IND vs NZ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ

|

Updated on: Oct 17, 2024 | 8:55 PM

IND vs NZ: ಈ ತಿಂಗಳ ಅಂತ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಹಿಳಾ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಇದಕ್ಕಾಗಿ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಸಾಕಷ್ಟು ಊಹಪೋಹಗಳ ನಂತರ ಹರ್ಮನ್‌ಪ್ರೀತ್ ಕೌರ್ ಅವರನ್ನು ತಂಡದ ನಾಯಕಿಯಾಗಿ ಮುಂದುವರೆಸಿದ್ದು, ಟಿ20 ವಿಶ್ವಕಪ್​ನಲ್ಲಿ ಆಡಿದ ಆಟಗಾರ್ತಿಯರನ್ನೇ ಈ ಸರಣಿಗೂ ಆಯ್ಕೆ ಮಾಡಲಾಗಿದೆ.

IND vs NZ: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಟೀಂ ಇಂಡಿಯಾ ಪ್ರಕಟ
ಭಾರತ ವನಿತಾ ಪಡೆ
Follow us on

ಒಂದೆಡೆ ಬೆಂಗಳೂರಿನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದ್ದರೆ, ಇನ್ನೊಂದೆಡೆ ಈ ಎರಡೂ ದೇಶಗಳ ವನಿತಾ ತಂಡಗಳ ನಡುವೆ ನಡೆಯಲಿರುವ ಏಕದಿನ ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಈ ತಿಂಗಳ ಅಂತ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಮಹಿಳಾ ತಂಡಗಳ ನಡುವೆ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಇದಕ್ಕಾಗಿ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದೆ. ಸಾಕಷ್ಟು ಊಹಪೋಹಗಳ ನಂತರ ಹರ್ಮನ್‌ಪ್ರೀತ್ ಕೌರ್ ಅವರನ್ನು ತಂಡದ ನಾಯಕಿಯಾಗಿ ಮುಂದುವರೆಸಿದ್ದು, ಟಿ20 ವಿಶ್ವಕಪ್​ನಲ್ಲಿ ಆಡಿದ ಆಟಗಾರ್ತಿಯರನ್ನೇ ಈ ಸರಣಿಗೂ ಆಯ್ಕೆ ಮಾಡಲಾಗಿದೆ.

ತಂಡದಲ್ಲಿ ಹೆಚ್ಚಿನ ಬದಲಾವಣೆಗಳಿಲ್ಲ

ಯುಎಇಯಲ್ಲಿ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್​ನಲ್ಲಿ ಹರ್ಮನ್‌ಪ್ರೀತ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಟೀಂ ಇಂಡಿಯಾ ಗುಂಪು ಹಂತದಲ್ಲೇ ತನ್ನ ಪ್ರಯಾಣ ಮುಗಿಸಿತ್ತು. ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೋತ ಟೀಂ ಇಂಡಿಯಾ ಸೆಮಿಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಅಂದಿನಿಂದ, ನಾಯಕತ್ವದ ಹೊರತಾಗಿ ತಂಡದ ಅನೇಕ ಆಟಗಾರ್ತಿಯರನ್ನು ತಂಡದಿಂದ ಹೊರಹಾಕಬೇಕು ಎಂಬ ಕೂಗು ಜೋರಾಗಿ ಕೇಳಿಬಂದಿತ್ತು. ಆದರೆ ಹಿರಿಯ ಮಹಿಳಾ ಆಯ್ಕೆ ಸಮಿತಿಯು ಅಂತಹ ಯಾವುದೇ ಕ್ರಮವನ್ನು ತೆಗೆದುಕೊಂಡಿಲ್ಲ. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಅನ್ನು ಪರಿಗಣಿಸಿ ಹರ್ಮನ್‌ಪ್ರೀತ್ ಅವರನ್ನು ನಾಯಕಿಯಾಗಿ ಉಳಿಸಿಕೊಂಡಿದ್ದು, ಅವರೇ ಏಕದಿನ ವಿಶ್ವಕಪ್‌ನಲ್ಲೂ ತಂಡವನ್ನು ಮುನ್ನಡೆಸುವ ಸಾಧ್ಯತೆಗಳಿವೆ ಎಂಬುದನ್ನು ಬಿಸಿಸಿಐ ಖಚಿತಪಡಿಸಿದೆ.

ಸರಣಿಯಿಂದ ಯಾರ್ಯಾರು ಔಟ್?

ಮೇಲೆ ಹೇಳೆದಂತೆ ಟಿ20 ವಿಶ್ವಕಪ್‌ನ ಭಾಗವಾಗಿದ್ದ ಹೆಚ್ಚಿನ ಆಟಗಾರ್ತಿಯರನ್ನು ತಂಡದಲ್ಲಿ ಉಳಿಸಿಕೊಳ್ಳಲಾಗಿದೆ. ಆದಾಗ್ಯೂ, ಈ ಸರಣಿಯಿಂದ ಸ್ಟಾರ್ ಆಲ್‌ರೌಂಡರ್ ಪೂಜಾ ವಸ್ತ್ರಾಕರ್ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, 12ನೇ ತರಗತಿಯ ಬೋರ್ಡ್​ ಪರೀಕ್ಷೆ ಇರುವ ಕಾರಣ ಯುವ ವಿಕೆಟ್‌ಕೀಪರ್-ಬ್ಯಾಟರ್ ರಿಚಾ ಘೋಷ್ ಅವರನ್ನು ಸರಣಿಯಿಂದ ಹೊರಗಿಡಲಾಗಿದೆ. ವಿಶ್ವಕಪ್ ವೇಳೆ ಗಾಯಗೊಂಡಿದ್ದ ಲೆಗ್ ಸ್ಪಿನ್ನರ್ ಆಶಾ ಶೋಭನಾ ಇನ್ನೂ ಸಂಪೂರ್ಣ ಫಿಟ್ ಆಗಿಲ್ಲ ಹೀಗಾಗಿ ಅವರೂ ಈ ಸರಣಿಯಲ್ಲಿ ಆಡುವುದಿಲ್ಲ.

ಈ ಸರಣಿಯಲ್ಲಿ ರಿಚಾ ಬದಲಿಗೆ ಯಾಸ್ತಿಕಾ ಭಾಟಿಯಾ ವಿಕೆಟ್‌ ಕೀಪಿಂಗ್ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಯುವ ವಿಕೆಟ್ ಕೀಪರ್ ಉಮಾ ಛೆಟ್ರಿ ಕೂಡ ಸರಣಿಗೆ ಆಯ್ಕೆಯಾಗಿದ್ದಾರೆ. ಇವರಲ್ಲದೆ ಅಗ್ರ ಕ್ರಮಾಂಕದ ಬ್ಯಾಟರ್​ಗಳಾದ ದಯಾಲನ್ ಹೇಮಲತಾ, ಸೈಮಾ ಠಾಕೋರ್, ತೇಜಲ್ ಹಸನ್‌ಬಿಸ್ ಮತ್ತು ಸಯಾಲಿ ಸತ್ಗರೆ ಕೂಡ ತಂಡದಲ್ಲಿ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 24 ರಿಂದ 3 ಏಕದಿನ ಪಂದ್ಯಗಳ ಸರಣಿ ಆರಂಭವಾಗಲಿದ್ದು, ಇದಕ್ಕಾಗಿ ಕಿವೀಸ್ ತಂಡ ಯುಎಇಯಿಂದ ನೇರವಾಗಿ ಭಾರತಕ್ಕೆ ಬರಲಿದೆ. ಅಕ್ಟೋಬರ್ 24, 27 ಮತ್ತು 29 ರಂದು ಸರಣಿ ಪಂದ್ಯಗಳು ನಡೆಯಲಿವೆ. ಈ ಮೂರು ಪಂದ್ಯಗಳುಳಿಗೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣ ಆತಿಥ್ಯವಹಿಸಲಿದೆ.

ಭಾರತ ವನಿತಾ ಪಡೆ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ (ಉಪನಾಯಕಿ), ಜೆಮಿಮಾ ರೋಡ್ರಿಗಸ್, ಶೆಫಾಲಿ ವರ್ಮಾ, ದಯಾಲನ್ ಹೇಮಲತಾ, ದೀಪ್ತಿ ಶರ್ಮಾ, ಯಾಸ್ತಿಕಾ ಭಾಟಿಯಾ (ವಿಕೆಟ್ ಕೀಪರ್), ಉಮಾ ಛೆಟ್ರಿ (ವಿಕೆಟ್ ಕೀಪರ್), ಸಯಾಲಿ ಸತ್ಗರೆ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್, ತೇಜಲ್ ಹಸನ್ಬಿಸ್, ಸೈಮಾ ಠಾಕೋರ್, ಪ್ರಿಯಾ ಮಿಶ್ರಾ, ರಾಧಾ ಯಾದವ್ ಮತ್ತು ಶ್ರೇಯಾಂಕಾ ಪಾಟೀಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:43 pm, Thu, 17 October 24