ಕಾನ್ಪುರದಲ್ಲಿ ನಡೆಯುತ್ತಿರುವ ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ 233 ರನ್ ಬಾರಿಸಿ ಬಾಂಗ್ಲಾದೇಶ್ ತಂಡ ಆಲೌಟ್ ಆಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಪ್ರಥಮ ಇನಿಂಗ್ಸ್ ಆರಂಭಿಸಿದ ಬಾಂಗ್ಲಾದೇಶ್ ತಂಡವು ಮೊದಲ ದಿನದಾಟದಲ್ಲಿ 35 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 107 ರನ್ ಕಲೆಹಾಕಿತ್ತು. ಈ ವೇಳೆ ಮಂದ ಬೆಳಕಿನ ಕಾರಣ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು.
ಇನ್ನು 2ನೇ ಮತ್ತು 3ನೇ ದಿನದಾಟಗಳು ಮಳೆಯ ಕಾರಣ ರದ್ದಾಗಿತ್ತು. ಅದರಂತೆ 4ನೇ ದಿನದಾಟದೊಂದಿಗೆ ಮುಂದುವರೆದ ಪಂದ್ಯದಲ್ಲಿ ಟೀಮ್ ಇಂಡಿಯಾ ವೇಗಿಗಳು ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದರು. ಇದಾಗ್ಯೂ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಮೊಮಿನುಲ್ ಹಕ್ ಭಾರತೀಯ ಬೌಲರ್ಗಳ ವಿರುದ್ಧ ಕೆಚ್ಚೆದೆಯ ಬ್ಯಾಟಿಂಗ್ ಮಾಡಿದರು.
ಆದರೆ ಇತರೆ ಬ್ಯಾಟರ್ಗಳಿಂದ ಹಕ್ಗೆ ಉತ್ತಮ ಸಾಥ್ ಸಿಕ್ಕಿರಲಿಲ್ಲ. ಇದಾಗ್ಯೂ 194 ಎಸೆತಗಳನ್ನು ಎದುರಿಸಿದ ಮೊಮಿನುಲ್ ಹಕ್ 17 ಫೋರ್ ಹಾಗೂ 1 ಸಿಕ್ಸ್ನೊಂದಿಗೆ ಅಜೇಯ 107 ರನ್ ಬಾರಿಸಿದರು. ಇನ್ನೊಂದೆಡೆ ಬಾಂಗ್ಲಾ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದ ಪರಿಣಾಮ ಕೇವಲ 233 ರನ್ಗಳಿಗೆ ಆಲೌಟ್ ಆಯಿತು.
ಟೀಮ್ ಇಂಡಿಯಾ ಪರ ಜಸ್ಪ್ರೀತ್ ಬುಮ್ರಾ 3 ವಿಕೆಟ್ ಪಡೆದರೆ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು. ಇದೀಗ ಪ್ರಥಮ ಇನಿಂಗ್ಸ್ ಶುರು ಮಾಡಿರುವ ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಅದರಂತೆ ಮೊದಲ 2 ಓವರ್ಗಳಲ್ಲಿ ಟೀಮ್ ಇಂಡಿಯಾ ಬ್ಯಾಟರ್ಗಳು 29 ರನ್ ಬಾರಿಸಿದ್ದಾರೆ.
ಭಾರತ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಆಕಾಶ್ ದೀಪ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.
ಇದನ್ನೂ ಓದಿ: IPL 2025 ರಲ್ಲಿ ಎಷ್ಟು ಪಂದ್ಯಗಳನ್ನಾಡಲಾಗುತ್ತದೆ? ಇಲ್ಲಿದೆ ಮಾಹಿತಿ
ಬಾಂಗ್ಲಾದೇಶ್ ಪ್ಲೇಯಿಂಗ್ 11: ಶಾದ್ಮಾನ್ ಇಸ್ಲಾಂ, ಜಾಕಿರ್ ಹಸನ್, ನಜ್ಮುಲ್ ಹೊಸೈನ್ ಶಾಂತೊ (ನಾಯಕ), ಮೊಮಿನುಲ್ ಹಕ್, ಮುಶ್ಫಿಕರ್ ರಹೀಮ್, ಶಕೀಬ್ ಅಲ್ ಹಸನ್, ಲಿಟನ್ ದಾಸ್ (ವಿಕೆಟ್ ಕೀಪರ್), ಮೆಹದಿ ಹಸನ್ ಮಿರಾಝ್, ತೈಜುಲ್ ಇಸ್ಲಾಂ, ಹಸನ್ ಮಹಮೂದ್, ಖಾಲಿದ್ ಅಹ್ಮದ್.
Published On - 1:28 pm, Mon, 30 September 24