮ್ರಾ ಇಲ್ಲದೆ ಕಣಕ್ಕಿಳಿದ ಭಾರತ: ಇತಿಹಾಸ ಸೃಷ್ಟಿಸಿದ ಆಸ್ಟ್ರೇಲಿಯಾ

|

Updated on: Jan 05, 2025 | 8:34 AM

Australia vs India, 5th Test: ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಕಣಕ್ಕಿಳಿದಿಲ್ಲ. ಇದರ ಸಂಪೂರ್ಣ ಲಾಭ ಪಡೆದಿರುವ ಆಸ್ಟ್ರೇಲಿಯಾ ಬ್ಯಾಟರ್​ಗಳು ಟೆಸ್ಟ್ ಕ್ರಿಕೆಟ್​ನಲ್ಲಿ ಹೊಸ ದಾಖಲೆ ಬರೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬುಮ್ರಾ ಇಲ್ಲದೆ ಕಣಕ್ಕಿಳಿದ ಭಾರತ: ಇತಿಹಾಸ ಸೃಷ್ಟಿಸಿದ ಆಸ್ಟ್ರೇಲಿಯಾ
Ind Vs Aus
Follow us on

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ ಗವಾಸ್ಕರ್ ಟ್ರೋಫಿಯ (2024-25) ಕೊನೆಯ ಮತ್ತು ನಿರ್ಣಾಯಕ ಪಂದ್ಯ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ (ಎಸ್‌ಸಿಜಿ) ನಡೆಯುತ್ತಿದೆ. ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್‌ನಲ್ಲಿ ಬೆನ್ನು ನೋವಿನ ಕಾರಣ ಟೀಮ್ ಇಂಡಿಯಾ ವೇಗಿ ಜಸ್​​ಪ್ರೀತ್ ಬುಮ್ರಾ ಕಣಕ್ಕಿಳಿದಿಲ್ಲ. ಇದರ ಸಂಪೂರ್ಣ ಲಾಭ ಪಡೆದ ಆಸ್ಟ್ರೇಲಿಯಾ ಈ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್‌ನ ಆರಂಭದಲ್ಲೇ ಭರ್ಜರಿ ದಾಖಲೆ ಬರೆದಿದೆ.

ಸಿಡ್ನಿಯಲ್ಲಿ ಇತಿಹಾಸ ಸೃಷ್ಟಿಸಿದ ಆಸ್ಟ್ರೇಲಿಯಾ

ಸಿಡ್ನಿ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಎರಡನೇ ಇನಿಂಗ್ಸ್​ನಲ್ಲಿ 157 ರನ್​​ಗಳಿಗೆ ಆಲೌಟ್ ಆಯಿತು. ಅದರಂತೆ 162 ರನ್‌ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಆರಂಭಿಕರು ಸ್ಪೋಟಕ ಆರಂಭ ಒದಗಿಸಿದರು.

ಅದರಲ್ಲೂ ಯುವ ಆರಂಭಿಕ ದಾಂಡಿಗ ಸ್ಯಾಮ್ ಕೊನ್​ಸ್ಟಾಸ್ ಬಿರುಸಿನ ಬ್ಯಾಟಿಂಗ್​ನೊಂದಿಗೆ ಅಬ್ಬರಿಸಿದರು. ಪರಿಣಾಮ ಆಸ್ಟ್ರೇಲಿಯಾ ತಂಡವು ಮೊದಲ ಮೂರು ಓವರ್​​ಗಳಲ್ಲಿ 35 ರನ್​​ ಕಲೆಹಾಕಿತು. ಇದು ಟೆಸ್ಟ್‌ನಲ್ಲಿ ಯಾವುದೇ ಇನ್ನಿಂಗ್ಸ್‌ನ ಮೊದಲ ಮೂರು ಓವರ್‌ಗಳಲ್ಲಿ ಆಸ್ಟ್ರೇಲಿಯಾ ಗಳಿಸಿದ ಗರಿಷ್ಠ ಸ್ಕೋರ್ ಎಂಬುದು ವಿಶೇಷ.

ಈ ವೇಳೆ ಸ್ಯಾಮ್ ಕೊನ್​​ಸ್ಟಾಸ್ ಕೇವಲ 17 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 22 ರನ್ ಬಾರಿಸಿದ್ದರು. ಈ ಮೂಲಕ ಟೆಸ್ಟ್​​ನಲ್ಲಿ ಭರ್ಜರಿ ದಾಖಲೆ ಬರೆಯುವಲ್ಲಿ ಯುವ ದಾಂಡಿಗ ಪ್ರಮುಖ ಪಾತ್ರವಹಿಸಿದರು.

ಜಸ್​ಪ್ರೀತ್ ಬುಮ್ರಾಗೆ ಏನಾಗಿದೆ?

ಟೀಮ್ ಇಂಡಿಯಾ ನಾಯಕ ಜಸ್​ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ 5ನೇ ಟೆಸ್ಟ್ ಪಂದ್ಯದ 2ನೇ ದಿನದಾಟದ ಭೋಜನಾ ವಿರಾಮದ ಬಳಿಕ ದಿಢೀರ್ ಆಗಿ ಡ್ರೆಸ್ಸಿಂಗ್ ರೂಮ್​ಗೆ ಮರಳಿದ್ದರು.

ಭೋಜನಾ ವಿರಾಮದ ಬಳಿಕ ಓವರ್​ ಎಸೆದ ಜಸ್​ಪ್ರೀತ್ ಬುಮ್ರಾ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಅವರ ಬೆನ್ನಿನ ಸ್ನಾಯುವಿನಲ್ಲಿ ಸೆಳೆತ ಉಂಟಾಗಿದ್ದು, ಹೀಗಾಗಿ ಮುನ್ನೆಚ್ಚರಿಕೆಯ ಸಲುವಾಗಿ ಅವರು ಮೈದಾನದಿಂದ ಹೊರ ನಡೆದಿದ್ದರು. ಅದಕ್ಕೂ ಮುನ್ನ ವಿರಾಟ್ ಕೊಹ್ಲಿಗೆ ನಾಯಕತ್ವ ವಹಿಸಿಕೊಳ್ಳುವಂತೆ ತಿಳಿಸಿದ್ದಾರೆ.

ಇದನ್ನೂ ಓದಿ: IND vs AUS: ಮೈದಾನ ತೊರೆದ ಜಸ್​ಪ್ರೀತ್ ಬುಮ್ರಾ: ವಿರಾಟ್ ಕೊಹ್ಲಿ ಕ್ಯಾಪ್ಟನ್

ಇನ್ನು ಡ್ರೆಸ್ಸಿಂಗ್ ರೂಮ್​ಗೆ ತೆರಳಿದ ಬಳಿಕ ಜಸ್​ಪ್ರೀತ್ ಬುಮ್ರಾ ಅವರನ್ನು ಫಿಸಿಯೋ ಪರೀಕ್ಷಿಸಿದ್ದಾರೆ. ಅಲ್ಲದೆ ಸ್ಕ್ಯಾನಿಂಗ್​ಗಾಗಿ ಸಿಡ್ನಿಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಹೀಗಾಗಿ ಮೂರನೇ ದಿನದಾಟದಲ್ಲಿ ಜಸ್​ಪ್ರೀತ್ ಕಾಣಿಸಿಕೊಂಡಿಲ್ಲ.