ಡಚ್ಚರಿಗೆ 160 ರನ್​ಗಳ ಸೋಲು! ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಿದ ಟೀಂ ಇಂಡಿಯಾ

IND vs NED, ICC World Cup 2023: ಇದು  ಈ ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಸತತ 9ನೇ ಗೆಲುವಾಗಿದ್ದು, ಈ ಗೆಲುವಿನೊಂದಿಗೆ ಭಾರತ ಒಂದು ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಸತತ ಗೆಲುವುಗಳನ್ನು ಪಡೆದ ಎರಡನೇ ತಂಡ ಎನಿಸಿಕೊಂಡಿದೆ. ಸತತ 11 ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ಡಚ್ಚರಿಗೆ 160 ರನ್​ಗಳ ಸೋಲು! ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಿದ ಟೀಂ ಇಂಡಿಯಾ
ಟೀಂ ಇಂಡಿಯಾ

Updated on: Nov 12, 2023 | 10:15 PM

ಬೆಂಗಳೂರಿನ ಎಂ ಚಿನ್ನಸ್ವಾಮಿ  ಮೈದಾನದಲ್ಲಿ (M. Chinnaswamy Stadium) ನಡೆದ ಭಾರತ ಹಾಗೂ ನೆದರ್ಲೆಂಡ್ಸ್ (India Vs Netherlands) ನಡುವಿನ ವಿಶ್ವಕಪ್ (ICC ODI World Cup 2023) ಪಂದ್ಯವನ್ನು ರೋಹಿತ್ ಪಡೆ ಬರೋಬ್ಬರಿ 160 ರನ್​ಗಳಿಂದ ಗೆದ್ದು ಬೀಗಿದೆ. ಇದು  ಈ ವಿಶ್ವಕಪ್​ನಲ್ಲಿ ಟೀಂ ಇಂಡಿಯಾದ ಸತತ 9ನೇ ಗೆಲುವಾಗಿದ್ದು, ಈ ಗೆಲುವಿನೊಂದಿಗೆ ಭಾರತ ಒಂದು ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ಸತತ ಗೆಲುವುಗಳನ್ನು ಪಡೆದ ಎರಡನೇ ತಂಡ ಎನಿಸಿಕೊಂಡಿದೆ. ಸತತ 11 ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಬಳಿಕ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಟೀಂ ಇಂಡಿಯಾ ನಿಗದಿತ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ್ದ ನೆದರ್ಲೆಂಡ್ಸ್ ತಂಡ 250 ರನ್​ಗಳಿಗೆ ಆಲೌಟ್ ಆಯಿತು.

ಆರಂಭಿಕರ ಅರ್ಧಶತಕ

ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ರೋಹಿತ್ ಶರ್ಮಾ ಹಾಗೂ ಶುಭ್​ಮನ್ ಗಿಲ್ 100 ರನ್​ಗಳ ಶತಕದ ಜೊತೆಯಾಟ ಹಂಚಿಕೊಂಡರು. ಇದೇ ವೇಳೆ ನಾಯಕ ರೋಹಿತ್ ಶರ್ಮಾ 54 ಎಸೆತಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್‌ಗಳ ಸಹಾಯದಿಂದ 61 ರನ್ ಚಚ್ಚಿದರು. ಹಾಗೆಯೇ ರೋಹಿತ್​ಗೆ ಉತ್ತಮ ಸಾಥ್ ನೀಡಿದ ಶುಭ್​ಮನ್ ಗಿಲ್ ಕೂಡ 32 ಎಸೆತಗಳಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್‌ಗಳ ನೆರವಿನಿಂದ 51 ರನ್​ಗಳ ಇನ್ನಿಂಗ್ಸ್ ಆಡಿದರು. ಆದರೆ ಇವರಿಬ್ಬರಿಗೂ ಅರ್ಧಶತಕವನ್ನು ಶತಕವನ್ನಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ.

KL Rahul: ಬೆಂಗಳೂರಿನಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಕನ್ನಡಿಗ ಕೆಎಲ್ ರಾಹುಲ್..!

ವಿರಾಟ್ ಅರ್ಧಶತಕ

ಮೊದಲ ಎರಡು ವಿಕೆಟ್​ಗಳ ಪತನದ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅರ್ಧಶತಕದ ಜೊತೆಯಾಟ ಹಂಚಿಕೊಂಡರು. ಕರ್ನಾಟಕದ ದತ್ತುಪುತ್ರ ಎನಿಸಿಕೊಳ್ಳುವ ಕೊಹ್ಲಿ ಬೆಂಗಳೂರಿನಲ್ಲಿ 50ನೇ ಶತಕ ಸಿಡಿಸುತ್ತಾರೆ ಎಂದು ಎಲ್ಲರು ನಿರೀಕ್ಷಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಅಂತಿಮವಾಗಿ ಕೊಹ್ಲಿ 56 ಎಸೆತಗಳಲ್ಲಿ 5 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 51 ರನ್ ಬಾರಿಸಿ ಪೆವಿಲಿಯನ್ ಸೇರಿಕೊಂಡರು. ಆದರೆ ಶ್ರೇಯಸ್ ಅಯ್ಯರ್ ಮಾತ್ರ ಅರ್ಧಶತಕದ ಬಳಿಕವೂ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿದರು.

ಶ್ರೇಯಸ್- ರಾಹುಲ್ ಶತಕ

ಶ್ರೇಯಸ್​ಗೆ ಉತ್ತಮ ಸಾಥ್ ನೀಡಿದ ಕನ್ನಡಿಗ ಕೆಎಲ್ ರಾಹುಲ್ ತವರಿನಲ್ಲಿ ಶತಕ ಸಿಡಿಸಿ ಮಿಂಚಿದರು. ಇದರಲ್ಲಿ ಶ್ರೇಯಸ್ ಅಯ್ಯರ್, ತಮ್ಮ ಇನ್ನಿಂಗ್ಸ್​ನಲ್ಲಿ 94 ಎಸೆತಗಳನ್ನು ಎದುರಿಸಿ 10 ಬೌಂಡರಿ ಹಾಗೂ 5 ಭರ್ಜರಿ ಸಿಕ್ಸರ್​ಗಳ ಸಹಿತ ಅಜೇಯ 128 ರನ್ ಚಚ್ಚಿದರು. ಕೆಎಲ್ ರಾಹುಲ್ ಕೂಡ ಅಯ್ಯರ್ ಜೊತೆಗೆ 200 ರನ್​ಗಳ ಜೊತೆಯಾಟ ಹಂಚಿಕೊಂಡಿದಲ್ಲದೆ, 64 ಎಸೆತಗಳಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 102 ರನ್ ಬಾರಿಸಿ ಇನ್ನಿಂಗ್ಸ್​ನ ಕೊನೆಯ ಓವರ್​ನಲ್ಲಿ ತಮ್ಮ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಟೀಂ ಇಂಡಿಯಾ 4 ವಿಕೆಟ್ ಕಳೆದುಕೊಂಡು 410 ರನ್ ಕಲೆಹಾಕಿತು.

ನೆದರ್ಲೆಂಡ್ಸ್ ಇನ್ನಿಂಗ್ಸ್

411 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನಟ್ಟಿದ ನೆದರ್ಲೆಂಡ್ಸ್​ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ವೆಸ್ಲಿ ಬ್ಯಾರೆಸಿ ಕೇವಲ 4 ರನ್​ಗಳಿಗೆ ಪೆವಲಿಯನ್ ಸೇರಿಕೊಂಡರು. ನಂತರ ಮ್ಯಾಕ್ಸ್ ಒ’ಡೌಡ್ (30 ರನ್) ಹಾಗೂ ಕಾಲಿನ್ ಅಕರ್ಮನ್ (35 ರನ್) 61 ರನ್​ಗಳ ಜೊತೆಯಾಟ ಹಂಚಿಕೊಂಡರು. ಆದರೆ ಇವರಿಬ್ಬರಿಗೂ ಬೃಹತ್ ಜೊತೆಯಾಟ ಕಟ್ಟಲು ಸಾಧ್ಯವಾಗಲಿಲ್ಲ. ಸೈಬ್ರಾಂಡ್ ಎಂಗಲ್‌ಬ್ರೆಕ್ಟ್ ಕೂಡ 45 ರನ್​ಗಳಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಕೆಳಕ್ರಮಾಂಕದಲ್ಲಿ ತೇಜ ನಿಡಮನೂರು ಅರ್ಧಶತಕದ ಇನ್ನಿಂಗ್ಸ್ ಆಡುವ ಮೂಲಕ ಕೊಂಚ ಹೋರಾಟ ನೀಡಿದರು. ಉಳಿದಂತೆ ತಂಡದ ಯಾವ ಬ್ಯಾಟರ್​ಗಳಿಗೂ​ ಕೂಡ ಭಾರತದ ಬೌಲಿಂಗ್ ದಾಳಿ ಮುಂದೆ ನಿಲ್ಲಲು ಸಾಧ್ಯವಾಗಲಿಲ್ಲ. ಭಾರತದ ಪರ ಜಸ್ಪ್ರಿತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್, ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರೆ, ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ತಲಾ 1 ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಟೀಂ ಇಂಡಿಯಾ ಬರೋಬ್ಬರಿ 9 ಬೌಲರ್​ಗಳನ್ನು ದಾಳಿಗಿಳಿಸಿದ್ದು ವಿಶೇಷವಾಗಿತ್ತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:39 pm, Sun, 12 November 23