
ಧರ್ಮಶಾಲಾದಲ್ಲಿ ನಡೆಯುತ್ತಿರುವ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೇ ದಿನವೂ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಇಂಗ್ಲೆಂಡ್ ತಂಡವನ್ನು (India vs England) ಪಂದ್ಯದಿಂದ ಹೊರಹಾಕಿದೆ. ಎರಡನೇ ದಿನ ಭಾರತದ ಪರ ರೋಹಿತ್ ಶರ್ಮಾ (Rohit Sharma) ಮತ್ತು ಶುಭ್ಮನ್ ಗಿಲ್ (Shubman Gill) ಭರ್ಜರಿ ಶತಕ ಪೂರೈಸಿದರು. ಆದರೆ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಶತಕವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಎರಡನೇ ಸೆಷನ್‌ನಲ್ಲಿ ಟೀಂ ಇಂಡಿಯಾ ಇಬ್ಬರನ್ನೂ ಕಳೆದುಕೊಂಡಿತು. ಆದರೆ ಆ ಬಳಿಕ ಜೊತೆಯಾದ ಸರ್ಫರಾಜ್ ಖಾನ್ (Sarfaraz Khan) ಮತ್ತು ದೇವದತ್ ಪಡಿಕಲ್ (Devdutt Padikkal) ಶತಕದ ಜೊತೆಯಾಟವನ್ನಾಡಿದರು. ಈ ವೇಳೆ ಸರ್ಫರಾಜ್ ತಮ್ಮ ಮೂರನೇ ಟೆಸ್ಟ್ ಅರ್ಧಶತಕವನ್ನು ಪೂರ್ಣಗೊಳಿಸಿದರೆ, ಚೊಚ್ಚಲ ಪಂದ್ಯವನ್ನಾಡುತ್ತಿರುವ ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಎರಡನೇ ದಿನ ಈ ನಾಲ್ವರ ಅದ್ಭುತ ಆಟದಿಂದಾಗಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 255 ರನ್ಗಳ ಮುನ್ನಡೆ ಸಾಧಿಸಿದೆ. ದಿನದಾಟದಂತ್ಯಕ್ಕೆ ಭಾರತ 8 ವಿಕೆಟ್ ಕಳೆದುಕೊಂಡು 473 ರನ್ ಕಲೆಹಾಕಿದೆ. ತಂಡದ ಪರ ಕುಲ್ದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾ ಅಜೇಯರಾಗಿದ್ದು, ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಮೊದಲ ದಿನದಾಟದಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 135 ರನ್ ಕಲೆಹಾಕಿದ್ದ ಟೀಂ ಇಂಡಿಯಾ ಇಲ್ಲಿಂದ ಎರಡನೇ ದಿನದಾಟವನ್ನು ಆರಂಭಿಸಿತು. ತಂಡದ ಪರ ಎರಡನೇ ದಿನದಾಟ ಆರಂಭಿಸಿದ ನಾಯಕ ರೋಹಿತ್ ಹಾಗೂ ಶುಭ್ಮನ್ ಗಿಲ್ ಇಬ್ಬರೂ ಶತಕ ಸಿಡಿಸುವುದರೊಂದಿಗೆ ತಂಡಕ್ಕೆ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ವೇಳೆ ರೋಹಿತ್ 162 ಎಸೆತಗಳಲ್ಲಿ 103 ರನ್ಗಳ ಇನ್ನಿಂಗ್ಸ್ ಆಡಿದರೆ, ಶುಭ್ಮನ್ ಗಿಲ್ ಕೂಡ 150 ಎಸೆತಗಳಲ್ಲಿ 110 ರನ್ ಕಲೆಹಾಕಿದರು. ಆದರೆ ಈ ಇಬ್ಬರೂ ಕೆಲವೇ ಓವರ್ಗಳ ಅಂತರದಲ್ಲಿ ವಿಕೆಟ್ ಒಪ್ಪಿಸಿದ್ದರಿಂದ ತಂಡ ಕೊಂಚ ಹಿನ್ನಡೆ ಅನುಭವಿಸಿತ್ತು. ಇಲ್ಲಿಂದ ತಂಡದ ಇನ್ನಿಂಗ್ಸ್ ಜವಬ್ದಾರಿ ಹೊತ್ತ ಯುವ ಬ್ಯಾಟರ್ಗಳಾದ ಸರ್ಫರಾಜ್ ಖಾನ್ ಹಾಗೂ ದೇವದತ್ ಪಡಿಕ್ಕಲ್ ತಲಾ ಅರ್ಧಶತಕ ಸಿಡಿಸುವುದರೊಂದಿಗೆ ತಂಡವನ್ನು 400 ರನ್ಗಳ ಗಡಿ ದಾಟಿಸಿದರು.
IND vs ENG: ಚೊಚ್ಚಲ ಪಂದ್ಯದಲ್ಲೇ ಸಿಕ್ಸರ್ ಸಿಡಿಸಿ ಅರ್ಧಶತಕ ಪೂರೈಸಿದ ಕನ್ನಡಿಗ ದೇವದತ್ ಪಡಿಕ್ಕಲ್..!
ಈ ವೇಳೆ ಸರ್ಫರಾಜ್ ಖಾನ್ 60 ಎಸೆತಗಳಲ್ಲಿ 56 ಸಿಡಿಸಿ ವಿಕೆಟ್ ಒಪ್ಪಿಸಿದರೆ, ದೇವದತ್ ಪಡಿಕ್ಕಲ್ 103 ಎಸೆತಗಳಲ್ಲಿ 65 ರನ್ ಕಲೆಹಾಕಿ ಪೆವಿಲಿಯನ್ ಸೇರಿಕೊಂಡರು. ಈ ಇಬ್ಬರ ನಂತರ ಬಂದ ರವೀಂದ್ರ ಜಡೇಜಾ 15 ರನ್ಗಳಿಗೆ ಸುಸ್ತಾದರೆ, ದ್ರುವ್ ಜುರೇಲ್ ಆಟವೂ 15 ರನ್ಗಳಿಗೆ ಅಂತ್ಯಗೊಂಡಿತು. ನೂರನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಅಶ್ವಿನ್ ಖಾತೆ ತೆರೆಯದೆ ನಿರ್ಗಮಿಸಿದರೆ, ದಿನದಂತ್ಯದವರೆಗೂ ಆಂಗ್ಲರ ಬೌಲಿಂಗ್ಗೆ ತಕ್ಕ ಉತ್ತರ ನೀಡಿದ ಕುಲ್ದೀಪ್ ಯಾದವ್ 27 ರನ್ ಹಾಗೂ ಜಸ್ಪ್ರೀತ್ ಬುಮ್ರಾ 19 ರನ್ ಸಿಡಿಸಿ ಮೂರನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ಶೊಯೇಬ್ ಬಶೀರ್ ಪ್ರಮುಖ 4 ವಿಕೆಟ್ ಪಡೆದರೆ, ಮತ್ತೊಬ್ಬ ಸ್ಪಿನ್ನರ್ ಟಾಮ್ ಹಾರ್ಟ್ಲಿ 2 ವಿಕೆಟ್, ಬೆನ್ ಸ್ಟೋಕ್ಸ್ ಹಾಗೂ ಜೇಮ್ಸ್ ಆಂಡರ್ಸನ್ ತಲಾ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Fri, 8 March 24