IND vs SA: ದಾಖಲೆಯ ಶತಕ ಸಿಡಿಸಿದ ವಿರಾಟ್; ಆಫ್ರಿಕಾ ಗೆಲುವಿಗೆ 327 ರನ್ ಟಾರ್ಗೆಟ್

|

Updated on: Nov 05, 2023 | 9:07 PM

IND vs SA, ICC World Cup 2023: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಕಲೆಹಾಕಿದೆ. ಈ ಮೂಲಕ ಭಾರತ, ದಕ್ಷಿಣ ಆಫ್ರಿಕಾಕ್ಕೆ 327 ರನ್‌ಗಳ ಗೆಲುವಿನ ಗುರಿ ನಿಡಿದೆ.

IND vs SA: ದಾಖಲೆಯ ಶತಕ ಸಿಡಿಸಿದ ವಿರಾಟ್; ಆಫ್ರಿಕಾ ಗೆಲುವಿಗೆ 327 ರನ್ ಟಾರ್ಗೆಟ್
ಟೀಂ ಇಂಡಿಯಾ
Follow us on

ಭಾರತ ಮತ್ತು ದಕ್ಷಿಣ ಆಫ್ರಿಕಾ (India vs South Africa) ನಡುವೆ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್ (ICC World Cup 2023) ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 326 ರನ್ ಕಲೆಹಾಕಿದೆ. ಈ ಮೂಲಕ ಭಾರತ, ದಕ್ಷಿಣ ಆಫ್ರಿಕಾಕ್ಕೆ 327 ರನ್‌ಗಳ ಗೆಲುವಿನ ಗುರಿ ನಿಡಿದೆ. ಭಾರತದ ಪರ ವಿರಾಟ್ ಕೊಹ್ಲಿ (Virat Kohli) 101 ರನ್ ಗಳಿಸಿ ಅಜೇಯ ಶತಕ ದಾಖಲಿಸಿದರೆ, ಶ್ರೇಯಸ್ ಅಯ್ಯರ್ (Shreyas Iyer) 77 ರನ್‌ಗಳ ಪ್ರಮುಖ ಇನ್ನಿಂಗ್ಸ್‌ ಆಡಿದರು. ಹಾಗೆಯೇ ಆರಂಭದಲ್ಲಿ ನಾಯಕ ರೋಹಿತ್ ಶರ್ಮಾ ಕೂಡ 40 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರೆ, ಕೊನೆಯಲ್ಲಿ ಕೊಹ್ಲಿಗೆ ಸಾಥ್ ನೀಡಿದ ಜಡೇಜಾ 29 ರನ್​ಗಳ ಕೊಡುಗೆ ನೀಡಿದರು.

ಭಾರತಕ್ಕೆ ಉತ್ತಮ ಆರಂಭ

ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಉತ್ತಮ ಆರಂಭ ನೀಡಿದರು. ರೋಹಿತ್ ಆರಂಭದಿಂದಲೇ ಆಫ್ರಿಕನ್ ಬೌಲರ್‌ಗಳನ್ನು ಸರಿಯಾಗಿ ದಂಡಿಸಿದರು. ಹೀಗಾಗಿ ಮೊದಲ 5 ಓವರ್​ಗಳಲ್ಲೇ ಟೀಂ ಇಂಡಿಯಾ 50 ರನ್​ಗಳ ಗಡಿ ದಾಟಿತು. ಈ ನಡುವೆ 40 ರನ್ ಗಳಿಸಿ ಅರ್ಧಶತಕದಂಚಿನಲ್ಲಿದ್ದ ರೋಹಿತ್, ರಬಾಡಗೆ ಬಲಿಯಾದರು. ಆ ನಂತರ ಶುಭ್​ಮನ್ ಗಿಲ್ ಕೂಡ 23 ರನ್ ಗಳಿಸಿ ಕೇಶವ್​ ಮಹಾರಾಜ್​ಗೆ ವಿಕೆಟ್ ಒಪ್ಪಿಸಿದರು. ಈ ವಿಕೆಟ್ ಬಳಿಕ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಶತಕದ ಜೊತೆಯಾಟ ನಡೆಸಿದಲ್ಲದೆ ಇಬ್ಬರು ತಲಾ ಅರ್ಧಶತಕ ಸಿಡಿಸಿ ಮಿಂಚಿದರು. ಈ ನಡುವೆ ತಂಡವನ್ನು ದ್ವಿಶತಕದ ಹೊಸ್ತಿಲು ದಾಟಿಸಿದ ಈ ಜೋಡಿಯ ಜೊತೆಯಾಟ ಅಯ್ಯರ್ ವಿಕೆಟ್ ರೂಪದಲ್ಲಿ ಅಂತ್ಯಗೊಂಡಿತು. ಅಯ್ಯರ್ 87 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ ನೆರವಿನಿಂದ 77 ರನ್ ಬಾರಿಸಿ ಔಟಾದರು.

Virat Kohli Century: ಜನ್ಮ ದಿನದಂದು ಶತಕ ಸಿಡಿಸಿ ಸಚಿನ್ ದಾಖಲೆ ಸರಿಗಟ್ಟಿದ ಕಿಂಗ್ ಕೊಹ್ಲಿ..!

49ನೇ ಶತಕದ ಸಿಡಿಸಿದ ವಿರಾಟ್

ಆದರೆ ಅಯ್ಯರ್ ವಿಕೆಟ್ ನಂತರ ಬಂದ ಕೆ. ಎಲ್. ರಾಹುಲ್‌ಗೆ ವಿಶೇಷ ಏನನ್ನೂ ಮಾಡಲು ಸಾಧ್ಯವಾಗದೆ 8 ರನ್​ಗಳಿಗೆ ಪೆವಲಿಯನ್ ಸೇರಿಕೊಂಡರು. ಬಂದೊಡನೆ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸೂರ್ಯಕುಮಾರ್ ಯಾದವ್ 22 ರನ್‌ಗಳ ಕೊಡುಗೆ ನೀಡಿದರು. ಆ ಬಳಿಕ ಕೊನೆಯವರೆಗೂ ಮೈದಾನದಲ್ಲಿದ್ದ ಕೊಹ್ಲಿ 49ನೇ ಶತಕ ಪೂರೈಸಿ ಇತಿಹಾಸ ಸೃಷ್ಟಿಸಿದರು. ಇದರೊಂದಿಗೆ ಏಕದಿನದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಿದರು.

ಸಾಥ್ ನೀಡಿದ ಜಡೇಜಾ

ತಮ್ಮ ಇನ್ನಿಂಗ್ಸ್​ನಲ್ಲಿ 19 ಎಸೆತಗಳನ್ನು ಎದುರಿಸಿದ ವಿರಾಟ್ 10 ಬೌಂಡರಿ ಸಹಿತ ತಮ್ಮ ಶತಕ ಪೂರೈಸಿದರು. ಹಾಗೆಯೇ ಈ ಶತಕದೊಂದಿಗೆ ವಿರಾಟ್ ತವರಿನಲ್ಲಿ 6000 ಏಕದಿನ ರನ್ ಪೂರೈಸಿದರು. ಹಾಗೆಯೇ ಸಚಿನ್ ತೆಂಡೂಲ್ಕರ್ ನಂತರ ಈ ಸಾಧನೆ ಮಾಡಿದ ಎರಡನೇ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅಂತಿಮವಾಗಿ ವಿರಾಟ್ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಜಡೇಜಾ 29 ರನ್​ಗಳ ಸ್ಮರಣೀಯ ಕೊಡುಗೆ ನೀಡಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:22 pm, Sun, 5 November 23