IND vs AUS: ನಿವೃತ್ತಿಯ ನಂತರ ನ್ಯೂನತೆ ಸರಿಪಡಿಸಿಕೊಳ್ಳಲು ನಿರ್ಧರಿಸಿದ ವಿರಾಟ್ ಕೊಹ್ಲಿ..!

Virat Kohli's Struggle: ವಿರಾಟ್ ಕೊಹ್ಲಿ ಕಳೆದ ಹಲವು ವರ್ಷಗಳಕಿಂದ ಸ್ಲಿಪ್‌ನಲ್ಲಿ ಕ್ಯಾಚ್ ನೀಡಿ ಔಟ್ ಆಗುವುದು ಸಾಮಾನ್ಯವಾಗಿದೆ. ಕಳೆದ ಎಂಟು ಇನ್ನಿಂಗ್ಸ್‌ಗಳಲ್ಲಿ ಏಳು ಬಾರಿ ಕೊಹ್ಲಿ ಈ ರೀತಿ ಔಟ್ ಆಗಿದ್ದಾರೆ. ಸ್ಟಂಪ್‌ನಿಂದ ಹೊರ ಹೋಗುವ ಚೆಂಡನ್ನು ಆಡುವ ಯತ್ನದಲ್ಲಿ ಕೊಹ್ಲಿ ವಿಕೆಟ್ ಕೈಚೆಲ್ಲುತ್ತಿದ್ದಾರೆ. ಈ ನ್ಯೂನತೆಯನ್ನು ಸರಿಪಡಿಸಿಕೊಳ್ಳದಿರುವುದು ಕೊಹ್ಲಿ ಅವರ ಆಟಕ್ಕೆ ಹಾನಿಯನ್ನುಂಟು ಮಾಡುತ್ತಿದೆ.

IND vs AUS: ನಿವೃತ್ತಿಯ ನಂತರ ನ್ಯೂನತೆ ಸರಿಪಡಿಸಿಕೊಳ್ಳಲು ನಿರ್ಧರಿಸಿದ ವಿರಾಟ್ ಕೊಹ್ಲಿ..!
ವಿರಾಟ್ ಕೊಹ್ಲಿ
Follow us
ಪೃಥ್ವಿಶಂಕರ
|

Updated on: Jan 03, 2025 | 9:47 AM

ಕ್ರಿಕೆಟ್ ಎಂದ ಮೇಲೆ ಇಲ್ಲಿ ಬೌಲರ್​ ವಿಕೆಟ್ ಉರುಳಿಸುವುದು ಸಹಜ, ಇತ್ತ ಬ್ಯಾಟ್ಸ್‌ಮನ್ ಕೂಡ ವಿಕೆಟ್ ಒಪ್ಪಿಸುವುದು ಸಹಜ. ಇದು ವಿರಾಟ್ ಕೊಹ್ಲಿಯನ್ನು ಹೊರತಾಗಿಲ್ಲ. ಆದರೆ ಕಳೆದ ಆರೇಳು ವರ್ಷಗಳಿಂದ ವಿರಾಟ್ ಕೊಹ್ಲಿಗೆ ಕಾಡುತ್ತಿರುವ ಅದೊಂದು ಭೂತದಿಂದ ಪಾರಾಗಲು ಕ್ರಿಕೆಟ್ ಲೋಕದ ಸಾಮ್ರಾಟನಿಗೆ ಸಾಧ್ಯವಾಗುತ್ತಿಲ್ಲ. ಒಂದು ಕಾಲದಲ್ಲಿ ಕೊಹ್ಲಿ ವಿಕೆಟ್ ಪಡೆಯಲು ಹೆಣಗಾಡುತ್ತಿದ್ದ ಎದುರಾಳಿ ಬೌಲರ್​ಗಳು, ಇದೀಗ ಸರಾಗವಾಗಿ ಕೊಹ್ಲಿಯನ್ನು ಕ್ಷಣ ಮಾತ್ರದಲ್ಲಿ ಬಲಿ ಪಡೆಯುತ್ತಿದ್ದಾರೆ. ಇದಕ್ಕೆ ಕಾರಣ ಕೊಹ್ಲಿಯ ಅದೊಂದು ನ್ಯೂನತೆ ವಿಶ್ವ ಕ್ರಿಕೆಟ್​ನ ಎಲ್ಲಾ ಬೌಲರ್​ಗಳಿಗೆ ಗೊತ್ತಾಗಿದೆ. ಅದರ ಲಾಭ ಪಡೆಯುತ್ತಿರುವ ಬೌಲರ್​ಗಳು ನೀರು ಕುಡಿದಷ್ಟೇ ಸರಾಗವಾಗಿ ಕೊಹ್ಲಿಯನ್ನು ಪೆವಿಲಿಯನ್​ಗಟ್ಟುತ್ತಿದ್ದರೆ, ಇತ್ತ ಸತತವಾಗಿ ಒಂದೇ ತಪ್ಪಿಗೆ ವಿಕೆಟ್ ಕೈಚೆಲ್ಲುತ್ತಿದ್ದರೂ ಅದನ್ನು ಸರಿಪಡಿಸಿಕೊಳ್ಳುವ ಗೋಜಿಗೆ ವಿರಾಟ್ ಕೊಹ್ಲಿ ಹೊದಂತೆ ಕಾಣುತ್ತಿಲ್ಲ.

ಜೀವದಾನ ಸಿಕ್ಕರೂ ಕೊಹ್ಲಿ ಫೇಲ್

ವಾಸ್ತವವಾಗಿ ಸಿಡ್ನಿ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿಗೆ ಮೊದಲ ಎಸೆತದಲ್ಲೇ ಜೀವದಾನ ಸಿಕ್ಕಿತ್ತು. ವೇಗಿ ಸ್ಕಾಟ್ ಬೋಲ್ಯಾಂಡ್ ಎಸೆತದಲ್ಲಿ ಕೊಹ್ಲಿ ಸ್ಲಿಪ್‌ನಲ್ಲಿ ನಿಂತಿದ್ದ ಸ್ಮಿತ್​ಗೆ ಕ್ಯಾಚ್ ನೀಡಿದ್ದರು. ಆದರೆ ಸ್ಮಿತ್ ಕ್ಯಾಚ್ ಹಿಡಿಯುವಲ್ಲಿ ಕೊಂಚ ಎಡವಿದ ಕಾರಣ ಕೊಹ್ಲಿ ಔಟಾಗುವುದರಿಂದ ಪಾರಾಗಿದ್ದರು. ಆದರೆ ಮೊದಲ ಎಸೆತದಲ್ಲೇ ಸಿಕ್ಕ ಜೀವದಾನವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ಕೊಹ್ಲಿ ಎಡವಿದ್ದಾರೆ. ಇಡೀ ಸರಣಿಯಲ್ಲಿ ಕೊಹ್ಲಿಗೆ ತೊಂದರೆ ನೀಡಿದ್ದ ಅದೇ ವೇಗಿಗೆ ಮತ್ತೊಮ್ಮೆ ವಿರಾಟ್ ಬಲಿಯಾಗಿದ್ದಾರೆ.

ಮತ್ತೆ ಸ್ಲಿಪ್​ನಲ್ಲಿ ಕ್ಯಾಚ್

ಮೊದಲ ಇನ್ನಿಂಗ್ಸ್​ನಲ್ಲಿ ಬರೋಬ್ಬರಿ 69 ಎಸೆತಗಳನ್ನು ಎದುರಿಸಿದ ಕೊಹ್ಲಿ ಕೇವಲ 17 ರನ್ ಗಳಿಸಲಷ್ಟೇ ಶಕ್ತರಾದರು. ಮೊದಲ ಪ್ರಯತ್ನದಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದ ಸ್ಕಾಟ್ ಬೋಲ್ಯಾಂಡ್, ಎರಡನೇ ಪ್ರಯತ್ನದಲ್ಲಿ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ವಾಸ್ತವವಾಗಿ ಬೋಲ್ಯಾಂಡ್ ಬೌಲ್ ಮಾಡಿದ ಚೆಂಡು ಐದಾರನೇ ಸ್ಟಂಪ್​ನಿಂದ ಹೊರ ಹೋಗುತ್ತಿತ್ತು. ಅದನ್ನು ಆಡಲು ಯತ್ನಿಸಿದ ಕೊಹ್ಲಿ ಮೂರನೇ ಸ್ಲಿಪ್‌ನಲ್ಲಿ ನಿಂತಿದ್ದ ಬ್ಯೂ ವೆಬ್‌ಸ್ಟರ್​ಗೆ ಕ್ಯಾಚ್ ನೀಡಿ ನಿರ್ಗಮನಿಸಿದರು. ಈ ಮೂಲಕ ಸೊನ್ನೆಗೆ ಜೀವದಾನ ಪಡೆದಿದ್ದ ವಿರಾಟ್ ತನ್ನ ಸ್ಕೋರ್‌ಗೆ ಕೇವಲ 17 ರನ್ ಸೇರಿಸಲಷ್ಟೇ ಶಕ್ತರಾದರು.

8 ರಲ್ಲಿ 7 ಬಾರಿ ಒಂದೇ ರೀತಿ ಔಟ್

ಸಿಡ್ನಿ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಔಟ್ ಆದ ರೀತಿ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಮೊದಲ ಬಾರಿಗೆ ಕಾಣಲಿಲ್ಲ. ವಾಸ್ತವವಾಗಿ, ವಿರಾಟ್ ತಮ್ಮ ಕೊನೆಯ 8 ಇನ್ನಿಂಗ್ಸ್‌ಗಳಲ್ಲಿ 7 ಬಾರಿ ಅದೇ ರೀತಿಯಲ್ಲಿ ಔಟಾಗಿದ್ದಾರೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಕೊಹ್ಲಿ ಪ್ರತಿ ಬಾರಿಯೂ ಸ್ಲಿಪ್‌ನಲ್ಲಿ ಕ್ಯಾಚಿತ್ತು ವಿಕೆಟ್ ಒಪ್ಪಿಸಿದ್ದಾರೆ. ಅದರಲ್ಲೂ ಸ್ಟಂಪ್​ನಿಂದ ಹೊರಹೋಗುವ ಚೆಂಡನ್ನು ಆಡುವ ಯತ್ನದಲ್ಲಿ ವಿರಾಟ್ ವಿಕೆಟ್ ಕೈಚೆಲ್ಲಿರುವುದು ಅವರ ನ್ಯೂನತೆಗೆ ಹಿಡಿದ ಕೈಗನ್ನಡಿಯಾಗಿದೆ.

ಅಷ್ಟಕ್ಕೂ ಕೊಹ್ಲಿ ಈ ಸರಣಿಯಲ್ಲಿ ಮಾತ್ರ ಈ ರೀತಿಯಾಗಿ ವಿಕೆಟ್ ಒಪ್ಪಿಸಿಲ್ಲ. ಬದಲಿಗೆ ಕಳೆದ ಆರೇಳು ವರ್ಷಗಳಿಂದಲ್ಲೂ ಕೊಹ್ಲಿ ಸಾಕಷ್ಟು ಬಾರಿ ಈ ರೀತಿಯ ಶಾಟ್ ಆಡಿ ವಿಕೆಟ್ ಒಪ್ಪಿಸಿದ್ದಾರೆ. ಆದರೂ ಕೊಹ್ಲಿ ತಮ್ಮ ನ್ಯೂನತೆಯನ್ನು ಸರಿಪಡಿಸಿಕೊಳ್ಳುವತ್ತ ಗಮನ ಹರಿಸಿಲ್ಲ ಎಂಬುದು ಅವರ ಆಟದಿಂದಲೇ ಗೋಚರಿಸುತ್ತದೆ. ಪ್ರಸ್ತುತ ನಿವೃತ್ತಿಯ ಅಂಚಿನಲ್ಲಿರುವ ಕೊಹ್ಲಿ, ನಿವೃತ್ತಿಯ ನಂತರವಷ್ಟೇ ತಮ್ಮ ನ್ಯೂನತೆಯನ್ನು ಸರಿಪಡಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ ಎಂದು ತೋರುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ