IND vs AUS: ಮತ್ತೆ ಸ್ಪಿನ್ನರ್ ಎದುರು ಮಂಕಾದ ಕೊಹ್ಲಿ; ಮುಂದುವರೆದ ವಿರಾಟ್ ಟೆಸ್ಟ್ ಶತಕದ ಬರ

| Updated By: ಪೃಥ್ವಿಶಂಕರ

Updated on: Feb 10, 2023 | 4:14 PM

Virat Kohli: ವಿರಾಟ್ ಮುಖದಲ್ಲಿ ನಗು ಇತ್ತಾದರೂ, ಮೈನರ್ ಎಸೆತದಲ್ಲಿ ವಿಕೆಟ್ ನೀಡುವ ಮೂಲಕ ದೊಡ್ಡ ಇನಿಂಗ್ಸ್ ಆಡುವ ಅವಕಾಶ ಕಳೆದುಕೊಂಡ ಹತಾಶೆ ಮಾತ್ರ ವಿರಾಟ್ ಮುಖದಲ್ಲಿ ಎದ್ದು ಕಾಣುತ್ತಿತ್ತು.

IND vs AUS: ಮತ್ತೆ ಸ್ಪಿನ್ನರ್ ಎದುರು ಮಂಕಾದ ಕೊಹ್ಲಿ; ಮುಂದುವರೆದ ವಿರಾಟ್ ಟೆಸ್ಟ್ ಶತಕದ ಬರ
ವಿರಾಟ್ ಕೊಹ್ಲಿ ವಿಕೆಟ್
Follow us on

ಟೀಂ ಇಂಡಿಯಾದ (Team India) ಅನುಭವಿ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಮತ್ತೊಮ್ಮೆ ಸ್ಪಿನ್ನರ್‌ಗೆ ಬಲಿಯಾಗಿದ್ದಾರೆ. ಒಂದೆಡೆ ಹಾಲಿ ನಾಯಕ ರೋಹಿತ್ ಶರ್ಮಾ (Rohit Sharma) ಅಬ್ಬರದ ಶತಕ ಸಿಡಿಸಿದ ನಾಗ್ಪುರ ಪಿಚ್​ನಲ್ಲಿ, ಮಾಜಿ ನಾಯಕ ವಿರಾಟ್ ಬ್ಯಾಟ್ ಮಾತ್ರ ಕೆಲಸ ಮಾಡಲಿಲ್ಲ. ನಾಗ್ಪುರ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಕೇವಲ 12 ರನ್ ಗಳಿಸಿ ಔಟಾದರು. ಅಚ್ಚರಿಯ ವಿಷಯವೆಂದರೆ ವಿರಾಟ್ ಕೊಹ್ಲಿ ಅತ್ಯಂತ ಸರಾಸರಿ ಎಸೆತಕ್ಕೆ ವಿಕೆಟ್ ಒಪ್ಪಿಸಿದರು. ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಆಸ್ಟ್ರೇಲಿಯಾದ ಆಫ್ ಸ್ಪಿನ್ನರ್ ಟಾಡ್ ಮರ್ಫಿ (Todd Murphy) ವಿರಾಟ್ ಕೊಹ್ಲಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಮರ್ಫಿ ಎಸೆದ ಆ ಚೆಂಡು ಲೆಗ್ ಸ್ಟಂಪ್‌ನ ಹೊರಗಿತ್ತು, ವಿರಾಟ್ ಅದನ್ನು ಫ್ಲಿಕ್ ಮಾಡಲು ಪ್ರಯತ್ನಿಸಿದರು. ಆದರೆ ದುರದೃಷ್ಟವಶಾತ್ ಚೆಂಡು ಅವರ ಬ್ಯಾಟ್‌ನ ಅಂಚನ್ನು ತಾಗಿ, ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಕೈ ಸೇರಿತು.

ವಿಕೆಟ್ ಒಪ್ಪಿಸದ ಎಸೆತಕ್ಕೆ ವಿಕೆಟ್ ನೀಡಿದಕ್ಕೆ ಅತ್ಯಂತ ಬೇಸರ ವ್ಯಕ್ತಪಡಿಸಿದ ವಿರಾಟ್ ಕೊಹ್ಲಿ, ಅಚ್ಚರಿಯಿಂದಲೇ ಮೈದಾನದಿಂದ ಹೊರ ನಡೆದರು. ಈ ವೇಳೆ ವಿರಾಟ್ ಮುಖದಲ್ಲಿ ನಗು ಇತ್ತಾದರೂ, ಮೈನರ್ ಎಸೆತದಲ್ಲಿ ವಿಕೆಟ್ ನೀಡುವ ಮೂಲಕ ದೊಡ್ಡ ಇನಿಂಗ್ಸ್ ಆಡುವ ಅವಕಾಶ ಕಳೆದುಕೊಂಡ ಹತಾಶೆ ಮಾತ್ರ ವಿರಾಟ್ ಮುಖದಲ್ಲಿ ಎದ್ದು ಕಾಣುತ್ತಿತ್ತು.

ಸ್ಪಿನ್ನರ್‌ಗಳ ವಿರುದ್ಧ ವಿರಾಟ್ ಸೈಲೆಂಟ್?

ಸಾಮಾನ್ಯವಾಗಿ ವೇಗಿಗಳನ್ನು ಸಮರ್ಥವಾಗಿ ಎದುರಿಸುವ ವಿರಾಟ್ ಕೊಹ್ಲಿ ಸ್ಪಿನ್ನರ್‌ಗಳ ವಿರುದ್ಧ ಕೊಂಚ ತಿಣುಕಾಡಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಅಷ್ಟಕ್ಕೂ ವಿರಾಟ್ ಕೊಹ್ಲಿ 2021 ರಿಂದ ಏಷ್ಯಾದ ನೆಲದಲ್ಲಿ 16 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 12 ಬಾರಿ ಸ್ಪಿನ್ನರ್‌ಗಳಿಗೆ ವಿಕೆಟ್ ನೀಡಿದ್ದಾರೆ. ಅದರಲ್ಲೂ ಆಫ್ ಸ್ಪಿನ್ನರ್‌ಗಳಿಗೆ 6 ಬಾರಿ ವಿಕೆಟ್ ಒಪ್ಪಿಸಿದ್ದಾರೆ. ಹಾಗೆಯೇ ಎಡಗೈ ಸ್ಪಿನ್ನರ್‌ಗಳ ವಿರುದ್ಧವೂ ಕೊಹ್ಲಿ ಆಟ ನಡೆಯುತ್ತಿಲ್ಲ. ಸ್ಪಿನ್ನರ್‌ಗಳ ವಿರುದ್ಧ ಸತತ ಔಟಾಗಿರುವುದು ವಿರಾಟ್ ಬ್ಯಾಟಿಂಗ್ ತಂತ್ರದಲ್ಲಿನ ದೋಷವನ್ನು ಎತ್ತಿ ತೋರಿಸುತ್ತಿದ್ದು, ನಾಗ್ಪುರ ಟೆಸ್ಟ್‌ನಲ್ಲಿ ಕಾಮೆಂಟರಿ ಮಾಡುತ್ತಿರುವ ಭಾರತದ ಮಾಜಿ ಕ್ರಿಕೆಟಿಗರು ಕೂಡ ಇದೇ ಮಾತನ್ನು ಹೇಳಿದ್ದಾರೆ. ವಿರಾಟ್ ಕೊಹ್ಲಿ ನಿರಂತರವಾಗಿ ಸ್ಪಿನ್ನರ್‌ಗಳನ್ನು ಬ್ಯಾಕ್‌ಫೂಟ್‌ನಲ್ಲಿ ಆಡಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ವಿಕೆಟ್ ಕೈ ಚೆಲ್ಲುತ್ತಿದ್ದಾರೆ. ಒಂದು ವೇಳೆ ವಿರಾಟ್ ಚೆಂಡನ್ನು ನೇರವಾಗಿ ಆಡಲು ಪ್ರಯತ್ನಿಸಿದರೆ, ಅವರು ಸ್ಪಿನ್ನರ್‌ಗಳಿಗೆ ವಿಕೆಟ್ ನೀಡುವ ಸಾಧ್ಯತೆಗಳು ಕಡಿಮೆಯಾಗುತ್ತವೆ ಎಂದಿದ್ದಾರೆ.

ಮುಂದುವರೆದ ವಿರಾಟ್ ಟೆಸ್ಟ್ ಶತಕದ ಬರ

ಅಂದಹಾಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿಯ ಕಳಪೆ ಪ್ರದರ್ಶನ ಮುಂದುವರೆದಿದೆ. ಕೊಹ್ಲಿ ಕಳೆದ ಎರಡು ವರ್ಷಗಳಲ್ಲಿ ಕೇವಲ 26ರ ಸರಾಸರಿಯಲ್ಲಿ 17 ಟೆಸ್ಟ್‌ಗಳಲ್ಲಿ ಕೇವಲ 730 ರನ್ ಗಳಿಸಲಷ್ಟೇ ಶಕ್ತರಾಗಿದ್ದಾರೆ. ಈ ವೇಳೆ ವಿರಾಟ್ ಬ್ಯಾಟ್‌ನಿಂದ ಒಂದೇ ಒಂದು ಶತಕ ಸಿಡಿದಿಲ್ಲ. ಅಲ್ಲದೆ ಕಳೆದ ಎರಡು ವರ್ಷಗಳಲ್ಲಿ ವಿರಾಟ್ ಅತ್ಯಂತ ಕೆಟ್ಟ ಹೊಡೆತಗಳನ್ನು ಆಡುವ ಮೂಲಕ ತಮ್ಮ ವಿಕೆಟ್ಗಳನ್ನು ಕಳೆದುಕೊಂಡಿದ್ದಾರೆ. ವಿರಾಟ್ ಏಕದಿನ ಮತ್ತು ಟಿ20 ಪಂದ್ಯಗಳಲ್ಲಿ ಮಾಡಿದಂತೆಯೇ ಟೆಸ್ಟ್‌ನಲ್ಲೂ ಶೀಘ್ರದಲ್ಲೇ ರನ್ ಮಳೆ ಸುರಿಸುತ್ತಾರೆ ಎಂದು ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:12 pm, Fri, 10 February 23