ಐಸಿಸಿ ಟಿ20 ವಿಶ್ವಕಪ್ ಸೆಮಿ ಫೈನಲ್ನಲ್ಲಿ ಸೋತ ಬಳಿಕ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆದುಕೊಂಡು ಇದೀಗ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ತಂಡಗಳ ಮುಖಾಮುಖಿಗೆ ವೇದಿಕೆ ಸಜ್ಜಾಗಿದೆ. ಕಿವೀಸ್ ಪ್ರವಾಸ ಬೆಳೆಸಿರುವ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ನವೆಂಬರ್ 18 ರಂದು ವೆಲ್ಲಿಂಗ್ಟನ್ನ ಸ್ಕೈ ಸ್ಟೇಡಿಯಂನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನು ಆಡುವ ಮೂಲಕ ಸರಣಿಗೆ ಚಾಲನೆ ಸಿಗಲಿದೆ. ಈಗಾಗಲೇ ಕಿವೀಸ್ ನಾಡಿಗೆ ಟೀಮ್ ಇಂಡಿಯಾ ತಲುಪಿ ಅಭ್ಯಾಸ ಕೂಡ ಶುರು ಮಾಡಿದೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ (Virat Kohli), ಕೆಎಲ್ ರಾಹುಲ್ ರಂತಹ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಉತ್ಸಾಹಿ ತರುಣರಿಂದ ತಂಡ ಕೂಡಿದೆ. ಹಾರ್ದಿಕ್ ಪಾಂಡ್ಯ (Hardik Pandya) ಟಿ20 ತಂಡಕ್ಕೆ ಹಾಗೂ ಶಿಖರ್ ಧವನ್ ಏಕದಿನ ತಂಡಕ್ಕೆ ನಾಯಕರಾಗಿದ್ದಾರೆ.
ಆದರೆ, ಇಷ್ಟೆಲ್ಲ ರೋಚಕತೆ ಸೃಷ್ಟಿಸಿರುವ ಭಾರತ-ನ್ಯೂಜಿಲೆಂಡ್ ಸರಣಿಯ ಮೊದಲ ಪಂದ್ಯವೇ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ಯಾಕೆಂದರೆ ವೆಲ್ಲಿಂಗ್ಟನ್ನಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಹೀಗಾಗಿ ಮೊದಲ ಕದನ ಮಳೆಗೆ ಆಹುತಿಯಾಗುವ ಲಕ್ಷಣಗಳು ಗೋಚರಿಸುತ್ತಿದೆ. ವೆಲ್ಲಿಂಗ್ಟನ್ ಬಿಡುಗಡೆ ಮಾಡಿರುವ ಹವಾಮಾನ ವರದಿಯ ಪ್ರಕಾರ, ಪಂದ್ಯದ ದಿನ ಬೆಳಗ್ಗೆ ಶೇ. 98 ರಷ್ಟು ಮಳೆ ಆಗಲಿದೆ ಎಂದು ಹೇಳಿದೆ. ಮಧ್ಯಾಹ್ನದ ಹೊತ್ತಿಗೆ ಶೇ. 73, ಸಂಜೆ ವೇಳೆಗೆ ಶೇ. 60 ರಷ್ಟು ಮಳೆ ಮತ್ತು ಪಂದ್ಯ ಆರಂಭವಾಗುವ ಹೊತ್ತಿಗೆ ಶೇ. 54 ರಷ್ಟು ಮಳೆ ಸುರಿಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಮಧ್ಯಾಹ್ನ 12 ಗಂಟೆಗೆ ಶುರುವಾಗಲಿದೆ. ಅದೇ ನ್ಯೂಜಿಲೆಂಡ್ ಕಾಲಮಾನದ ಪ್ರಕಾರ ಪಂದ್ಯ 7:30 PM ಗೆ ಆರಂಭವಾಗುತ್ತದೆ. ಈ ಹೊತ್ತಿಗೆ ಶೇ. 54 ರಷ್ಟು ಮಳೆ ಬರುವ ಸಾಧ್ಯತೆ ಇದೆಯಂತೆ. ಹೀಗಾದಲ್ಲಿ ಪಂದ್ಯ ನಡೆಯುವುದು ಅನುಮಾನ. ತಾಪಮಾನ 15-19 ಡಿಗ್ರಿ ಸೆಲ್ಸಿಯಸ್ ನಷ್ಟು ಇರಲಿದೆಯಂತೆ. ವೆಲ್ಲಿಂಗ್ಟನ್ ಪಿಚ್ ಬ್ಯಾಟಿಂಗ್ ಸ್ನೇಹಿ ಆಗಿದ್ದು ಪಂದ್ಯ ಶುರುವಾದರೆ ದೊಡ್ಡ ಮೊತ್ತದ ಹೈವೋಲ್ಟೇಜ್ ಮ್ಯಾಚ್ ಆಗುವುದು ಖಚಿತ.
ಹೊಸ ತಂಡದೊಂದಿಗೆ ಆಡಲು ಕಾಯುತ್ತಿದ್ದೇನೆ: ಹಾರ್ದಿಕ್
ನ್ಯೂಜಿಲೆಂಡ್ಗೆ ತೆರಳಿದ ಬಳಿಕ ತಂಡದ ಸಿದ್ಧತೆಯ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ನಾಯಕ ಹಾರ್ದಿಕ್ ಪಾಂಡ್ಯ, ”ಹಿರಿಯ ಆಟಗಾರರು ಇಲ್ಲದಿದ್ದರೂ, ತಂಡದಲ್ಲಿರುವ ಯುವಕರು ಭಾರತಕ್ಕಾಗಿ ಹಲವು ಪಂದ್ಯಗಳನ್ನಾಡಿದ್ದಾರೆ. ಸಾಮರ್ಥ್ಯ ಸಾಬೀತಿಗೆ ಇದೊಂದು ಉತ್ತಮ ಅವಕಾಶ. ಹೊಸ ತಂಡದೊಂದಿಗೆ ಕಣಕ್ಕಿಳಿಯಲು ಕಾಯುತ್ತಿದ್ದೇನೆ,” ಎಂದು ಹೇಳಿದ್ದಾರೆ. ”2024ರಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್ ಪಂದ್ಯಾವಳಿಗೆ ಈ ಸರಣಿಯಿಂದಲೇ ಸಿದ್ಧತೆ, ಕಾರ್ಯಯೋಜನೆ ಆರಂಭಗೊಳ್ಳಲಿದೆ. ಟಿ20 ವಿಶ್ವಕಪ್ ಸಾಧನೆ ನಿರಾಸೆ ಮೂಡಿಸಿದೆ. ಆದರೆ ನಾವು ವೃತ್ತಿಪರ ಆಟಗಾರರು. ಇದನ್ನೆಲ್ಲ ನಿಭಾಯಿಸಿಕೊಂಡು ಮುಂದು ವರಿಯಲಿದ್ದೇವೆ,” ಎಂಬುದು ಹಾರ್ದಿಕ್ ಮಾತು.
ಕೇನ್ ವಿಲಿಯಮ್ಸನ್ ಏನಂದ್ರು?:
ಇದೇವೇಳೆ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಕೂಡ ಮಾತನಾಡಿದ್ದು ಭಾರತ ತಂಡವನ್ನು ಹಾಡಿಹೊಗಳಿದ್ದಾರೆ. ”ಭಾರತ ತಂಡ ಯಾವಾಗಲೂ ಬ್ಯುಸಿಯಾಗಿರುತ್ತದೆ. ಪ್ರತಿಯೊಬ್ಬರೂ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ ಎಂಬುದು ಸಹಜ. ಆದರೆ ಭಾರತ ತಂಡದಲ್ಲಿರುವ ಪ್ರತಿಭಾವಂತ ಆಟಗಾರರ ಪಡೆ ಬಹಳ ಬಲಿಷ್ಠವಾಗಿದೆ. ಈ ಆಟಗಾರರ ಪ್ರತಿಭೆಯನ್ನು ನಾನು ಕಂಡಿದ್ದೇನೆ. ಆ ತಂಡದಲ್ಲಿ ಸಾಕಷ್ಟು ಸೂಪರ್ ಸ್ಟಾರ್‌ಗಳಿದ್ದಾರೆ,” ಎಂದು ಹೇಳಿದ್ದಾರೆ.
ಟಿ20 ಸರಣಿಗೆ ಭಾರತ ತಂಡ: ಹಾರ್ದಿಕ್ ಪಾಂಡ್ಯ (ನಾಯಕ), ರಿಷಬ್ ಪಂತ್ (ಉಪನಾಯಕ/ ವಿಕೆಟ್‌ಕೀಪರ್), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್.
Published On - 11:31 am, Thu, 17 November 22