IND vs AUS: ರೋಹಿತ್‌ಗೆ ಗೇಟ್ಪಾಸ್; ಬಿಸಿಸಿಐ ಅಧಿಕಾರಿಯ ಮಾತನ್ನೂ ಕೇಳದ ಗಂಭೀರ್
IND vs AUS: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರನ್ನು ತಂಡದಿಂದ ಹೊರಗಿಡಲಾಗಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರ ಇದಕ್ಕೆ ಕಾರಣ ಎನ್ನಲಾಗಿದೆ. ರೋಹಿತ್ ಅವರ ಕಳಪೆ ಪ್ರದರ್ಶನ ಮತ್ತು ಗಂಭೀರ್ ಅವರೊಂದಿಗಿನ ಭಿನ್ನಾಭಿಪ್ರಾಯಗಳು ಇದಕ್ಕೆ ಕಾರಣ ಎಂದು ವರದಿಯಾಗಿದೆ. ಬಿಸಿಸಿಐ ಅಧಿಕಾರಿಗಳು ರೋಹಿತ್ ಅವರನ್ನು ಆಡಿಸುವಂತೆ ಮನವಿ ಮಾಡಿದ್ದರೂ, ಗಂಭೀರ್ ಅವರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ಈ ಘಟನೆಯು ಭಾರತೀಯ ಕ್ರಿಕೆಟ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ಆರಂಭವಾಗಿದೆ. ಒಂದೆಡೆ ತಂಡಕ್ಕೆ ಆರಂಭಿಕ ಆಘಾತ ಎದುರಾಗಿದ್ದರೆ, ಮತ್ತೊಂದೆಡೆ ತಂಡದಲ್ಲಿ ಏನೂ ಸರಿ ಇಲ್ಲ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ. ಅದರಲ್ಲೂ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವೆ ಭಿನ್ನಮತ ಉಂಟಾಗಿದೆ ಎಂಬ ಸುದ್ದಿಗೆ ಸಾಕಷ್ಟು ವೇಗ ಸಿಕ್ಕಿದೆ. ವಾಸ್ತವವಾಗಿ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದಿಂದ ಹೊರಗುಳಿದಿದ್ದಾರೆ. ಇದು ಸ್ವತಃ ರೋಹಿತ್ ಅವರ ನಿರ್ಧಾರ ಎಂಬುದು ಟೀಂ ಇಂಡಿಯಾ ಪಾಳಯದಿಂದ ಕೇಳಿಬಂದಿದ್ದ ಮಾತಾಗಿತ್ತು. ಆದರೀಗ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದ್ದು, ವರದಿಯ ಪ್ರಕಾರ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್, ರೋಹಿತ್ ಅವರನ್ನು ತಂಡದಿಂದ ಕೈಬಿಡುವುದಕ್ಕೆ ಮುಂದಾಗಿದ್ದರು. ಆದರೆ ರೋಹಿತ್‌ರನ್ನು ತಂಡದಲ್ಲಿ ಆಡಿಸುವಂತೆ ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದರೂ ಆ ಮನವಿಯನ್ನು ಗಂಭೀರ್ ತಿರಸ್ಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಗಂಭೀರ್ ಯಾರ ಮಾತನ್ನೂ ಕೇಳಲಿಲ್ಲ
ವಾಸ್ತವವಾಗಿ ರೋಹಿತ್ ಶರ್ಮಾ ಕಳಪೆ ಫಾರ್ಮ್‌ನಿಂದ ಬಳಲುತ್ತಿದ್ದಾರೆ. ಇಡೀ ಸರಣಿಯಲ್ಲಿ ಇದುವರೆಗೆ ರೋಹಿತ್ ಆಟಗಾರನಾಗಿ ಮತ್ತು ನಾಯಕನಾಗಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಅವರ ನಾಯಕತ್ವದಲ್ಲಿ ಟೀಂ ಇಂಡಿಯಾ ಸತತ ಸೋಲುಗಳನ್ನು ಎದುರಿಸುತ್ತಿದೆ. ಹೀಗಾಗಿ ಅವರನ್ನು ಟೆಸ್ಟ್ ಮಾದರಿಯಿಂದ ಕೈಬಿಡಬೇಕು ಎಂಬ ಕೂಗು ಜೋರಾಗಿತ್ತು. ಆದಾಗ್ಯೂ ರೋಹಿತ್‌ಗೆ ಸಿಡ್ನಿಯಲ್ಲಿ ಕೊನೆಯ ಟೆಸ್ಟ್ ಆಡಲು ಅವಕಾಶ ನೀಡಬೇಕು ಎಂಬುದು ಬಿಸಿಸಿಐನ ಅಭಿಪ್ರಾಯವಾಗಿತ್ತು. ಆದರೆ ಮುಖ್ಯ ಕೋಚ್ ಗಂಭೀರ್ ಯಾರ ಮಾತಿಗೂ ಸೊಪ್ಪು ಹಾಕಿಲ್ಲ ಎಂದು ಪಿಟಿಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಗೌತಮ್ ಗಂಭೀರ್ ಬಿಸಿಸಿಐನ ಹಿರಿಯ ಮತ್ತು ಪ್ರಭಾವಿ ಅಧಿಕಾರಿಯ ಮಾತನ್ನೂ ಕೇಳಲಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ವಾಸ್ತವವಾಗಿ ಬಿಸಿಸಿಐನ ಹಿರಿಯ ಹಾಗೂ ಪ್ರಭಾವಿ ಅಧಿಕಾರಿಯೊಬ್ಬರು ಸ್ವತಃ ಅವರೇ ಟೀಂ ಇಂಡಿಯಾದ ಮುಖ್ಯ ಕೋಚ್ ಜೊತೆ ಮಾತನಾಡಿ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ರೋಹಿತ್‌ಗೆ ಸಿಡ್ನಿಯಲ್ಲಿ ಕೊನೆಯ ಟೆಸ್ಟ್ ಆಡಲು ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಈ ಟೆಸ್ಟ್ ಪಂದ್ಯದ ನಂತರ ರೋಹಿತ್ ಟೆಸ್ಟ್‌ಗೆ ನಿವೃತ್ತಿ ಘೋಷಿಸುವುದಾಗಿಯೂ ಅವರು ಗಂಭೀರ್ ಬಳಿ ಹೇಳಿದ್ದಾರೆ. ಆದರೆ ಇದರ ಹೊರತಾಗಿಯೂ, ಗಂಭೀರ್ ತಮ್ಮ ನಿರ್ಧಾರವನ್ನು ಬದಲಿಸಿಲ್ಲ. ಹೀಗಾಗಿ ರೋಹಿತ್ ಅವರನ್ನು ಹೊರಗಿಡುವ ನಿರ್ಧಾರ ಕೈಗೊಳ್ಳಬೇಕಾಯಿತು ಎಂದು ವರದಿಯಾಗಿದೆ.
ಗಂಭೀರ್ ಬೇಡಿಕೆಯನ್ನು ತಿರಸ್ಕರಿಸಿದ್ದು ಏಕೆ?
ಪಿಟಿಐ ವರದಿಯ ಪ್ರಕಾರ, ಗೌತಮ್ ಗಂಭೀರ್ ಸಿಡ್ನಿ ಟೆಸ್ಟ್ ಅನ್ನು ಯಾವುದೇ ಬೆಲೆ ತೆತ್ತಾದರೂ ಗೆಲ್ಲುವ ಇರಾದೆಯಲ್ಲಿದ್ದಾರೆ. ಈ ಟೆಸ್ಟ್ ಗೆದ್ದರೆ ಟೀಂ ಇಂಡಿಯಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ರೇಸ್‌ನಲ್ಲಿ ಜೀವಂತವಾಗಿರಲಿದೆ. ಆದ್ದರಿಂದ, ಈ ಹಂತದಲ್ಲಿ ಗಂಭೀರ್ ತಂಡದ ಆಡುವ ಹನ್ನೊಂದರ ಬಳಗದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಹೀಗಾಗಿಯೇ ಕಳಪೆ ಫಾರ್ಮ್‌ನಿಂದ ಕಂಗೆಟ್ಟಿರುವ ರೋಹಿತ್‌ರನ್ನು ತಂಡದಿಂದ ಕೈಬಿಡಲು ಗಂಭೀರ್ ನಿರ್ಧಾರಿಸಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ರೋಹಿತ್ ಮತ್ತು ಗಂಭೀರ್ ನಡುವಿನ ಮನಸ್ತಾಪದ ಕಾವು ದಿನೇ ದಿನೇ ಹೆಚ್ಚಾಗುತ್ತಿದ್ದು, ಪ್ರಸ್ತುತ ಈ ಇಬ್ಬರೂ ಪರಸ್ಪರ ಮಾತನಾಡುತ್ತಿಲ್ಲ. ಕೊನೆಯ ಟೆಸ್ಟ್ನಿಂದ ಹೊರಗುಳಿಯುವ ನಿರ್ಧಾರವನ್ನು ರೋಹಿತ್, ಜಸ್ಪ್ರೀತ್ ಬುಮ್ರಾ ಮತ್ತು ಅಗರ್ಕರ್ ಮೂಲಕ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ, ಅಭ್ಯಾಸದ ವೇಳೆ ಗಂಭೀರ್ ಮತ್ತು ರೋಹಿತ್ ನಡುವೆ ಯಾವುದೇ ಮಾತುಕತೆ ನಡೆದಿಲ್ಲ ಎಂತಲೂ ಹೇಳಲಾಗುತ್ತಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:23 am, Fri, 3 January 25