ಪ್ಲೀಸ್ ನಂಬಿ…ಕಾಡಿಬೇಡಿ ರೋಹಿತ್ ಶರ್ಮಾರನ್ನು ಒಪ್ಪಿಸಿ ಔಟ್ ಮಾಡಿದ ಸರ್ಫರಾಝ್ ಖಾನ್

|

Updated on: Oct 24, 2024 | 1:19 PM

IND vs NZ: ಭಾರತದ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದಿರುವ ನ್ಯೂಝಿಲೆಂಡ್ ತಂಡವು ಬ್ಯಾಟಿಂಗ್ ಆಯ್ದುಕೊಂಡಿದೆ. ಅದರಂತೆ ಪ್ರಥಮ ಇನಿಂಗ್ಸ್ ಆರಂಭಿಸಿರುವ ನ್ಯೂಝಿಲೆಂಡ್ 38 ಓವರ್​ಗಳ ಮುಕ್ತಾಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 120 ರನ್ ಕಲೆಹಾಕಿದೆ.

ಪುಣೆಯಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಪಂದ್ಯದಲ್ಲಿ ಸ್ವಾರಸ್ಯಕರ ಘಟನೆಯೊಂದು ಕಂಡು ಬಂದಿದೆ. ಅದು ಕೂಡ ವಿಕೆಟ್​ ಪಡೆಯಲಿಗೋಸ್ಕರ ಎಂಬುದು ವಿಶೇಷ. ಅಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದು ಇನಿಂಗ್ಸ್ ಆರಂಭಿಸಿದ ನ್ಯೂಝಿಲೆಂಡ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಆದರೆ 8ನೇ ಓವರ್​ನಲ್ಲಿ ದಾಳಿಗಿಳಿದ ಅಶ್ವಿನ್, ಟಾಮ್ ಲ್ಯಾಥಮ್ (15) ವಿಕೆಟ್ ಪಡೆದು ಮೊದಲ ಯಶಸ್ಸು ತಂದುಕೊಟ್ಟರು.

ಇದಾದ ಬಳಿಕ ಡೆವೊನ್ ಕಾನ್ವೆ ಹಾಗೂ ವಿಲ್ ಯಂಗ್ ಉತ್ತಮ ಜೊತೆಯಾಟವಾಡಿದ್ದರು. ಆದರೆ ಅಶ್ವಿನ್ ಎಸೆದ ಇನಿಂಗ್ಸ್​ನ 24ನೇ ಓವರ್​​ನ ಕೊನೆಯ ಎಸೆತವು ವಿಲ್ ಯಂಗ್ ಅವರ ಲೆಗ್ ಸೈಡ್ ಮೂಲಕ ಚೆಂಡು ವಿಕೆಟ್ ಕೀಪರ್ ಕೈ ಸೇರಿತು. ರಿಷಭ್ ಪಂತ್ ಕ್ಯಾಚ್ ಹಿಡಿಯುತ್ತಿದ್ದಂತೆ ಸಿಲ್ಲಿ ಪಾಯಿಂಟ್​ನಲ್ಲಿದ್ದ ಸರ್ಫರಾಝ್ ಖಾನ್ ಔಟ್​ಗಾಗಿ ಅಪೀಲ್ ಮಾಡಿದರು. ಆದರೆ ಪಂತ್​ ಚೆಂಡು ಬ್ಯಾಟ್​ಗೆ ತಾಗಿಲ್ಲ ಎಂದು ಉತ್ತರಿಸಿದರು.

ಇದಾಗ್ಯೂ ಸರ್ಫರಾಝ್ ಖಾನ್ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲು ಸಿದ್ಧರಿರಲಿಲ್ಲ. ಮೊದಲಿಗೆ ಅಶ್ವಿನ್​ ಅವರ ಮನವೊಲಿಸಲು ಯತ್ನಿಸಿದರು.
ಇದೇ ವೇಳೆ ಆಗಮಿಸಿದ ರೋಹಿತ್ ಶರ್ಮಾ ಡಿಆರ್​ಎಸ್​ ತೆಗೆದುಕೊಳ್ಳಬೇಕಾ ಎಂದು ರಿಷಭ್ ಪಂತ್ ಅವರಲ್ಲಿ ಕೇಳಿದ್ದಾರೆ. ಆದರೆ ಪಂತ್​ ಕಡೆಯಿಂದ ಸಕರಾತ್ಮಕ ಉತ್ತರ ಸಿಗಲಿಲ್ಲ.  ಈ ವೇಳೆ ದಯವಿಟ್ಟು  ನನ್ನನ್ನು ನಂಬಿ ಎನ್ನುವ ಮೂಲಕ ಸರ್ಫರಾಝ್ ಖಾನ್ ರೋಹಿತ್ ಶರ್ಮಾ ಅವರ ಮನವೊಲಿಸಲು ಯತ್ನಿಸಿದರು.

ಇದೇ ವೇಳೆ ವಿರಾಟ್ ಕೊಹ್ಲಿ ಕೂಡ ಸರ್ಫರಾಝ್ ಖಾನ್​ಗೆ ಬೆಂಬಲ ಸೂಚಿಸಿ ರೋಹಿತ್ ಶರ್ಮಾ ಜೊತೆ ಡಿಆರ್​ಎಸ್ ತೆಗೆದುಕೊಳ್ಳುವಂತೆ ಸೂಚಿಸಿದರು. ಅದರಂತೆ ರೋಹಿತ್ ಶರ್ಮಾ ಮೂರನೇ ಅಂಪೈರ್​ಗೆ ಮನವಿ ಸಲ್ಲಿಸಿದರು. ಥರ್ಡ್​ ಅಂಪೈರ್ ಪರಿಶೀಲನೆ ವೇಳೆ ಚೆಂಡು ಬ್ಯಾಟ್ ಸವರಿ ವಿಕೆಟ್ ಕೀಪರ್ ಕೈ ಸೇರಿರುವುದು ಗೋಚರಿಸಿತು. ಇದರೊಂದಿಗೆ ವಿಲ್ ಯಂಗ್ ಇನಿಂಗ್ಸ್ ಕೊನೆಗೊಂಡಿತು.

ಅಂದರೆ ಸರ್ಫರಾಝ್ ಖಾನ್ ಅವರ ತದೇಕಚಿತ್ತದಿಂದಾಗಿ ಭಾರತ ತಂಡಕ್ಕೆ ಎರಡನೇ ವಿಕೆಟ್ ಲಭಿಸುವಂತಾಯಿತು. ಇದೀಗ ಯುವ ಆಟಗಾರ ಏಕಾಗ್ರತೆಯ ಫೀಲ್ಡಿಂಗ್​ಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಅಲ್ಲದೆ ರೋಹಿತ್ ಶರ್ಮಾರನ್ನು ಕಾಡಿಬೇಡಿ ಒಪ್ಪಿಸುತ್ತಿರುವ ಸರ್ಫರಾಝ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.