IND vs AUS: ಮತ್ತೆ ಬ್ಯಾಟಿಂಗ್ ವೈಫಲ್ಯ; 185 ರನ್‌ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದ ಭಾರತ
IND vs AUS: ಸಿಡ್ನಿ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ತಂಡ 185 ರನ್‌ಗಳಿಗೆ ಆಲೌಟ್ ಆಗಿದೆ. 17 ಎಸೆತಗಳಲ್ಲಿ 22 ರನ್ ಗಳಿಸಿ ಔಟಾದ ಜಸ್ಪ್ರೀತ್ ಬುಮ್ರಾ ರೂಪದಲ್ಲಿ ಭಾರತದ ಕೊನೆಯ ವಿಕೆಟ್ ಪತನವಾಯಿತು. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಯಾವುದೇ ಬ್ಯಾಟ್ಸ್‌ಮನ್ ಅರ್ಧಶತಕ ಗಳಿಸಲಿಲ್ಲ ಎಂಬುದು ಕಳಪೆ ಬ್ಯಾಟಿಂಗ್ಗೆ ಹಿಡಿದ ಕೈಗನ್ನಡಿಯಾಗಿದೆ.
ಸಿಡ್ನಿಯಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾ ಮೊದಲ ದಿನದಾಟದಲ್ಲೇ ಕೇವಲ 185 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ ತನ್ನ ಮೊದಲ ಇನ್ನಿಂಗ್ಸ್ ಮುಗಿಸಿದೆ. ಈ ಇನ್ನಿಂಗ್ಸ್‌ನಲ್ಲಿ ಭಾರತ ತಂಡಕ್ಕೆ ಕೇವಲ 72.2 ಓವರ್‌ಗಳಷ್ಟೇ ಬ್ಯಾಟಿಂಗ್ ಮಾಡಲು ಸಾಧ್ಯವಾಯಿತು. ತಂಡದ ಪರ ರಿಷಬ್ ಪಂತ್ ಗರಿಷ್ಠ 40 ರನ್ ಗಳಿಸಿದರೆ, ರವೀಂದ್ರ ಜಡೇಜಾ 26 ರನ್, ನಾಯಕ ಜಸ್ಪ್ರೀತ್ ಬುಮ್ರಾ 22 ರನ್, ಶುಭ್ಮನ್ ಗಿಲ್ 20 ರನ್, ವಿರಾಟ್ ಕೊಹ್ಲಿ 17 ರನ್ ಮತ್ತು ಯಶಸ್ವಿ ಜೈಸ್ವಾಲ್ 10 ರನ್ಗಳ ಕಾಣಿಕೆ ನೀಡಿದರು. ಇವರನ್ನು ಬಿಟ್ಟರೆ ಇತರ ಬ್ಯಾಟ್ಸ್‌ಮನ್‌ಗಳಿಗೆ ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ. ಕೆಎಲ್ ರಾಹುಲ್ ನಾಲ್ಕು ರನ್, ಪ್ರಸಿದ್ಧ್ ಕೃಷ್ಣ ಮೂರು ರನ್ ಮತ್ತು ಮೊಹಮ್ಮದ್ ಸಿರಾಜ್ ಮೂರು ರನ್ ಕಲೆಹಾಕಿದರೆ, ನಿತೀಶ್ ರೆಡ್ಡಿಗೆ ಖಾತೆ ತೆರೆಯಲು ಸಾಧ್ಯವಾಗಲಿಲ್ಲ. ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲ್ಯಾಂಡ್ ನಾಲ್ಕು ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ ಮೂರು ವಿಕೆಟ್ ಪಡೆದರು. ಪ್ಯಾಟ್ ಕಮಿನ್ಸ್ ಎರಡು ವಿಕೆಟ್ ಪಡೆದರೆ, ನಾಥನ್ ಲಿಯಾನ್ ಒಂದು ವಿಕೆಟ್ ಪಡೆದರು.
ಅಗ್ರಕ್ರಮಾಂಕ ವಿಫಲ
ತಂಡದ ಪರ ಇನ್ನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಕೇವಲ 4 ರನ್‌ಗಳಿಗೆ ಸುಸ್ತಾದರು. ರಾಹುಲ್ ಔಟಾದ ಬೆನ್ನಲ್ಲೇ ಸ್ಕಾಟ್ ಬೋಲ್ಯಾಂಡ್ ಬೌಲಿಂಗ್ನಲ್ಲಿ 10 ರನ್ ಕಲೆಹಾಕಿದ್ದ ಯಶಸ್ವಿ ಜೈಸ್ವಾಲ್ ಕೂಡ ವಿಕೆಟ್ ಒಪ್ಪಿಸಿದರು. ಹೀಗಾಗಿ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಈ ವೇಳೆ ಅನುಭವಿ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಅದಕ್ಕೆ ತಕ್ಕಂತೆ ಮೊದಲ ಎಸೆತದಲ್ಲಿ ಸಿಕ್ಕ ಜೀವದಾನವನ್ನು ಬಳಸಿಕೊಳ್ಳಲು ಯತ್ನಿಸಿದ ಕೊಹ್ಲಿ ತಾಳ್ಮೆಯ ಆಟಕ್ಕೆ ಮುಂದಾದರು. ಆದರೆ ಭೋಜನ ವಿರಾಮಕ್ಕೆ ಕೆಲವೇ ನಿಮಿಷಗಳಿರುವಾಗ ಶುಬ್‌ಮನ್ ಗಿಲ್ ಕೆಟ್ಟ ಹೊಡೆತವನ್ನು ಆಡಿ ಔಟಾದರು. ಇದಾದ ಬಳಿಕ ವಿರಾಟ್ ಕೊಹ್ಲಿ ಕೂಡ 17 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು.
ಪಂತ್-ಜಡೇಜಾ ಜೊತೆಯಾಟ
ಹೀಗಾಗಿ ಭಾರತ 72 ರನ್‌ಗಳಿಗೆ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಪಂತ್ ಮತ್ತು ಜಡೇಜಾ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡರು. ಇಬ್ಬರೂ ಬಹಳ ಹೊತ್ತು ಬ್ಯಾಟಿಂಗ್ ಕಾಯ್ದುಕೊಂಡರು. ಆದರೆ ಬ್ಯಾಟಿಂಗ್ ಸಮಯದಲ್ಲಿ ಪಂತ್, ಆಸೀಸ್ ಬೌಲರ್ಗಳ ಘಾತುಕ ಎಸೆತಗಳಿಂದ ಸಾಕಷ್ಟು ಹೊಡೆತಗಳನ್ನು ತಿನ್ನಬೇಕಾಯಿತು. ಆದಾಗ್ಯೂ ತನ್ನ ಆಟವನ್ನು ಮುಂದುವರೆಸಿದ ಪಂತ್ 40 ರನ್ ಗಳಿಸಿ ಬೋಲ್ಯಾಂಡ್ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಪಂತ್ ವಿಕೆಟ್ ಪತನದ ಬಳಿಕ ಬಂದ ನಿತೀಶ್ ಮೇಲೆ ಈ ಪಂದ್ಯದಲ್ಲೂ ಭರವಸೆ ಮೂಡಿತ್ತು. ಏಕೆಂದರೆ ಕಳೆದ ಪಂದ್ಯದಲ್ಲಿ ಸ್ಮರಣೀಯ ಶತಕ ಸಿಡಿಸಿದ್ದ ನಿತೀಶ್, ಈ ಪಂದ್ಯದಲ್ಲೂ ತಂಡವನ್ನು ಸಂಕಷ್ಟದಿಂದ ಪಾರು ಮಾಡುತ್ತಾರೆ ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ನಿತೀಶ್ ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದರು.
ಮತ್ತೊಬ್ಬ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕೂಡ ಯಾವುದೇ ಪ್ರಭಾವ ಬೀರಲು ಸಾಧ್ಯವಾಗದೆ 14 ರನ್‌ಗಳಿಗೆ ಸುಸ್ತಾದರು. ಆಕಾಶ್ ದೀಪ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಕನ್ನಡಿಗ ಪ್ರಸಿದ್ಧ್ ಕೃಷ್ಣ ಆಟ 3 ರನ್‌ಗಳಿಗೆ ಕೊನೆಯಾಯಿತು. ಆದರೆ ನಾಯಕನ ಇನ್ನಿಂಗ್ಸ್ ಆಡಿದ ಜಸ್ಪ್ರೀತ್ ಬುಮ್ರಾ ಹೊಡಿಬಡಿ ಆಟದ ಮೂಲಕ 27 ರನ್ಗಳ ಕಾಣಿಕೆ ನೀಡಿ ತಂಡವನ್ನು 185 ರನ್‌ಗಳಿಗೆ ಕೊಂಡೊಯ್ದರು.
ಆಸೀಸ್ಗೆ ಆರಂಭಿಕ ಆಘಾತ
ಸಿಡ್ನಿ ಟೆಸ್ಟ್‌ನ ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ಕೂಡ ಒಂದು ವಿಕೆಟ್ ಕಳೆದುಕೊಂಡಿದೆ. ಜಸ್ಪ್ರೀತ್ ಬುಮ್ರಾ ಎಸೆತದಲ್ಲಿ ಆರಂಭಿಕ ಉಸ್ಮಾನ್ ಖವಾಜಾ ಸ್ಲಿಪ್ನಲ್ಲಿ ನಿಂತಿದ್ದ ರಾಹುಲ್ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಖವಾಜಾ ಕೇವಲ 2 ರನ್ ಗಳಿಸಲಷ್ಟೇ ಶಕ್ತರಾದರು. ಖವಾಜಾ ಅವರ ವಿಕೆಟ್ ಪತನದ ನಂತರ ದಿನದಾಟವನ್ನು ಕೂಡ ಮುಗಿಸಲಾಯಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Fri, 3 January 25