ENG vs NZ: ಗೆಲ್ಲುವ ಪಂದ್ಯ ಕೈಚೆಲ್ಲಿದ ನ್ಯೂಜಿಲೆಂಡ್; ಪಾಕ್ ಸೆಮೀಸ್ ಆಸೆ ಜೀವಂತ
T20 World Cup 2026: ಇಂಗ್ಲೆಂಡ್ ತಂಡ ಸೂಪರ್ 8 ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಅಜೇಯವಾಗಿ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಕೊಲಂಬೊದಲ್ಲಿ ನಡೆದ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ಕೊನೆಯ ಓವರ್‌ಗಳಲ್ಲಿ ಹಿಡಿತ ಕಳೆದುಕೊಂಡಿತು. ನ್ಯೂಜಿಲೆಂಡ್‌ನ ಸೆಮಿಫೈನಲ್ ಕನಸು ಇನ್ನೂ ಜೀವಂತವಾಗಿದ್ದು, ಶ್ರೀಲಂಕಾ vs ಪಾಕಿಸ್ತಾನ ಪಂದ್ಯದ ಫಲಿತಾಂಶದ ಮೇಲೆ ಅವಲಂಬಿತವಾಗಿದೆ. ಶ್ರೀಲಂಕಾ ಗೆದ್ದರೆ ನ್ಯೂಜಿಲೆಂಡ್ ಸೆಮಿಫೈನಲ್ ಪ್ರವೇಶಿಸುವುದು ಖಚಿತ.

ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ (England vs New Zealand) ನಡುವಿನ ಸೂಪರ್ 8 ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಇಂಗ್ಲೆಂಡ್ ತಂಡ ಅಜೇಯ ತಂಡವಾಗಿ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದೆ. ಇತ್ತ 17ನೇ ಓವರ್ವರೆಗೂ ಪಂದ್ಯದಲ್ಲಿ ಹಿಡಿತ ಸಾಧಿಸಿದ್ದ ನ್ಯೂಜಿಲೆಂಡ್ ಕೊನೆಯ ಮೂರು ಓವರ್‌ಗಳಲ್ಲಿ ಹಳಿತಪ್ಪಿದರಿಂದ ಸೋಲಿಗೆ ಕೊರಳೊಡ್ಡಬೇಕಾಯಿತು. ಈ ಪಂದ್ಯದಲ್ಲಿನ ಸೋಲಿನ ಹೊರತಾಗಿಯೂ ನ್ಯೂಜಿಲೆಂಡ್ ತಂಡದ ಸೆಮಿಫೈನಲ್ ಕನಸು ಜೀವಂತವಾಗಿದ್ದು, ನಾಳೆ ನಡೆಯಲಿರುವ ಶ್ರೀಲಂಕಾ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಶ್ರೀಲಂಕಾ ಗೆದ್ದರೆ, ನ್ಯೂಜಿಲೆಂಡ್ ಸೆಮಿಫೈನಲ್ಗೇರಲಿದೆ. ಇತ್ತ ಪಾಕಿಸ್ತಾನ ದೊಡ್ಡ ಗೆಲುವು ದಾಖಲಿಸಿ ನೆಟ್ ರನ್ರೇಟ್ನಲ್ಲಿ ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿದರೆ, ಅದು ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದೆ.
ಪಂದ್ಯ ಬದಲಿಸಿದ ಕೊನೆಯ 3 ಓವರ್ಗಳು
ಕೊಲಂಬೊದಲ್ಲಿ ನಡೆದ ಈ ಗ್ರೂಪ್ 2 ಪಂದ್ಯದ ಮೇಲೆ ನ್ಯೂಜಿಲೆಂಡ್ ಮತ್ತು ಪಾಕಿಸ್ತಾನ ಏಕಕಾಲದಲ್ಲಿ ಕಣ್ಣಿಟ್ಟಿದ್ದವು. ಒಂದು ವೇಳೆ ಈ ಪಂದ್ಯದಲ್ಲಿ ಗೆಲುವು ಸಾಧಿಸಿದ್ದರೆ ನ್ಯೂಜಿಲೆಂಡ್ ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಿತ್ತು,ಇತ್ತ ಪಾಕಿಸ್ತಾನದ ಪ್ರಯಾಣ ಮುಗಿಯುತ್ತಿತ್ತು. ಇದಕ್ಕೆ ಪೂರಕವಾಗಿ ಕಿವೀಸ್ ಕೂಡ ಗೆಲುವಿನಂಚಿಗೆ ಬಂದಿತ್ತು. ಆದರೆ ಇಂಗ್ಲೆಂಡ್ ಕೊನೆಯ ಮೂರು ಓವರ್‌ಗಳಲ್ಲಿ ಕಿವೀಸ್ ತಂಡದ ಭರವಸೆಯನ್ನು ಹುಸಿಗೊಳಿಸಿತು.
159 ರನ್ ಕಲೆಹಾಕಿದ ನ್ಯೂಜಿಲೆಂಡ್
ಪ್ರೇಮದಾಸ ಕ್ರೀಡಾಂಗಣದ ನಿಧಾನಗತಿಯ ಪಿಚ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್, ಟಿಮ್ ಸೀಫರ್ಟ್ ಮತ್ತು ಫಿನ್ ಅಲೆನ್ ಅವರ ನೆರವಿನಿಂದ ಚುರುಕಾದ ಆರಂಭವನ್ನು ಪಡೆಯಿತು, ಕೇವಲ ಏಳು ಓವರ್‌ಗಳಲ್ಲಿ 64 ರನ್ ಗಳಿಸಿತು. ಆದಾಗ್ಯೂ, ಇಬ್ಬರೂ ಬ್ಯಾಟ್ಸ್‌ಮನ್‌ಗಳು ಔಟಾದ ಬಳಿಕ ತಂಡವು ಸಂಕಷ್ಟಕ್ಕೆ ಸಿಲುಕಿತು. ಆದಿಲ್ ರಶೀದ್, ವಿಲ್ ಜಾಕ್ಸ್ ಮತ್ತು ರೆಹಾನ್ ಅಹ್ಮದ್ ಅವರ ಸ್ಪಿನ್ ತ್ರಿವಳಿ ಕಿವಿ ಬ್ಯಾಟಿಂಗ್‌ಗೆ ಬ್ರೇಕ್ ಹಾಕಿದರು. ಇದರ ಪರಿಣಾಮವಾಗಿ ಒಂದು ಹಂತದಲ್ಲಿ 180 ರನ್ ಗಳಿಸುವ ಗುರಿ ಹೊಂದಿದ್ದ ನ್ಯೂಜಿಲೆಂಡ್ ಕೇವಲ 159 ರನ್ ಗಳಿಸಲಷ್ಟೇ ಶಕ್ತವಾಯಿತು. ಮೂವರು ಸ್ಪಿನ್ನರ್‌ಗಳು ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಇಂಗ್ಲೆಂಡ್ಗೆ ಆರಂಭಿಕ ಆಘಾತ
159 ರನ್ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ಗೂ ಎಂದಿನಂತೆ ಕಳಪೆ ಆರಂಭ ಸಿಕ್ಕಿತು. ಮೊದಲ ಎರಡು ಓವರ್‌ಗಳಲ್ಲಿ ಕೇವಲ ಎರಡು ರನ್‌ಗಳಿಗೆ ತಂಡದ ಇಬ್ಬರು ಆರಂಭಿಕರು ಔಟಾದರು. ಆ ನಂತರ, ನಾಯಕ ಹ್ಯಾರಿ ಬ್ರೂಕ್ ಮತ್ತು ಜಾಕೋಬ್ ಬೆಥೆಲ್ ಜೊತೆಯಾಟ ಕಟ್ಟಲು ಯತ್ನಿಸಿದರು. ಈ ವೇಳೆ ದಾಳಿಗಿಳಿದ ನ್ಯೂಜಿಲೆಂಡ್‌ನ ಸ್ಪಿನ್ನರ್‌ಗಳು ಇಬ್ಬರನ್ನೂ ಔಟ್ ಮಾಡಿದರು. ಗ್ಲೆನ್ ಫಿಲಿಪ್ಸ್ ಮತ್ತು ರಚಿನ್ ರವೀಂದ್ರ ಇಂಗ್ಲೆಂಡ್ ರನ್ ವೇಗಕ್ಕೆ ಕಡಿವಾಣ ಹಾಕಿದರು. ಹೀಗಾಗಿ ಇಂಗ್ಲೆಂಡ್ 117 ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಳೆದುಕೊಂಡಿತು.
IND vs WI: ಭಾರತ- ವಿಂಡೀಸ್ ಮಾಡು ಇಲ್ಲವೇ ಮಡಿ ಪಂದ್ಯ ಯಾವಾಗ ಎಲ್ಲಿ ನಡೆಯಲಿದೆ?
ಪಂದ್ಯ ಗೆಲ್ಲಿಸಿದ ಜ್ಯಾಕ್ಸ್- ರೆಹಾನ್
ಅಂತಿಮವಾಗಿ ಕೊನೆಯ ಮೂರು ಓವರ್‌ಗಳಲ್ಲಿ ಇಂಗ್ಲೆಂಡ್ ಗೆಲುವಿಗೆ 43 ರನ್‌ಗಳು ಬೇಕಾಗಿದ್ದವು. ಹೀಗಾಗಿ ನ್ಯೂಜಿಲೆಂಡ್‌ನ ಗೆಲುವು ಖಚಿತವೆನಿಸಿತ್ತು. ಆದರೆ ಈ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ವಿಲ್ ಜ್ಯಾಕ್ಸ್ ಮತ್ತೆ ತಂಡದ ನೆರವಿಗೆ ಬಂದರು. ಹಾಗೆಯೇ ಜ್ಯಾಕ್ಸ್ ಜೊತೆಯಾದ ರೆಹಾನ್ ಅಹ್ಮದ್ ಕಿವೀಸ್ಗೆ ಆಘಾತ ನೀಡುವಲ್ಲಿ ಯಶಸ್ವಿಯಾದರು. 18 ನೇ ಓವರ್‌ನಲ್ಲಿ ಇಬ್ಬರೂ 22 ರನ್ ಕಲೆಹಾಕುವುದರ ಜೊತೆಗೆ ನಂತರ ಮುಂದಿನ ಒಂಬತ್ತು ಎಸೆತಗಳಲ್ಲಿ 22 ರನ್‌ಗಳನ್ನು ಗಳಿಸಿ 19.3 ಓವರ್‌ಗಳಲ್ಲಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 pm, Fri, 27 February 26
