IND vs AUS: ಪ್ಲೇಯಿಂಗ್ 11ನಿಂದ ಮಾತ್ರವಲ್ಲ, ತಂಡದಿಂದಲೇ ಹೊರಬಿದ್ದ ರೋಹಿತ್ ಶರ್ಮಾ..!
Rohit Sharma Dropped from Sydney Test: ಸಿಡ್ನಿ ಟೆಸ್ಟ್‌ನಿಂದ ರೋಹಿತ್ ಶರ್ಮಾ ಅವರನ್ನು ಕೈಬಿಡಲಾಗಿದೆ, ಅವರ ಸ್ಥಾನದಲ್ಲಿ ಜಸ್ಪ್ರೀತ್ ಬುಮ್ರಾ ನಾಯಕತ್ವ ವಹಿಸಿದ್ದಾರೆ. ಆದರೆ ಟಾಸ್ ಬಳಿಕ ಹೊರಬಿದ್ದಿರುವ ತಂಡದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರಿಲ್ಲದೆ ಇರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಪ್ರಕಟವಾಗಿರುವ 16 ಆಟಗಾರರ ಹೆಸರಲ್ಲಿ ರೋಹಿತ್ ಶರ್ಮಾ ಹೆಸರಿಲ್ಲ.
ಸಿಡ್ನಿ ಟೆಸ್ಟ್ನಲ್ಲಿ ಎಲ್ಲರೂ ಏನನ್ನು ನಿರೀಕ್ಷಿಸಿದ್ದರೋ ಅದು ಸಂಭವಿಸಿದೆ. ಟೀಂ ಇಂಡಿಯಾದ ನಾಯಕ ರೋಹಿತ್ ಶರ್ಮಾರನ್ನು ಸಿಡ್ನಿ ಟೆಸ್ಟ್‌ನ ಪ್ಲೇಯಿಂಗ್ ಹನ್ನೊಂದರಿಂದ ಕೈಬಿಡಲಾಗಿದೆ. ರೋಹಿತ್ ಬದಲಿಗೆ ಜಸ್ಪ್ರೀತ್ ಬುಮ್ರಾಗೆ ತಂಡದ ನಾಯಕತ್ವ ನೀಡಲಾಗಿದೆ. ಒಂದೆಡೆ ರೋಹಿತ್ರನ್ನು ತಂಡದಿಂದ ಕೈಬಿಟ್ಟ ನಿರ್ಧಾರವನ್ನು ಹಲವರು ಪುರಸ್ಕರಿಸಿದ್ದಾರೆ. ಕಳಪೆ ಫಾರ್ಮ್ನಿಂದ ಬಳಲುತ್ತಿರುವವನ್ನು ತಂಡದಿಂದ ಹೊರಗಿಟ್ಟು ಫಾರ್ಮ್ನಲ್ಲಿರುವವರಿಗೆ ಅವಕಾಶ ಕೊಡುವುದು ಒಳ್ಳೇಯ ನಿರ್ಧಾರ ಎಂಬುದು ಎಲ್ಲರ ಅಭಿಪ್ರಾಯವಾಗಿದೆ. ಇತ್ತ ತನ್ನ ನೆಚ್ಚಿನ ಆಟಗಾರನನ್ನು ತಂಡದಿಂದ ಕೈಬಿಟ್ಟಿರುವುದಕ್ಕೆ ರೋಹಿತ್ ಅಭಿಮಾನಿಗಳು ಸಿಟ್ಟಾಗಿದ್ದಾರೆ. ಇದೆಲ್ಲದರ ನಡುವೆ ಮತ್ತೊಂದು ಶಾಕಿಂಗ್ ಮಾಹಿತಿ ಹೊರಬಿದ್ದಿದ್ದು, ಸಿಡ್ನಿ ಟೆಸ್ಟ್‌ನಿಂದ ರೋಹಿತ್ ಶರ್ಮಾ ಆಡುವ ಹನ್ನೊಂದರ ಬಳಗದಿಂದ ಮಾತ್ರವಲ್ಲದೆ ಇಡೀ ತಂಡದಿಂದಲೇ ಹೊರಗುಳಿದಿದ್ದಾರೆ. ಟಾಸ್ ಬಳಿಕ ಹೊರಬಿದ್ದಿರುವ ಭಾರತ ತಂಡದ ಪಟ್ಟಿಯಲ್ಲಿ ರೋಹಿತ್ ಶರ್ಮಾ ಹೆಸರಿರಲಿಲ್ಲ. ಟೀಂ ಇಂಡಿಯಾದ ತಂಡದಲ್ಲಿ ಒಟ್ಟು 16 ಹೆಸರುಗಳಿದ್ದು, ಅದರಲ್ಲಿ ರೋಹಿತ್ ಹೆಸರು ನಾಪತ್ತೆಯಾಗಿದೆ.
16 ಹೆಸರುಗಳಲ್ಲಿ ರೋಹಿತ್ ಹೆಸರಿಲ್ಲ
ಯಾವುದೇ ಪಂದ್ಯದ ಆರಂಭಕ್ಕೆ ಮೊದಲು, ಎರಡೂ ತಂಡಗಳು ತಮ್ಮ ತಂಡದ ಪ್ಲೇಯಿಂಗ್ 11 ಹಾಗೂ ಮೀಸಲು ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುತ್ತವೆ. ಇದು ತಂಡದಲ್ಲಿರುವ ಎಲ್ಲಾ ಆಟಗಾರರ ಹೆಸರನ್ನು ಒಳಗೊಂಡಿರುತ್ತದೆ. ಮೊದಲನೆಯದಾಗಿ, ಆಡುವ ಹನ್ನೊಂದರಲ್ಲಿ ಆಡುವ ಆಟಗಾರರ 11 ಹೆಸರುಗಳು ಮತ್ತು ನಂತರ ತಂಡದಲ್ಲಿ ಸೇರಿಸಲಾದ ಆಟಗಾರರ ಹೆಸರನ್ನು ಇದು ಒಳಗೊಂಡಿರುತ್ತದೆ. ಆದರೆ ಟೀಂ ಇಂಡಿಯಾದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಹೆಸರು ಕಾಣೆಯಾಗಿದೆ. ಆಡುವ ಹನ್ನೊಂದರ ಬಳಗದ ಹೊರತಾಗಿ, ದೇವದತ್ ಪಡಿಕ್ಕಲ್, ಧ್ರುವ್ ಜುರೆಲ್, ಅಭಿಮನ್ಯು ಈಶ್ವರನ್, ಸರ್ಫರಾಜ್ ಖಾನ್ ಮತ್ತು ಹರ್ಷಿತ್ ರಾಣಾ ಅವರ ಹೆಸರುಗಳು ಈ ಪಟ್ಟಿಯಲ್ಲಿವೆ. ಆದರೆ ಅದರಲ್ಲಿ ರೋಹಿತ್ ಶರ್ಮಾ ಇರಲಿಲ್ಲ.
Rohit Sharma hasn’t stepped out with the rest of the squad & his name no longer appears in the squad list either. A different meaning to “opted to rest” perhaps #AusvInd pic.twitter.com/yRb203Rmni
— Bharat Sundaresan (@beastieboy07) January 2, 2025
ರೋಹಿತ್ ಶಾಶ್ವತವಾಗಿ ಔಟ್?
ಸಿಡ್ನಿ ಟೆಸ್ಟ್‌ನ ತಂಡದ ಪಟ್ಟಿಯನ್ನು ನೋಡಿದರೆ, ರೋಹಿತ್ ಶರ್ಮಾ ಈಗ ಟೀಂ ಇಂಡಿಯಾದಿಂದ ಶಾಶ್ವತವಾಗಿ ಹೊರಗುಳಿಯುತ್ತಾರಾ ಎಂಬುದು ಮೊದಲ ಪ್ರಶ್ನೆಯಾಗಿದೆ. ತಂಡದಲ್ಲಿ ಅವರ ಅನುಪಸ್ಥಿತಿಯು ರೋಹಿತ್ ಶರ್ಮಾ ಅವರ ಟೆಸ್ಟ್ ವೃತ್ತಿಜೀವನ ಮುಗಿದಿದೆ ಎಂಬುದರ ಸಂಕೇತವೇ? ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಟೀಂ ಇಂಡಿಯಾ ಫೈನಲ್ ತಲುಪಿದರೆ ರೋಹಿತ್ ಶರ್ಮಾ ಆಡುತ್ತಾರಾ? ಪ್ರಸ್ತುತ, ಈ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲವಾದರೂ ಶೀಘ್ರದಲ್ಲೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.
ರೋಹಿತ್ ಅವರ ಫಾರ್ಮ್ ಮತ್ತು ವಯಸ್ಸನ್ನು ನೋಡಿದರೆ ಅವರು ಮತ್ತೆ ಟೆಸ್ಟ್ ತಂಡಕ್ಕೆ ಪುನರಾಗಮನ ಮಾಡುವಂತೆ ಕಾಣುತ್ತಿಲ್ಲ. ಆಸ್ಟ್ರೇಲಿಯಾ ಸರಣಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿರುವ ರೋಹಿತ್ ಕಳೆದ 8 ಟೆಸ್ಟ್‌ಗಳಲ್ಲಿ ಕೇವಲ ಒಂದು ಅರ್ಧಶತಕ ಮಾತ್ರ ಸಿಡಿಸಿದ್ದಾರೆ. ಇಷ್ಟೇ ಅಲ್ಲ, ರೋಹಿತ್‌ಗೆ ಈಗ ಸುಮಾರು 38 ವರ್ಷ, ಆದ್ದರಿಂದ ಅವರು ಮತ್ತೆ ಟೆಸ್ಟ್ ತಂಡಕ್ಕೆ ಹಿಂತಿರುಗುವುದು ಬಹುತೇಕ ಅಸಾಧ್ಯ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:53 am, Fri, 3 January 25