
ವೆಲ್ಲಿಂಗ್ಟನ್‌ನ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಝಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಡಿಆರ್‌ಎಸ್ (DRS) ತೀರ್ಪೊಂದು ಭಾರಿ ವಿವಾದಕ್ಕೆ ಕಾರಣವಾಗಿದೆ. ನ್ಯೂಝಿಲೆಂಡ್ ಬ್ಯಾಟರ್ ಗ್ಲೆನ್ ಫಿಲಿಪ್ಸ್ ವಿರುದ್ಧದ ಎಲ್‌ಬಿಡಬ್ಲ್ಯೂ ಮನವಿಯನ್ನು ಮೂರನೇ ಅಂಪೈರ್ ತಿರಸ್ಕರಿಸಿದ್ದಕ್ಕೆ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನ್ಯೂಝಿಲೆಂಡ್‌ನ ಮೊದಲ ಇನ್ನಿಂಗ್ಸ್‌ನ 31ನೇ ಓವರ್‌ನಲ್ಲಿ ಜಸ್ಪ್ರೀತ್ ಬುಮ್ರಾ ಎಸೆದ ಚೆಂಡು ಗ್ಲೆನ್ ಫಿಲಿಪ್ಸ್ ಅವರ ಪ್ಯಾಡ್‌ಗೆ ಬಡಿಯಿತು. ಭಾರತೀಯ ಆಟಗಾರರು ಬಲವಾಗಿ ಅಪೀಲ್ ಮಾಡಿದರೂ, ಮೈದಾನದಲ್ಲಿದ್ದ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್ ನಾಟೌಟ್ ತೀರ್ಪು ನೀಡಿದರು. ಚೆಂಡು ಸ್ವಲ್ಪ ಎತ್ತರದಲ್ಲಿ ಸಾಗಿದೆ ಎಂದು ಬುಮ್ರಾ ಅನುಮಾನ ವ್ಯಕ್ತಪಡಿಸಿದರೂ, ಬ್ಯಾಟ್‌ಗೆ ಚೆಂಡು ತಗುಲಿಲ್ಲ ಎಂಬ ದೃಢ ವಿಶ್ವಾಸದೊಂದಿಗೆ ನಾಯಕ ಶುಭ್‌ಮನ್ ಗಿಲ್ ರಿವ್ಯೂ ಮೊರೆ ಹೋದರು.
ಟಿವಿ ರಿಪ್ಲೇಯಲ್ಲಿ ಚೆಂಡು ಮತ್ತು ಬ್ಯಾಟ್ ನಡುವೆ ಸ್ಪಷ್ಟವಾದ ಅಂತರವಿರುವುದು ಕಂಡುಬಂದಿತ್ತು. ಆದರೆ, ಸ್ನಿಕೋಮೀಟರ್‌ನಲ್ಲಿ ಚೆಂಡು ಬ್ಯಾಟ್ ಪಕ್ಕ ಹಾದುಹೋಗುವಾಗ ಸಣ್ಣದೊಂದು ಶಬ್ದದ (ಸ್ಪೈಕ್) ಗುರುತು ದಾಖಲಾಯಿತು. ಇದನ್ನು ಆಧರಿಸಿದ ಮೂರನೇ ಅಂಪೈರ್ ಪಾಲ್ ರೀಫೆಲ್, ಚೆಂಡು ಬ್ಯಾಟ್‌ನ ಒಳಭಾಗಕ್ಕೆ ಸವರಿಕೊಂಡು ಪ್ಯಾಡ್‌ಗೆ ಬಡಿದಿದೆ ಎಂದು ತೀರ್ಮಾನಿಸಿ ನಾಟೌಟ್ ತೀರ್ಪನ್ನು ಎತ್ತಿಹಿಡಿದರು. ಇದರಿಂದ ಭಾರತ ತನ್ನ ಅಮೂಲ್ಯ ರಿವ್ಯೂ ಕಳೆದುಕೊಳ್ಳಬೇಕಾಯಿತು.
ದೊಡ್ಡ ಪರದೆಯ ಮೇಲೆ ನಾಟೌಟ್ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ತಾಳ್ಮೆ ಕಳೆದುಕೊಂಡ ಟೀಮ್ ಇಂಡಿಯಾ ನಾಯಕ ಶುಭ್‌ಮನ್ ಗಿಲ್, ನೇರವಾಗಿ ಅಂಪೈರ್ ರಿಚರ್ಡ್ ಇಲ್ಲಿಂಗ್‌ವರ್ತ್ ಬಳಿ ತೆರಳಿ ವಾಗ್ವಾದ ನಡೆಸಿದರು. ಬ್ಯಾಟ್ ಮತ್ತು ಚೆಂಡಿನ ನಡುವೆ ಸಾಕಷ್ಟು ಅಂತರವಿದ್ದರೂ ಔಟ್ ನೀಡದಿರುವುದಕ್ಕೆ ಅಸಮಾಧಾನ ಹೊರಹಾಕಿದ ಗಿಲ್, ಆ ಶಬ್ದ ಚೆಂಡು ಪ್ಯಾಡ್‌ಗೆ ಬಡಿದಾಗ ಬಂದಿದ್ದು ಎಂದು ಕೈಸನ್ನೆ ಮೂಲಕ ವಿವರಿಸಲು ಪ್ರಯತ್ನಿಸಿದರು. ಅಂಪೈರ್ ಸಮಾಧಾನಪಡಿಸಲು ಪ್ರಯತ್ನಿಸಿದರೂ, ಗಿಲ್ ತಲೆ ಅಲ್ಲಾಡಿಸುತ್ತಾ ನಿರಾಸೆಯಿಂದ ಮರಳಿದರು.
ಆರಂಭದಲ್ಲೇ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ನ್ಯೂಝಿಲೆಂಡ್ ತಂಡಕ್ಕೆ ಈ ಜೀವದಾನ ವರದಾನವಾಯಿತು. ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಗ್ಲೆನ್ ಫಿಲಿಪ್ಸ್, ಹೆನ್ರಿ ನಿಕೋಲ್ಸ್ ಜೊತೆಗೂಡಿ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಭಾರತ ಪ್ಲೇಯಿಂಗ್ 11: ಕೆಎಲ್ ರಾಹುಲ್ , ಯಶಸ್ವಿ ಜೈಸ್ವಾಲ್ , ದೇವದತ್ ಪಡಿಕ್ಕಲ್ , ಶುಭ್‌ಮನ್ ಗಿಲ್ (ನಾಯಕ) , ರಿಷಭ್ ಪಂತ್ (ವಿಕೆಟ್ ಕೀಪರ್) , ವಾಷಿಂಗ್ಟನ್ ಸುಂದರ್ , ಧ್ರುವ್ ಜುರೆಲ್ , ಆಕಾಶ್ ದೀಪ್ , ಅನ್ಶುಲ್ ಕಂಬೋಜ್ , ಜಸ್ಪ್ರೀತ್ ಬುಮ್ರಾ , ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: IPL 2027: ಐಪಿಎಲ್ನಿಂದ 5 ಆಟಗಾರರು ಔಟ್!
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ) , ಡೆವೊನ್ ಕಾನ್ವೇ , ಹೆನ್ರಿ ನಿಕೋಲ್ಸ್ , ರಚಿನ್ ರವೀಂದ್ರ , ಡ್ಯಾರಿಲ್ ಮಿಚೆಲ್ , ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್) , ಗ್ಲೆನ್ ಫಿಲಿಪ್ಸ್ , ನಾಥನ್ ಸ್ಮಿತ್ , ಕೈಲ್ ಜೇಮಿಸನ್ , ಮ್ಯಾಟ್ ಹೆನ್ರಿ.