IND vs NZ: ಓಡ್ಲಿಕ್ಕೆ ಆಗದಿದ್ದರೂ, ಓಡಿ ಹೋಗಿ ರನೌಟ್ ಆದ ರಿಷಭ್ ಪಂತ್

|

Updated on: Oct 26, 2024 | 2:14 PM

India vs New Zealand, 2nd Test: ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಮೂರು ಪಂದ್ಯಗಳ ಸರಣಿಯ ಮೊದಲ ಮ್ಯಾಚ್​ನಲ್ಲಿ ಕಿವೀಸ್ ಪಡೆ ಭರ್ಜರಿ ಜಯ ಸಾಧಿಸಿದೆ. ಇದೀಗ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆದ್ದುಕೊಂಡರೆ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿ ಗೆದ್ದ ಸಾಧನೆ ಮಾಡಲಿದೆ.

ಪುಣೆಯಲ್ಲಿ ನಡೆಯುತ್ತಿರುವ ನ್ಯೂಝಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ರನೌಟ್ ಆಗುವ ಮೂಲಕ ವಿಕೆಟ್ ಕೈ ಚೆಲ್ಲಿದ್ದಾರೆ. ಅದು ಕೂಡ ಓಡಬಾರದ ರನ್​ ಅನ್ನು ಕದಿಯುವ ಯತ್ನದಲ್ಲಿ ಎಂಬುದೇ ಅಚ್ಚರಿ. ಈ ಪಂದ್ಯದ ದ್ವಿತೀಯ ಇನಿಂಗ್ಸ್​ನಲ್ಲಿ ನ್ಯೂಝಿಲೆಂಡ್ ಭಾರತ ತಂಡಕ್ಕೆ 359 ರನ್​ಗಳ ಗುರಿ ನೀಡಿದೆ. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾಗೆ ಯಶಸ್ವಿ ಜೈಸ್ವಾಲ್ (77) ಉತ್ತಮ ಆರಂಭ ಒದಗಿಸಿದ್ದರು. ಆದರೆ ಭಾರತ ತಂಡವು ಮತ್ತೊಂದು ತುದಿಯಲ್ಲಿ ವಿಕೆಟ್ ಕೈ ಚೆಲ್ಲುತ್ತಾ ಸಾಗಿತು.

ಈ ವೇಳೆ 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ರಿಷಭ್ ಪಂತ್ ಶೂನ್ಯಕ್ಕೆ ರನೌಟ್ ಆದರು. 23ನೇ ಓವರ್​ನ 2ನೇ ಎಸೆತದಲ್ಲಿ ವಿರಾಟ್ ಕೊಹ್ಲಿ ಸಿಂಗಲ್ ತೆಗೆಯಲು ಯತ್ನಿಸಿದ್ದರು. ಆದರೆ ಅತ್ತ ಫೀಲ್ಡರ್​ ಬಳಿ ಚೆಂಡು ಸಾಗಿದ್ದರಿಂದ ಪಂತ್​ಗೆ ರನ್ ಕರೆಯನ್ನು ನಿರಾಕರಿಸಬಹುದಿತ್ತು.

ಆದರೆ ರಿಸ್ಕ್ ತೆಗೆದುಕೊಂಡ ರಿಷಭ್ ಪಂತ್ ರನ್​ಗಾಗಿ ಓಡಿದರು. ಅಷ್ಟರಲ್ಲಾಗಲೇ ಚೆಂಡು ವಿಕೆಟ್ ಕೀಪರ್ ಕೈ ಸೇರಿತು. ಈ ಮೂಲಕ ರಿಷಭ್ ಪಂತ್ ಸುಲಭವಾಗಿ ತಮ್ಮ ವಿಕೆಟ್ ಅನ್ನು ಕೈಚೆಲ್ಲಿದ್ದಾರೆ. ಅಂದಹಾಗೆ ರಿಷಭ್ ಪಂತ್ ಕಾಲು ನೋವಿನಿಂದ ಬಳಲುತ್ತಿದ್ದಾರೆ. ಮೊದಲ ಟೆಸ್ಟ್ ಪಂದ್ಯದ ವೇಳೆ ಚೆಂಡು ಕಾಲಿಗೆ ಬಡಿದಿದ್ದರಿಂದ ಅವರು ಕೆಲ ಇನಿಂಗ್ಸ್​ಗಳಲ್ಲಿ ವಿಕೆಟ್ ಕೀಪಿಂಗ್ ಮಾಡಿರಲಿಲ್ಲ. ಈ ನೋವಿನ ಸಮಸ್ಯೆಯ ಹೊರತಾಗಿಯೂ ಪಂತ್ ಇದೀಗ ರನ್​ ಓಡಲು ಯತ್ನಿಸಿ ವಿಕೆಟ್ ಕೆಚೆಲ್ಲಿರುವುದೇ ಅಚ್ಚರಿ.

 

Follow us on