ಚೆನ್ನೈ ಟೆಸ್ಟ್‌ನಲ್ಲಿ ಬಾಂಗ್ಲಾದೇಶವನ್ನು 280 ರನ್‌ಗಳಿಂದ ಸೋಲಿಸಿದ ಟೀಂ ಇಂಡಿಯಾ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದು ಬಾಂಗ್ಲಾದೇಶ ವಿರುದ್ಧ ರನ್‌ಗಳ ದೃಷ್ಟಿಯಿಂದ ಆತಿಥೇಯ ಟೀಂ ಇಂಡಿಯಾಕ್ಕೆ ಅತಿ ದೊಡ್ಡ ಗೆಲುವಾಗಿದೆ. ಗೆಲುವಿಗೆ 515 ರನ್‌ಗಳ ಗುರಿ ಬೆನ್ನಟ್ಟಿದ ಇಡೀ ಬಾಂಗ್ಲಾದೇಶ ತಂಡ ಕೇವಲ 234 ರನ್‌ಗಳಿಗೆ ಆಲೌಟ್ ಆಯಿತು. ಭಾರತದ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ಅಶ್ವಿನ್ ಗರಿಷ್ಠ 6 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ 3 ಮತ್ತು ಜಸ್ಪ್ರೀತ್ ಬುಮ್ರಾ 1 ವಿಕೆಟ್ ಪಡೆದರು. ಇನ್ನು ಈ ಪಂದ್ಯದ ಗೆಲುವಿನ ನಂತರ ಮಾತನಾಡಿದ ನಾಯಕ ರೋಹಿತ್ ಶರ್ಮಾ ಗೆಲುವಿನ ಕ್ರೆಡಿಟ್ ಅನ್ನು ಬಹಳ ದಿನಗಳ ಬಳಿಕ ಟೆಸ್ಟ್ ಕ್ರಿಕೆಟ್ ಆಡುತ್ತಿರುವ ರಿಷಬ್ ಪಂತ್ಗೆ ನೀಡಿದರು.
ಗೆಲುವಿನ ಬಳಿಕ ಮಾತನಾಡಿದ ರೋಹಿತ್ ಶರ್ಮಾ, ‘ಮುಂದೆ ಏನಾಗಲಿದೆ ಎಂಬುದನ್ನು ಪರಿಗಣಿಸಿದರೆ ಇದೊಂದು ದೊಡ್ಡ ಗೆಲುವು. ಬಹಳ ದಿನಗಳ ನಂತರ ನಾವು ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದೇವೆ. ಆದರೆ, ಕ್ರಿಕೆಟಿಗರು ಎಂದಿಗೂ ಕ್ರಿಕೆಟ್‌ನಿಂದ ಹೊರಗುಳಿಯುವುದಿಲ್ಲ. ನಾವು ಒಂದು ವಾರದ ಹಿಂದೆ ಇಲ್ಲಿಗೆ ಬಂದಿದ್ದೇವು ಮತ್ತು ಇದೇ ರೀತಿಯ ಫಲಿತಾಂಶವನ್ನು ಬಯಸಿದ್ದೇವು. ರಿಷಭ್ ಪಂತ್ ಕಠಿಣ ಸಮಯಗಳನ್ನು ದಾಟಿ ಶತಕ ಬಾರಿಸಿದ್ದು ನೋಡಲೇಬೇಕಾದ ಸಂಗತಿ. ಕ್ರೆಡಿಟ್ ಅವರಿಗೆ ಸಲ್ಲುತ್ತದೆ. ಎಂತಹ ಪರಿಸ್ಥಿತಿಯಿದ್ದರೂ ಬಲಿಷ್ಠ ಬೌಲಿಂಗ್ ಸುತ್ತ ತಂಡವನ್ನು ಕಟ್ಟಲು ನೋಡುತ್ತಿದ್ದೆವು. ವರ್ಷಗಳಲ್ಲಿ, ನಾವು ಸಾಕಷ್ಟು ಕಡೆ ಕ್ರಿಕೆಟ್ ಆಡಿದ್ದೇವೆ. ಅಲ್ಲೆಲ್ಲ ನಾವು ಬೌಲಿಂಗ್ನಲ್ಲೂ ಯಶಸ್ವಿಯಾಗಿದ್ದೇವೆ. ಇದರ ಶ್ರೇಯಸ್ಸು ಆಟಗಾರರಿಗೆ ಸಲ್ಲಬೇಕು ಎಂದರು.
ಸೋಲಿನ ಹೊರತಾಗಿಯೂ ಆಟಗಾರರ ಪ್ರದರ್ಶನ ಮೆಚ್ಚಿದ ಬಾಂಗ್ಲಾದೇಶ ತಂಡದ ನಾಯಕ ನಜ್ಮುಲ್ ಹೊಸೈನ್ ಶಾಂಟೊ ಅವರು ತಂಡದ ಬೌಲರ್‌ಗಳಾದ ಮೆಹಂದಿ ಹಸನ್, ತಸ್ಕಿನ್ ಅಹ್ಮದ್ ಮತ್ತು ನಹೀದ್ ರಾಣಾ ಅವರನ್ನು ಹೊಗಳಿದರು. ಈ ಬೌಲರ್‌ಗಳು ಬೌಲಿಂಗ್ ಮಾಡಿದ ರೀತಿ ತುಂಬಾ ಪರಿಣಾಮಕಾರಿಯಾಗಿತ್ತು. ಭಾರತ ಉತ್ತಮವಾಗಿ ಬ್ಯಾಟಿಂಗ್ ಮಾಡಿತು. ನಾವು ಕಳೆದ ಕೆಲವು ಸರಣಿಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ್ದೇವೆ, ಆದರೆ ನಾವು ಅದನ್ನು ಭವಿಷ್ಯದಲ್ಲಿಯೂ ಮುಂದುವರಿಸಬೇಕಾಗಿದೆ. ಒಬ್ಬ ಬ್ಯಾಟ್ಸ್‌ಮನ್ ಆಗಿ, ನಾನು ಯಾವಾಗಲೂ ಕೊಡುಗೆ ನೀಡಲು ಪ್ರಯತ್ನಿಸುತ್ತೇನೆ. ನನ್ನ ಬ್ಯಾಟಿಂಗ್ ಅನ್ನು ನಾನು ಆನಂದಿಸುತ್ತೇನೆ. ನಾವು ಫಲಿತಾಂಶದ ಬಗ್ಗೆ ಯೋಚಿಸದೆ ಸಾಧ್ಯವಾದಷ್ಟು ಕಾಲ ಬ್ಯಾಟಿಂಗ್ ಮಾಡಲು ಪ್ರಯತ್ನಿಸುತ್ತೇವೆ. ಅದರಲ್ಲೂ ಬೌಲರ್‌ಗಳು ಅದ್ಭುತ ಆಟ ಪ್ರದರ್ಶಿಸಿದ್ದಾರೆ. ಮುಂದಿನ ಪಂದ್ಯದಲ್ಲೂ ಬ್ಯಾಟ್ಸ್‌ಮನ್‌ಗಳು ಕೊಡುಗೆ ನೀಡುತ್ತಾರೆ ಎಂಬ ಸಂಪೂರ್ಣ ಭರವಸೆ ನನಗಿದೆ ಎಂದಿದ್ದಾರೆ.
ಟಾಸ್ ಸೋತು ಮೊದಲು ಬ್ಯಅಟಿಂಗ್ ಮಾಡಿದ ಭಾರತ ಮೊದಲ ಇನಿಂಗ್ಸ್‌ನಲ್ಲಿ 376 ರನ್ ಗಳಿಸಿತ್ತು. ಈ ವೇಳೆ ಅಶ್ವಿನ್ 113 ರನ್ ಮತ್ತು ರವೀಂದ್ರ ಜಡೇಜಾ 86 ರನ್‌ಗಳ ಅಮೋಘ ಇನ್ನಿಂಗ್ಸ್ ಆಡಿದರು. 144 ರನ್‌ಗಳಾಗುವಷ್ಟರಲ್ಲಿ 6 ವಿಕೆಟ್‌ಗಳು ಪತನಗೊಂಡ ನಂತರ ಇಬ್ಬರೂ 199 ರನ್‌ಗಳ ಜೊತೆಯಾಟ ನಡೆಸಿದರು. ಇದಕ್ಕೆ ಉತ್ತರವಾಗಿ ಬಾಂಗ್ಲಾದೇಶ ತಂಡ ಕೇವಲ 149 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಅವಧಿಯಲ್ಲಿ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆದರೆ, ಜಡೇಜಾ, ಆಕಾಶದೀಪ್ ಮತ್ತು ಸಿರಾಜ್ ತಲಾ 2 ವಿಕೆಟ್ ಪಡೆದರು. ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 227 ರನ್‌ಗಳ ಮುನ್ನಡೆ ಸಾಧಿಸಿತ್ತು. ಇದಾದ ಬಳಿಕ ಎರಡನೇ ಇನಿಂಗ್ಸ್‌ನಲ್ಲಿ ರಿಷಬ್ ಪಂತ್ ಅವರ 109 ರನ್ ಮತ್ತು ಶುಭ್ಮನ್ ಗಿಲ್ ಅವರ ಅಜೇಯ 119 ರನ್‌ಗಳ ನೆರವಿನಿಂದ ಭಾರತ 4 ವಿಕೆಟ್‌ಗೆ 287 ರನ್ ಗಳಿಸಿ ಒಟ್ಟು 514 ರನ್ ಮುನ್ನಡೆ ಸಾಧಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ