ಸದ್ಯ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಯನ್ನು ಆಡುತ್ತಿರುವ ಟೀಂ ಇಂಡಿಯಾ ಆ ಬಳಿಕ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ. ಉಭಯ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯ ಅಕ್ಟೋಬರ್ 16 ರಿಂದ ಆರಂಭವಾಗಲಿದ್ದು, ಇದೀಗ ಈ ಸರಣಿಗಾಗಿ 17 ಸದಸ್ಯರ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಅಚ್ಚರಿಯ ಸಂಗತಿಯೆಂದರೆ ನ್ಯೂಜಿಲೆಂಡ್ ತಂಡದ ಬ್ಯಾಟಿಂಗ್ ಜೀವಾಳವಾಗಿರುವ ಕೇನ್ ವಿಲಿಯಮ್ಸನ್ ಮೊದಲ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅಲ್ಲದೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಹೀನಾಯ ಸೋಲಿನ ಬಳಿಕ ಕಿವೀಸ್ ಟೆಸ್ಟ್ ತಂಡದ ನಾಯಕತ್ವದಲ್ಲಿ ಬದಲಾವಣೆಯಾಗಿದ್ದು, ಟಿಮ್ ಸೌಥಿ ಬದಲಿಗೆ ಟಾಮ್ ಲೇಥಮ್ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ.
ಭಾರತ ವಿರುದ್ಧದ ಟೆಸ್ಟ್ ಸರಣಿಗೆ ತಂಡ ಪ್ರಕಟಿಸಿದ ಬಳಿಕ ಮಾಹಿತಿ ನೀಡಿರುವ ಕಿವೀಸ್ ಕ್ರಿಕೆಟ್ ಮಂಡಳಿ, ‘ಶುಕ್ರವಾರ ಅಂದರೆ ಅಕ್ಟೋಬರ್ 11 ರಂದು ಕಿವೀಸ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಆದರೆ ಗಾಯಗೊಂಡಿರುವ ಕೇನ್ ವಿಲಿಯಮ್ಸನ್ ತಡವಾಗಿ ತಂಡ ಸೇರಿಕೊಳ್ಳಲಿದ್ದಾರೆ. ವಿಲಿಯಮ್ಸನ್ ಅವರ ತೊಡೆಸಂದು ಗಾಯವೇ ಇದಕ್ಕೆ ಕಾರಣ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಹೇಳಿದೆ.
ಶ್ರೀಲಂಕಾ ವಿರುದ್ಧ ಗಾಲೆಯಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ತೊಡೆಸಂದು ಗಾಯಕ್ಕೆ ಒಳಗಾಗಿದ್ದರು. ನ್ಯೂಜಿಲೆಂಡ್ ಕ್ರಿಕೆಟ್ ಪ್ರಕಾರ, ಅವರು ಪ್ರಸ್ತುತ ರಿಹ್ಯಾಬ್‌ನಲ್ಲಿದ್ದಾರೆ, ಇದರಿಂದಾಗಿ ಅವರು ತಂಡದ ಉಳಿದ ಆಟಗಾರರೊಂದಿಗೆ ಭಾರತಕ್ಕೆ ಬರುತ್ತಿಲ್ಲ. ಅಂದರೆ ಬೆಂಗಳೂರಿನಲ್ಲಿ ನಡೆಯಲಿರುವ ಸರಣಿಯ ಮೊದಲ ಟೆಸ್ಟ್‌ನಲ್ಲಿ ಕೇನ್ ವಿಲಿಯಮ್ಸನ್ ಆಡುವ ಸಾಧ್ಯತೆ ಕಡಿಮೆ. ಅಲ್ಲದೆ ಉಳಿದೆರಡು ಟೆಸ್ಟ್ ಪಂದ್ಯಗಳಲ್ಲೂ ಅವರು ಆಡುವ ಬಗ್ಗೆ ಯಾವುದೇ ಖಚಿತತೆ ಸಿಕ್ಕಿಲ್ಲ. ಏಕೆಂದರೆ, ವಿಲಿಯಮ್ಸನ್ ತೊಡೆಸಂದು ಗಾಯದಿಂದ ಚೇತರಿಸಿಕೊಳ್ಳಲು ಎಷ್ಟು ಸಮಯಬೇಕೆಂಬುದರ ಕುರಿತು ಯಾವುದೇ ಮಾಹಿತಿಯನ್ನು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ ನೀಡಿಲ್ಲ.
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಕೇನ್ ವಿಲಿಯಮ್ಸನ್ ಬದಲಿಗೆ ಮಾರ್ಕ್ ಚಾಪ್‌ಮನ್ ಅವರನ್ನು ಬ್ಯಾಕ್-ಅಪ್ ಆಟಗಾರನಾಗಿ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಇದಲ್ಲದೇ ಮೈಕಲ್ ಬ್ರೇಸ್‌ವೆಲ್ ಕೂಡ ಕೇವಲ ಒಂದು ಟೆಸ್ಟ್ ಪಂದ್ಯಕ್ಕೆ ಮಾತ್ರ ತಂಡದ ಭಾಗವಾಗಲಿದ್ದಾರೆ. ಮಗುವಿನ ನಿರೀಕ್ಷೆಯಲ್ಲಿರುವ ಬ್ರೇಸ್‌ವೆಲ್ ಸರಣಿಯ ಮೊದಲ ಟೆಸ್ಟ್ ಮುಗಿದ ಬಳಿಕ ತವರಿಗೆ ಮರಳಲಿದ್ದಾರೆ. ಹೀಗಾಗಿ ಇಶ್ ಸೋಧಿ ಎರಡು ಮತ್ತು ಮೂರನೇ ಟೆಸ್ಟ್‌ಗೆ ಆಯ್ಕೆಯಾಗಿದ್ದಾರೆ.
ನ್ಯೂಜಿಲೆಂಡ್ ಟೆಸ್ಟ್ ತಂಡ: ಟಾಮ್ ಲೇಥಮ್ (ನಾಯಕ), ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್ (ಮೊದಲನೇ ಟೆಸ್ಟ್‌ಗೆ ಮಾತ್ರ), ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೇ, ಮ್ಯಾಟ್ ಹೆನ್ರಿ, ಡೇರಿಲ್ ಮಿಚೆಲ್, ವಿಲ್ ಓ’ರೂರ್ಕ್, ಅಜಾಜ್ ಪಟೇಲ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಬೆನ್ ಸಿಯರ್ಸ್ , ಇಶ್ ಸೋಧಿ (ಎರಡನೇ ಮತ್ತು ಮೂರನೇ ಟೆಸ್ಟ್‌ಗಳಿಗೆ ಮಾತ್ರ), ಟಿಮ್ ಸೌಥಿ, ಕೇನ್ ವಿಲಿಯಮ್ಸನ್, ವಿಲ್ ಯಂಗ್.
ಕೆಲವೇ ದಿನಗಳ ಹಿಂದೆ ನಡೆದಿದ್ದ ಶ್ರೀಲಂಕಾ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ನ್ಯೂಜಿಲೆಂಡ್ ಹೀನಾಯ ಸೋಲು ಕಂಡಿತ್ತು. ಆತಿಥೇಯ ಶ್ರೀಲಂಕಾ 2-0 ಅಂತರದಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಕಿವೀಸ್ ತಂಡದ ನೈತಿಕ ಸ್ಥೈರ್ಯ ಕುಗ್ಗಿದೆ. ಇತ್ತ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಬಾಂಗ್ಲಾದೇಶವನ್ನು ಮಣಿಸಿರುವ ಭಾರತ ತಂಡದ ಮನೋಬಲ ಹೆಚ್ಚಿದೆ. ಆದಾಗ್ಯೂ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ದೃಷ್ಟಿಯಿಂದ ನ್ಯೂಜಿಲೆಂಡ್ ವಿರುದ್ಧದ ಈ ಸರಣಿಯು ಭಾರತಕ್ಕೆ ಬಹಳ ಮುಖ್ಯವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:17 pm, Wed, 9 October 24