IND vs NZ: 36 ವರ್ಷಗಳ ಕಾಯುವಿಕೆ ಅಂತ್ಯಗೊಳಿಸಿದ ನ್ಯೂಝಿಲೆಂಡ್

|

Updated on: Oct 20, 2024 | 12:55 PM

India vs New Zealand, 1st Test: ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲೊಪ್ಪಿಕೊಂಡಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಭಾರತ ತಂಡ 46 ರನ್ ಕಲೆಹಾಕಿದರೆ, ನ್ಯೂಝಿಲೆಂಡ್ 402 ರನ್​ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 462 ರನ್ ಬಾರಿಸಿತು.

IND vs NZ: 36 ವರ್ಷಗಳ ಕಾಯುವಿಕೆ ಅಂತ್ಯಗೊಳಿಸಿದ ನ್ಯೂಝಿಲೆಂಡ್
New Zealand
Follow us on

ಭರತ ಖಂಡದಲ್ಲಿ ಒಂದೇ ಒಂದು ಗೆಲುವಿಗಾಗಿ ನ್ಯೂಝಿಲೆಂಡ್ ತಂಡ ಕಾದಿದ್ದು ಬರೋಬ್ಬರಿ 36 ವರ್ಷಗಳು. ಅಂದರೆ ಮೂರು ದಶಕದಿಂದ ಭಾರತ ತಂಡವನ್ನು ತವರಿನಲ್ಲಿ ಸೋಲಿಸಲು ಕಿವೀಸ್​ ಪಡೆಗೆ ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಟಾಮ್ ಲ್ಯಾಥಮ್ ಬಳಗವು ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ನ್ಯೂಝಿಲೆಂಡ್ ತಂಡ 8 ವಿಕೆಟ್​ಗಳಿಂದ ಗೆದ್ದುಕೊಂಡಿದೆ. ಈ ಮೂಲಕ 36 ವರ್ಷಗಳಿಂದ ಮರೀಚಿಕೆಯಾಗಿದ್ದ ಗೆಲುವನ್ನು ಮರಳಿ ಪಡೆಯುವಲ್ಲಿ ಕಿವೀಸ್ ಪಡೆ ಯಶಸ್ವಿಯಾಗಿದೆ.

ಇದಕ್ಕೂ ಮುನ್ನ ನ್ಯೂಝಿಲೆಂಡ್ ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಗೆದ್ದಿದ್ದು 1988 ರಲ್ಲಿ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಆ ಪಂದ್ಯದಲ್ಲಿ ನ್ಯೂಝಿಲೆಂಡ್ ತಂಡವು 136 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಇದಾದ ಬಳಿಕ ಹಲವು ಸರಣಿಗಳನ್ನು ಆಡಿದರೂ ಕಿವೀಸ್ ಪಾಲಿಗೆ ಗೆಲುವು ಮಾತ್ರ ದಕ್ಕಿರಲಿಲ್ಲ.

ಆದರೆ ಈ ಬಾರಿ ಹೊಸ ನಾಯಕನೊಂದಿಗೆ ಕಣಕ್ಕಿಳಿದ ನ್ಯೂಝಿಲೆಂಡ್ ತಂಡವು ತವರಿನಲ್ಲಿ ಟೀಮ್ ಇಂಡಿಯಾವನ್ನು ಬಗ್ಗು ಬಡಿಯುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಐತಿಹಾಸಿಕ ಗೆಲುವು ಸಾಧಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಅಂದಹಾಗೆ ಭಾರತದಲ್ಲಿ ನ್ಯೂಝಿಲೆಂಡ್ ತಂಡ ಈವರೆಗೆ ಕೇವಲ ಮೂರು ಟೆಸ್ಟ್ ಪಂದ್ಯಗಳನ್ನು ಮಾತ್ರ ಗೆದ್ದುಕೊಂಡಿದೆ. 1969 ರಲ್ಲಿ ನಾಗ್ಪುರದಲ್ಲಿ ನಡೆದ ಟೆಸ್ಟ್​ ಪಂದ್ಯವನ್ನು ನ್ಯೂಝಿಲೆಂಡ್ 167 ರನ್​ಗಳಿಂದ ಗೆದ್ದುಕೊಂಡಿತ್ತು. ಆ ಬಳಿಕ ಗೆದ್ದಿದ್ದು 1988 ರಲ್ಲಿ. ಇದೀಗ ಮೂರನೇ ಬಾರಿ ಭಾರತ ತಂಡವನ್ನು ಮಣಿಸುವಲ್ಲಿ ಕಿವೀಸ್ ಬಳಗ ಯಶಸ್ವಿಯಾಗಿದೆ.

ಇದನ್ನೂ ಓದಿ: RCB ಉಳಿಸಿಕೊಂಡ ಆರು ಆಟಗಾರರು ಯಾರೆಲ್ಲಾ ಗೊತ್ತಾ?

ಸದ್ಯ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿರುವ ನ್ಯೂಝಿಲೆಂಡ್ ತಂಡವು ಮುಂದಿನ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದರೆ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಂದರೆ ಭಾರತದಲ್ಲಿ ಚೊಚ್ಚಲ ಬಾರಿ ಟೆಸ್ಟ್ ಸರಣಿ ಗೆಲ್ಲುವ ಅವಕಾಶ ನ್ಯೂಝಿಲೆಂಡ್ ತಂಡದ ಮುಂದಿದೆ. ಹೀಗಾಗಿ ಉಳಿದೆರಡು ಪಂದ್ಯಗಳಲ್ಲೂ ಕಿವೀಸ್ ಕಲಿಗಳಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.

ಐತಿಹಾಸಿಕ ಗೆಲುವು:

ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲೊಪ್ಪಿಕೊಂಡಿದೆ. ಈ ಪಂದ್ಯದ ಮೊದಲ ಇನಿಂಗ್ಸ್​ನಲ್ಲಿ ಭಾರತ ತಂಡ 46 ರನ್ ಕಲೆಹಾಕಿದರೆ, ನ್ಯೂಝಿಲೆಂಡ್ 402 ರನ್​ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್​ನಲ್ಲಿ ಟೀಮ್ ಇಂಡಿಯಾ 462 ರನ್ ಬಾರಿಸಿತು. ಆದರೆ ಮೊದಲ ಇನಿಂಗ್ಸ್​ನಲ್ಲಿ 356 ರನ್​ಗಳ ಮುನ್ನಡೆ ಹೊಂದಿದ್ದರಿಂದ ನ್ಯೂಝಿಲೆಂಡ್ ತಂಡವು ದ್ವಿತೀಯ ಇನಿಂಗ್ಸ್​ನಲ್ಲಿ ಕೇವಲ 107 ರನ್​ಗಳ ಗುರಿ ಪಡೆಯಿತು. 27.4 ಓವರ್​ಗಳಲ್ಲಿ ಈ ಗುರಿಯನ್ನು ಬೆನ್ನತ್ತುವ ಮೂಲಕ ನ್ಯೂಝಿಲೆಂಡ್ ತಂಡವು 8 ವಿಕೆಟ್​ಗಳ ಜಯ ಸಾಧಿಸಿ ಇತಿಹಾಸ ನಿರ್ಮಿಸಿದೆ.