ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕು ಪಂದ್ಯಗಳ ಟಿ20 ಸರಣಿಯ ನಾಲ್ಕನೇ ಪಂದ್ಯವು ನವೆಂಬರ್ 14 ರಂದು ನಡೆಯಲಿದೆ. ಈ ಪಂದ್ಯ ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಮೈದಾನದಲ್ಲಿ ನಡೆಯಲಿದೆ. ಮೂರನೇ ಟಿ20 ಪಂದ್ಯದಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು 11 ರನ್‌ಗಳಿಂದ ಸೋಲಿಸುವ ಮೂಲಕ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಇದೀಗ ಭಾರತ ತಂಡ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಗೆದ್ದು ಸರಣಿ ಗೆಲ್ಲುವತ್ತ ದೃಷ್ಟಿ ಹಾಯಿಸಿದ್ದರೆ, ಇತ್ತ ದಕ್ಷಿಣ ಆಫ್ರಿಕಾ ತಂಡ ನಾಲ್ಕನೇ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸುವತ್ತ ಕಣ್ಣಿಟ್ಟಿದೆ. ಆದರೆ ಈ ಪಂದ್ಯಕ್ಕೂ ಮೊದಲು, ಜೋಹಾನ್ಸ್‌ಬರ್ಗ್ ಪಿಚ್ ಯಾರಿಗೆ ಹೆಚ್ಚು ಸಹಕಾರಿ? ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ ಎಂಬುದರ ವಿವರ ಇಲ್ಲಿದೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕಳೆದ 5 ಟಿ20 ಸರಣಿಯಲ್ಲಿ ಮೂರು ಡ್ರಾ ಆಗಿದೆ. ಕಳೆದ ವರ್ಷ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿತ್ತು. ಅಲ್ಲಿ 3 ಪಂದ್ಯಗಳ ಸರಣಿ 1-1ರಲ್ಲಿ ಸಮಬಲದಲ್ಲಿ ಕೊನೆಗೊಂಡಿತ್ತು. ಅದಕ್ಕೂ ಮುನ್ನ 2022ರಲ್ಲಿ ಭಾರತದಲ್ಲಿ ನಡೆದ ಸರಣಿ 2-2ರಲ್ಲಿ ಡ್ರಾದಲ್ಲಿ ಅಂತ್ಯಗೊಂಡಿತ್ತು. 2019-20ರಲ್ಲಿ ಭಾರತದಲ್ಲಿ ಸರಣಿ 1-1ರಲ್ಲಿ ಸಮಬಲದಲ್ಲಿತ್ತು. ಕಳೆದ 5 ಸರಣಿಗಳಲ್ಲಿ ಟೀಂ ಇಂಡಿಯಾ ಉಳಿದೆರಡು ಸರಣಿಗಳನ್ನು ಗೆದ್ದಿದ್ದು, ಇದೀಗ ಮೂರನೇಯ ಸರಣಿ ಮೇಲೆ ಭಾರತ ಕಣ್ಣಿಟ್ಟಿದೆ.
ಜೋಹಾನ್ಸ್‌ಬರ್ಗ್‌ನ ನ್ಯೂ ವಾಂಡರರ್ಸ್ ಮೈದಾನವು ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವಾಗಲಿದೆ. ಈ ಮೈದಾನದಲ್ಲಿ ಉತ್ತಮ ಬೌನ್ಸ್‌ನಿಂದಾಗಿ, ಚೆಂಡು ಸುಲಭವಾಗಿ ಬ್ಯಾಟ್‌ಗೆ ಬರುತ್ತದೆ. ಆದರೆ ಆರಂಭದಲ್ಲಿ ಪಿಚ್‌ನಲ್ಲಿನ ತೇವಾಂಶ ಇರುವ ಕಾರಣ ವೇಗದ ಬೌಲರ್‌ಗಳು ಪ್ರಯೋಜನ ಪಡೆಯುತ್ತಾರೆ. ಇನ್ನು ಈ ಮೈದಾನದಲ್ಲಿ ಇದುವರೆಗೆ ಒಟ್ಟು 33 ಪಂದ್ಯಗಳು ನಡೆದಿದ್ದು, ಇದರಲ್ಲಿ ಟಾಸ್ ಗೆದ್ದ ತಂಡ 13 ಪಂದ್ಯಗಳಲ್ಲಿ ಗೆದ್ದಿದ್ದರೆ, 20 ಪಂದ್ಯಗಳಲ್ಲಿ ಸೋಲು ಕಂಡಿದೆ.
ಹವಾಮಾನ ವರದಿ ಪ್ರಕಾರ ಶುಕ್ರವಾರ ಜೋಹಾನ್ಸ್‌ಬರ್ಗ್‌ನಲ್ಲಿ ಶೇ.70ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಗಳಿವೆ. ಇದಲ್ಲದೆ, ತೇವಾಂಶವು 55 ಪ್ರತಿಶತ ಇರಲಿದ್ದು, ಗಾಳಿಯು 14 ಕಿಲೋಮೀಟರ್ ವೇಗದಲ್ಲಿ ಬೀಸಲಿದೆ. ಪಂದ್ಯದ ವೇಳೆ ಮಳೆ ಬಂದರೆ ಬೌಲಿಂಗ್ ಮಾಡಲು ಕಷ್ಟವಾಗುವುದರ ಜತೆಗೆ ಬ್ಯಾಟ್ಸ್‌ಮನ್‌ಗಳಿಗೆ ರನ್ ಗಳಿಸಲು ಸ್ವಲ್ಪ ಕಷ್ಟವಾಗುತ್ತದೆ.
ಭಾರತ ಸಂಭಾವ್ಯ ತಂಡ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ರಮಣದೀಪ್ ಸಿಂಗ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ