T20 World Cup 2024: ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದ ಟೀಮ್ ಇಂಡಿಯಾ
Women’s T20 World Cup 2024: ಬಾಂಗ್ಲಾದೇಶದಲ್ಲಿ ನಡೆಯಬೇಕಿದ್ದ ಮಹಿಳಾ ಟಿ20 ವಿಶ್ವಕಪ್ ಅನ್ನು ಯುಎಇ ದೇಶಕ್ಕೆ ಸ್ಥಳಾಂತರಿಸಲಾಗಿದೆ. ಅಕ್ಟೋಬರ್ 3 ರಿಂದ ಆರಂಭವಾಗಲಿರುವ 10 ತಂಡಗಳ ನಡುವಣ ವುಮೆನ್ಸ್ ಟಿ20 ವರ್ಲ್ಡ್ ಕಪ್ ಟೂರ್ನಿಯು ಅಕ್ಟೋಬರ್ 20 ರವರೆಗೆ ನಡೆಯಲಿದೆ.
ಮಹಿಳಾ ಟಿ20 ವಿಶ್ವಕಪ್ನ ಅಭ್ಯಾಸ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ ತಂಡವು ಭರ್ಜರಿ ಜಯ ಸಾಧಿಸಿದೆ. ದುಬೈನ ಐಸಿಸಿ ಅಕಾಡೆಮಿ ಗ್ರೌಂಡ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಜಯಿಸಿದ ವೆಸ್ಟ್ ಇಂಡೀಸ್ ತಂಡವು ಟೀಮ್ ಇಂಡಿಯಾವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಭಾರತ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ.
ಆರಂಭಿಕರಾದ ಶಫಾಲಿ ವರ್ಮಾ (7) ಹಾಗೂ ಸ್ಮೃತಿ ಮಂಧಾನ (14) ಬೇಗನೆ ವಿಕೆಟ್ ಒಪ್ಪಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹರ್ಮನ್‌ಪ್ರೀತ್ ಕೌರ್ ಗಳಿಸಿದ್ದು ಕೇವಲ ಒಂದು ರನ್ ಮಾತ್ರ.
ಇತ್ತ ಆರಂಭಿಕ ಆಘಾತಕ್ಕೆ ಒಳಗಾದ ಟೀಮ್ ಇಂಡಿಯಾಗೆ ಜೆಮಿಮಾ ರೊಡ್ರಿಗಸ್ ಹಾಗೂ ಯಾಸ್ತಿಕಾ ಭಾಟಿಯಾ ಆಸೆಯಾಗಿ ನಿಂತರು. ಎಚ್ಚರಿಕೆಯೊಂದಿಗೆ ಇನಿಂಗ್ಸ್ ಕಟ್ಟಿದ ಈ ಜೋಡಿಯು 4ನೇ ವಿಕೆಟ್ಗೆ ಅರ್ಧಶತಕದ ಜೊತೆಯಾಟವಾಡಿದರು.
ಅರ್ಧಶತಕದ ಜೊತೆಯಾಟದ ಬೆನ್ನಲ್ಲೇ ಯಾಸ್ತಿಕಾ ಭಾಟಿಯಾ (24) ಔಟಾದರು. ಮತ್ತೊಂದೆಡೆ ಉತ್ತಮ ಬ್ಯಾಟಿಂಗ್ ಮುಂದುವರೆಸಿದ ಜೆಮಿಮಾ ರೊಡ್ರಿಗಸ್ 40 ಎಸೆತಗಳಲ್ಲಿ 5 ಫೋರ್ಗಳೊಂದಿಗೆ 52 ರನ್ ಬಾರಿಸಿದರು. ಈ ಮೂಲಕ ಟೀಮ್ ಇಂಡಿಯಾ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 141 ರನ್ ಕಲೆಹಾಕಿತು.
142 ರನ್ಗಳ ಸುಲಭ ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಟೀಮ್ ಇಂಡಿಯಾ ವೇಗಿಗಳು ಯಶಸ್ವಿಯಾದರು. ಕಿಯಾನಾ ಜೋಸೆಫ್ (1) ವಿಕೆಟ್ ಕಬಳಿಸುವ ಮೂಲಕ ಪೂಜಾ ವಸ್ತ್ರಾಕರ್ ಭಾರತ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರೆ, ಹೇಲಿ ಮ್ಯಾಥ್ಯೂಸ್ (0) ರೇಣುಕಾ ಸಿಂಗ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.
ಇನ್ನು ವಿಕೆಟ್ ಕೀಪರ್ ಬ್ಯಾಟರ್ ಶೆಮೈನ್ ಕ್ಯಾಂಪ್ಬೆಲ್ಲೆ (20) ವಿಕೆಟ್ ಪಡೆಯುವಲ್ಲಿ ಆಶಾ ಸೋಭಾನಾ ಯಶಸ್ವಿಯಾದರು. ಇದರ ಬೆನ್ನಲ್ಲೇ ಚೇಡಿಯನ್ ನೇಷನ್ಗೆ (4) ಪೆವಿಲಿಯನ್ ಹಾದಿ ತೋರಿಸುವಲ್ಲಿ ಪೂಜಾ ಯಶಸ್ವಿಯಾದರು.
ಈ ಹಂತದಲ್ಲಿ ದಾಳಿಗಿಳಿದ ಸ್ಪಿನ್ನರ್ಗಳಾದ ದೀಪ್ತಿ ಶರ್ಮಾ ಹಾಗೂ ರಾಧಾ ಅತ್ಯುತ್ತಮ ಸ್ಪಿನ್ ಮೋಡಿ ಮಾಡಿದರು. ಒಂದೆಡೆ ದೀಪ್ತಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸಿದರೆ, ಮತ್ತೊಂದೆಡೆ ರಾಧಾ ಯಾದವ್ 1 ವಿಕೆಟ್ ಪಡೆದರು.
ಅದರಂತೆ ಭಾರತೀಯ ಬೌಲರ್ಗಳು 20 ಓವರ್ಗಳಲ್ಲಿ 8 ವಿಕೆಟ್ ಕಬಳಿಸಿ ವೆಸ್ಟ್ ಇಂಡೀಸ್ ತಂಡವನ್ನು 121 ರನ್ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಟೀಮ್ ಇಂಡಿಯಾ ಮೊದಲ ಅಭ್ಯಾಸ ಪಂದ್ಯದಲ್ಲಿ 20 ರನ್ಗಳ ಜಯ ಸಾಧಿಸಿದೆ.
ವೆಸ್ಟ್ ಇಂಡೀಸ್ ತಂಡ: ಹೇಲಿ ಮ್ಯಾಥ್ಯೂಸ್ (ನಾಯಕಿ), ಆಲಿಯಾ ಅಲೀನ್, ಶಾಮಿಲಿಯಾ ಕಾನೆಲ್, ಡಿಯಾಂಡ್ರಾ ಡಾಟಿನ್, ಶೆಮೈನ್ ಕ್ಯಾಂಪ್‌ಬೆಲ್ಲೆ (ಉಪನಾಯಕಿ/ವಿಕೆಟ್ ಕೀಪರ್), ಅಶ್ಮಿನಿ ಮುನಿಸಾರ್, ಅಫಿ ಫ್ಲೆಚರ್, ಸ್ಟಾಫನಿ ಟೇಲರ್, ಚಿನೆಲ್ಲೆ ಹೆನ್ರಿ, ಚೆಡಿಯನ್ ಜೋಸೆಫ್, ಚೀಡಿಯನ್ ನೇಷನ್ ಕರಿಷ್ಮಾ ರಾಮ್ಹರಾಕ್, ಮ್ಯಾಂಡಿ ಮಾಂಗ್ರು, ನೆರಿಸ್ಸಾ ಕ್ರಾಫ್ಟನ್.
ಇದನ್ನೂ ಓದಿ: T20 World Cup 2024: ಟೀಮ್ ಇಂಡಿಯಾ ಟಿ20 ವಿಶ್ವಕಪ್ ವೇಳಾಪಟ್ಟಿ
ಭಾರತ ತಂಡ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ರಿಚಾ ಘೋಷ್, ಯಾಸ್ತಿಕಾ ಭಾಟಿಯಾ, ಪೂಜಾ ವಸ್ತ್ರಾಕರ್, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ದಯಾಲನ್ ಹೇಮಲತಾ, ಆಶಾ ಸೋಭಾನಾ, ರಾಧಾ ಯದ್, ಶ್ರೇಯಾಂಕಾ ಪಾಟೀಲ್, ಸಜನಾ ಸಜೀವನ್.