IND vs AUS: ಸಿಡ್ನಿ ಟೆಸ್ಟ್ಗೆ ಮಳೆಯಾತಂಕ? ಪಿಚ್ ಯಾರಿಗೆ ಹೆಚ್ಚು ಸಹಕಾರಿ?
India vs Australia 5th Test: ಸಿಡ್ನಿಯಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಡೆಯಲ್ಲಿದೆ. ಇನ್ನು ಈ ಪಿಚ್ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳಿಗೆ ಸಮನಾಗಿ ನೆರವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಹವಾಮಾನ ವರದಿಯ ಪ್ರಕಾರ, ಮೊದಲ ನಾಲ್ಕು ದಿನಗಳಲ್ಲಿ ಮಳೆಯ ಸಾಧ್ಯತೆ ಕಡಿಮೆ ಇದ್ದರೆ, ಕೊನೆಯ ದಿನ ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಐದನೇ ಟೆಸ್ಟ್ ಪಂದ್ಯ ನಾಳೆಯಿಂದ ಅಂದರೆ ಜನವರಿ 3 ರಿಂದ ಜನವರಿ 7 ರವರೆಗೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಸದ್ಯ ಆಸ್ಟ್ರೇಲಿಯಾ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಹೀಗಾಗಿ ಸರಣಿಯಲ್ಲಿ ಸಮಬಲ ಸಾಧಿಸಲು ಮತ್ತು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ತನ್ನಲ್ಲೇ ಉಳಿಸಿಕೊಳ್ಳಲು ಭಾರತ ತಂಡ ಸಿಡ್ನಿಯಲ್ಲಿ ಯಾವುದೇ ಬೆಲೆ ತೆತ್ತಾದರೂ ಗೆಲ್ಲಲೇಬೇಕಾಗಿದೆ. ಆದರೆ ಅದಕ್ಕೂ ಮುನ್ನ ಸಿಡ್ನಿ ಪಿಚ್ ಯಾರಿಗೆ ಹೆಚ್ಚು ಸಹಕಾರಿ? ಇಲ್ಲಿನ ಐದು ದಿನಗಳ ಹವಾಮಾನ ಹೇಗಿರಲಿದೆ? ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ ಎಂಬುದರ ವಿವರ ಇಲ್ಲಿದೆ.
ಪಂದ್ಯದ ಪಿಚ್ ವರದಿ
ಆಸ್ಟ್ರೇಲಿಯಾದ ಇತರ ಪಿಚ್‌ಗಳಂತೆ ಈ ಮೈದಾನದ ಪಿಚ್ ಕೂಡ ಬೌಲರ್‌ಗಳು ಹಾಗೂ ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ನೆರವಾಗಲಿದೆ. ಆರಂಭದಲ್ಲಿ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ನರೆವಾದರೆ ದಿನಗಳೆದಂತೆ ಸ್ಪಿನ್ನರ್‌ಗಳು ಕೂಡ ಈ ಪಿಚ್‌ನಲ್ಲಿ ಮೇಲುಗೈ ಸಾಧಿಸಬಹುದಾಗಿದೆ. ಈ ವಿಕೆಟ್‌ನಲ್ಲಿ ಸ್ಪಿನ್ನರ್‌ಗಳ ಪ್ರದರ್ಶನ ಅಮೋಘವಾಗಿರುವ ಕಾರಣ ನಾಥನ್ ಲಿಯಾನ್ ಇಲ್ಲಿ ಟೀಂ ಇಂಡಿಯಾಗೆ ದೊಡ್ಡ ಸಮಸ್ಯೆಯಾಗಬಹುದು. ಇನ್ನು ಈ ಮೈದಾನದಲ್ಲಿ ಭಾರತದ ದಾಖಲೆಯ ಬಗ್ಗೆ ಹೇಳುವುದಾದರೆ.. 2004 ರಲ್ಲಿ ನಡೆದಿದ್ದ ಪಂದ್ಯದಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ವಿರುದ್ಧ 7 ವಿಕೆಟ್ಗೆ 705 ರನ್ ಗಳಿಸುವ ಮೂಲಕ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಇದು ಈ ಮೈದಾನದಲ್ಲಿ ಭಾರತದ ಹೆಸರಿನಲ್ಲಿ ದಾಖಲಾಗಿರುವ ಅತ್ಯಧಿಕ ಸ್ಕೋರ್ ಆಗಿದೆ. ಹೀಗಾಗಿ ನಾಳಿನ ಪಂದ್ಯದಲ್ಲೂ ಟೀಂ ಇಂಡಿಯಾದಿಂದ ಅದೇ ಪ್ರದರ್ಶನ ಹೊರಬರಲಿ ಎಂಬುದು ಅಭಿಮಾನಿಗಳ ಆಶಯವಾಗಿದೆ.
ಹವಾಮಾನ ಮುನ್ಸೂಚನೆ
ಹವಾಮಾನ ವರದಿಯ ಪ್ರಕಾರ ಸಿಡ್ನಿಯಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ. ಅಂದರೆ ಅಭಿಮಾನಿಗಳು ಯಾವುದೇ ಆತಂಕವಿಲ್ಲದೆ ಪಂದ್ಯವನ್ನು ವೀಕ್ಷಿಸಬಹುದಾಗಿದೆ. ಆದರೆ, ಪಂದ್ಯದ ಕೊನೆಯ ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಅಂದರೆ ಮಳೆಯಿಂದಾಗಿ ಐದನೇ ದಿನದಾಟಕ್ಕೆ ಅಡ್ಡಿಯಾಗಬಹುದು. ಉಳಿದಂತೆ ಪಂದ್ಯದ ಮೊದಲ ದಿನ ಶೇ.11ರಷ್ಟು ಮಳೆಯಾಗುವ ಸಾಧ್ಯತೆ ಇದ್ದರೆ, ಎರಡನೇ ದಿನ ಶೇ.3ರಷ್ಟು, ಮೂರನೇ ದಿನ ಕೂಡ ಶೇ.3ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಹಾಗೆಯೇ ನಾಲ್ಕನೇ ದಿನ ಶೇ.7ರಷ್ಟು ಮಳೆಯಾಗುವ ಸಾಧ್ಯತೆ ಇದ್ದರೆ, ಪಂದ್ಯದ ಕೊನೆಯ ದಿನ ಶೇ.80ರಷ್ಟು ಮಳೆಯಾಗುವ ಸಾಧ್ಯತೆ ಇದೆ.
ಮುಖಾಮುಖಿ ವರದಿ
ಈ ಎರಡು ತಂಡಗಳ ನಡುವೆ ಇದುವರೆಗೆ 111 ಟೆಸ್ಟ್ ಪಂದ್ಯಗಳು ನಡೆದಿದ್ದು, ಇದರಲ್ಲಿ ಆಸ್ಟ್ರೇಲಿಯಾ ತಂಡ 47 ಪಂದ್ಯಗಳನ್ನು ಗೆದ್ದಿದ್ದರೆ, ಟೀಂ ಇಂಡಿಯಾ 33 ಪಂದ್ಯಗಳನ್ನು ಗೆದ್ದುಕೊಂಡಿದೆ. ಉಳಿದಂತೆ 30 ಪಂದ್ಯಗಳು ಡ್ರಾ ಆಗಿದ್ದರೆ 1 ಪಂದ್ಯ ಟೈ ಆಗಿದೆ. ಇನ್ನು ಆಸ್ಟ್ರೇಲಿಯಾ ನೆಲದಲ್ಲಿ ಈ ಎರಡು ತಂಡಗಳ ನಡುವೆ 56 ಟೆಸ್ಟ್ ಪಂದ್ಯಗಳು ನಡೆದಿವೆ. ಇದರಲ್ಲಿ ಆತಿಥೇಯ ಆಸ್ಟ್ರೇಲಿಯಾ 32 ಬಾರಿ ಟೀಮ್ ಇಂಡಿಯಾವನ್ನು ಸೋಲಿಸಿದ್ದರೆ, ಭಾರತ ಇಲ್ಲಿ ಕೇವಲ 10 ಪಂದ್ಯಗಳನ್ನು ಮಾತ್ರ ಗೆಲ್ಲಲು ಶಕ್ತವಾಗಿದೆ. ಉಳಿದಂತೆ 14 ಪಂದ್ಯಗಳು ಡ್ರಾಗೊಂಡಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ